ಕೆ.ಆರ್.ನಗರ: ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಚುನಾಯಿತ ಜನಪ್ರತಿನಿಧಿಗಳು ಎಷ್ಟು ಅವಶ್ಯಕವೋ ಅಧಿಕಾರಿಗಳೂ ಅಷ್ಟೇ ಅವಶ್ಯಕ. ಹಾಗಾಗಿ ಎಲ್ಲರೂ ತಮ್ಮ ಸ್ಥಾನಕ್ಕೆ ಗೌರವ ತರುವ ರೀತಿಯಲ್ಲಿ ಕೆಲಸ ಮಾಡಬೇಕು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪ್ರಕೃತಿ ವಿಕೋಪ ಮುಂಜಾಗ್ರತೆ ಕುರಿತಂತೆ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಶಾಸಕರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ನಾನು ಪ್ರಥಮ ಬಾರಿಗೆ ಶಾಸಕನಾದರೂ ಎರಡು ಬಾರಿ ಜಿಲ್ಲಾ ಪಂಚಾಯಿತಿ ಸದಸ್ಯನಾಗಿ ಜನರ ಸಮಸ್ಯೆಗಳನ್ನು ಸಾಕಷ್ಟು ಅರಿತಿದ್ದೇನೆ. ಪಕ್ಷಭೇದ ಮರೆತು ಕ್ಷೇತ್ರದ 2.17 ಲಕ್ಷ ಜನ ಒಂದೇ ಎಂದು ಭಾವಿಸಿ ಕೆಲಸ ಮಾಡಲಾಗುವುದು. ಅದೇ ರೀತಿ ನೀವೂ ಕೆಲಸ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಳೆ ಹಾನಿ ಕುರಿತಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕರು, ಕ್ಷೇತ್ರದಲ್ಲಿ ಮಳೆ ಅವಾಂತರ ಸಂಭವಿಸುವ ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲ ಅಧಿಕಾರಿಗಳು ಕ್ಷೇತ್ರದಲ್ಲೇ ಇರಬೇಕು. ಹಾನಿ ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ತೆರಳಿ ಅನನು ಕೂಲವಾಗದಂತೆ ಎಚ್ಚರ ವಹಿಸಿ ನೊಂದವರಿಗೆ ಸಾಂತ್ವನ ಹೇಳಬೇಕು. ಜತೆಗೆ ಪರಿಶೀಲನೆ ಮಾಡಿ ತಕ್ಷಣ ಪರಿಹಾರ ಕಲ್ಪಿಸಬೇಕು ಎಂದು ತಾಕೀತು ಮಾಡಿದರು.
ಮಳೆ ಹಾನಿ ಹಿನ್ನೆಲೆಯಲ್ಲಿ ಕಳೆದ ವರ್ಷ ತೆಗೆದುಕೊಂಡಿರುವ ಪರಿಹಾರ ಕಾರ್ಯ ಹಾಗೂ ಬಾಕಿ ಉಳಿದಿರುವ ಕೆಲಸಗಳನ್ನು ಶೀಘ್ರ ಮುಗಿಸಬೇಕು. ಅಲ್ಲದೆ ಸಾರ್ವಜನಿಕವಾಗಿ ಮಾಡುವ ಯಾವುದೇ ಕೆಲಸಗಳನ್ನು ನನ್ನ ಗಮನಕ್ಕೆ ತಾರದೆ ಮಾಡಬಾರದು. ಒಂದು ವೇಳೆ ಮಾಡಿದರೆ ನಂತರ ಅದರಿಂದಾಗುವ ತೊಂದರೆಗೆ ನೀವೇ ಸಂಪೂರ್ಣ ಜವಾಬ್ದಾರರು ಎಂದ ಅವರು, ಅಧಿಕಾರಿಗಳ ಬೇಜವಾಬ್ದಾರಿ ತನವನ್ನು ಸಹಿಸುವುದಿಲ್ಲ ಎಂದರು.
ಬಿಇಒಗೆ ತರಾಟೆ: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕೆ.ಆರ್.ನಗರ ಕ್ಷೇತ್ರ 9ನೇ ಸ್ಥಾನದಲ್ಲಿರುವುದು ತಲೆ ತಗ್ಗಿಸುವ ವಿಚಾರ ಎಂದು ಬಿಇಒ ಗಾಯತ್ರಿ ಅವರನ್ನು ತರಾಟೆ ತೆಗೆದುಕೊಂಡರು. ಸರ್ಕಾರ ಎಲ್ಲ ಸವಲತ್ತುಗಳನ್ನು ನೀಡಿದರೂ ಫಲಿತಾಂಶ ಕಳಪೆಯಾಗಿದೆ. ಇದಕ್ಕೆ ಕಾರಣ ಯಾರು ಎಂದು ಪ್ರಶ್ನಿಸಿದ ಶಾಸಕರು, ನಿಮ್ಮ ನಿಮ್ಮ ಕೆಲಸಗಳನ್ನು ನೀವು ಸರಿಯಾಗಿ ಮಾಡಬೇಕು. ಮುಂದಿನ ಶೈಕ್ಷಣಿಕ ಸಾಲಿನಲ್ಲಿ 3ನೇ ಸ್ಥಾನದೊಳಗಿರಬೇಕು. ಶೀಘ್ರ ಶಾಲೆಗಳು ಪ್ರಾರಂಭವಾಗಲಿದ್ದು, ಕಟ್ಟಡಗಳ ಸುರಕ್ಷತೆಗೆ ಆದ್ಯತೆ ನೀಡುವುದರ ಜತೆಗೆ ಅಗತ್ಯವಿರುವ ಅತಿಥಿ ಶಿಕ್ಷಕರ ನೇಮಕ ಕುರಿತು ಮಾಹಿತಿ ನೀಡಿ ಎಂದು ಸೂಚಿಸಿದರು.
ಮನೆಗಳ ನಿರ್ಮಾಣ ಪ್ರಾರಂಭಿಸಿ: ಪಟ್ಟಣದ ಮಧುವನಹಳ್ಳಿ ಬಡಾವಣೆಯಲ್ಲಿ ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ ನಿರ್ಮಾಣ ಮಾಡಲಾಗುತ್ತಿರುವ ಮನೆಗಳ ಕಾಮಗಾರಿಯನ್ನು ರಾಜಕೀಯ ಕಾರಣಕ್ಕೆ ನಿಲ್ಲಿಸಿ ಸ್ಥಳೀಯರಿಗೆ ತೊಂದರೆ ಕೊಡಲಾಗುತ್ತಿದೆ. ಕಾನೂನಿನಲ್ಲಿ ಇದಕ್ಕೆ ಅವಕಾಶ ಇದೆಯೇ ಎಂದು ಕೊಳೆಗೇರಿ ಅಭಿವೃದ್ಧಿ ಮಂಡಳಿ ಎಇಇ ತೇಜಶ್ರೀ ಅವರನ್ನು ಶಾಸಕರು ತರಾಟೆಗೆ ತೆಗೆದುಕೊಂಡರು.
ಸರ್ಕಾರದ ಅನುದಾನ ಬಡವರಿಗೆ ಅನುಕೂಲವಾಗಬೇಕು. ಕೆಲಸ ನಿಲ್ಲಿಸಿರುವ ಗುತ್ತಿಗೆದಾರನಿಗೆ ಕಾಮಗಾರಿ ಮುಗಿಯುವವರೆಗೆ ಬಿಲ್ ನೀಡದೆ ಕಪ್ಪು ಪಟ್ಟಿಗೆ ಸೇರಿಸಿ. ಸ್ಥಳೀಯವಾಗಿ ನಿವಾಸಿಗಳಿಗೆ ತೊಂದರೆ ಕೊಡುತ್ತಿರುವವರನ್ನು ದೂರವಿಟ್ಟು ನೀವೇ ಖುದ್ದು ಭೇಟಿ ನೀಡಿ ಕೆಲಸ ಪ್ರಾರಂಭಿಸಲು ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.
ಎಲ್ಲ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕರು, ಸಮಸ್ಯೆಗಳನ್ನು ಶೀಘ್ರ ಬಗೆಹರಿಸುವಂತೆ ಸೂಚನೆ ನೀಡಿದರು. ಅವಶ್ಯಕವಿರುವ ಅನುದಾನವನ್ನು ಸರ್ಕಾರದಿಂದ ಕೊಡಿಸುವ ಭರವಸೆ ನೀಡಿದರಲ್ಲದೆ, ಇದು ನನ್ನ ಪ್ರಥಮ ಸಭೆಯಾದರೂ ಸೂಕ್ತ ಕಾರಣ ನೀಡದೆ ಸಭೆಗೆ ಗೈರಾಗಿರುವ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ತಹಸೀಲ್ದಾರ್ ಎಂ.ಜಿ.ಸಂತೋಷ್ ಕುಮಾರ್ ಅವರಿಗೆ ಸೂಚನೆ ನೀಡಿದರು.
ಪ್ರತಿಯೊಬ್ಬರೂ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ದುಡಿಯಬೇಕಿದ್ದು, ಎಲ್ಲರೂ ಸೇರಿ ಉತ್ತಮ ಆಡಳಿತಕ್ಕೆ ಒತ್ತು ನೀಡಬೇಕು. ಇದಕ್ಕೆ ಅಧಿಕಾರಿಗಳ ಸಹಕಾರ ಅತ್ಯಗತ್ಯ ಎಂದರು.
ಸಭೆಯಲ್ಲಿ ತಾಪಂ ಇಒ ಮನು, ಸಾಲಿಗ್ರಾಮ ತಾಲೂಕು ತಹಸೀಲ್ದಾರ್ ತಿಮ್ಮಪ್ಪ, ಗ್ರೇಡ್- 2 ತಹಸೀಲ್ದಾರ್ ಮೋಹನ್‌ಕುಮಾರ್, ಸಿಪಿಐ ರೇವಣ್ಣ, ಹಾರಂಗಿ ಇಇ ಈರಣ್ಣ, ಪುರಸಭಾ ಮುಖ್ಯಾಧಿಕಾರಿ ಸುಧಾರಾಣಿ, ಟಿಎಚ್‌ಒ ಡಾ.ಕೆ.ಆರ್.ಮಹೇಂದ್ರಪ್ಪ, ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಎಂ.ಎಸ್.ನಾಗೇಂದ್ರ, ಜಿಪಂ ಎಇಇ ವಿನೂತ್ ಇತರರು ಇದ್ದರು.