ಕನಕಪುರ: ಏಷ್ಯಾ ಖಂಡದಲ್ಲಿಯೇ ಅತಿದೊಡ್ಡ ಲೋಕಸಭಾ ಕ್ಷೇತ್ರವಾಗಿದ್ದ ಕನಕಪುರ ಲೋಕಸಭಾ ಕ್ಷೇತ್ರವನ್ನು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವೆಂದು ಬದಲಾಯಿಸಿದಾಗ ಯಾವುದೇ ಪಕ್ಷ ಅಥವಾ ನಾಯಕರು ವಿರೋಧ ಮಾಡಲಿಲ್ಲ. ಆದರೀಗ ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಿದರೆ ನಿಮಗೇನು ನಷ್ಟ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಶನಿವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನಕಪುರ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಎಂ.ವಿ. ಚಂದ್ರಶೇಖರಮೂರ್ತಿ, ಸಿ.ಕೆ.ಜಾಫರ್‌ಷರೀಫ್, ಎಚ್.ಡಿ.ಕುಮಾರಸ್ವಾಮಿ ಸಂಸದರಾಗಿ ಆಯ್ಕೆಯಾಗಿದ್ದರು. ಅವರೆಲ್ಲರೂ ಕನಕಪುರ ಮಣ್ಣಿನ ವಾಸನೆಯಲ್ಲಿಯೇ ಗೆದ್ದು ಹೋಗಿ ರಾಮನಗರ ಜಿಲ್ಲೆ ಮಾಡಿದವರು. ನಾನೂ ಸಹ ಆ ಹೆಸರಿನಲ್ಲಿಯೇ ಸ್ಪರ್ಧಿಸಿದ್ದವನು. ಈಗ ಕನಕಪುರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿ ಜನತೆಯ ಸರ್ವತೋಮುಖ ಅಭಿವೃದ್ಧಿಗಾಗಿ ಮರುನಾಮಕರಣ ಮಾಡಿದ್ದೇವೆ. ಈ ವಿಚಾರದಲ್ಲಿ ರಾಜಕೀಯ ಮಾಡುವುದು ಬೇಡ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ನೇರವಾಗಿ ಡಿಕೆಶಿ ತಿವಿದರು.
ಕ್ಷೇತ್ರ ಪುನರ್‌ವಿಂಗಡನೆ ನಂತರ ನಾನು ನೂತನ ತಾಲೂಕಿನ ಶಾಸಕನಾಗಿ ಆಯ್ಕೆಯಾಗಿ ರಾಜ್ಯದ ಯಾವುದೇ ಮೂಲೆಯ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ನಡೆಯದ ಅಭಿವೃದ್ಧಿ ಮಾಡಿರುವುದು ಜನರ ಮುಂದಿದೆ. ಜಿಲ್ಲಾ ಪತ್ರಕರ್ತರ ಸಂಘಕ್ಕೆ ನಿವೇಶನ ಹಾಗೂ ಕಟ್ಟಡ ನಿರ್ಮಿಸಿಕೊಡುವಂತೆ ಮನವಿ ಸಲ್ಲಿಸಿದ್ದಾರೆ. ರಾಮನಗರ ಕ್ಷೇತ್ರವನ್ನು ಪ್ರತಿನಿಧಿಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ನಿವೇಶ ನೀಡಲು ಆಗಲಿಲ್ಲ. ಜಿಲ್ಲಾ ಮಟ್ಟದಲ್ಲಿ ಇಲ್ಲದ ಅಂಬೇಡ್ಕರ್ ಭವನ, ನಗರಸಭೆ ಕಚೇರಿ, ತಾಲೂಕು ಕಚೇರಿ, ನೂತನವಾಗಿ ತಲೆ ಎತ್ತುತ್ತಿರುವ ನ್ಯಾಯಾಲಯಗಳ ಸಂಕೀರ್ಣ ಹಾಗೂ ತಾಲೂಕು ಕೇಂದ್ರದಲ್ಲಿ ಕನಕ ಉದ್ಯಾನವನ ಸೇರಿ ಹತ್ತುಹಲವು ಅಭಿವೃದ್ಧಿ ಕೆಲಸಗಳನ್ನು ಮಾಡುವುದರೊಂದಿಗೆ ತಾಲೂಕಿನ ಜನತೆಯ ಆಶೋತ್ತರಗಳಿಗೆ ಸ್ಪಂದಿಸಲಾಗುತ್ತಿದೆ.
ಕಾಲ ಬದಲಾದಂತೆ ಬದಲಾಗಬೇಕು
ಈಗಿನ ಬೆಂ.ಗ್ರಾಮಾಂತರ ಲೋಕಸಭಾ ಸ್ಥಾನವು ಕನಕಪುರ ಲೋಕಸಭೆಯಾಗಿತ್ತು. ಇಲ್ಲಿಂದಲೇ ಜಾಫರ್ ಷರೀಫ್, ಎಚ್.ಡಿ.ದೇವೇಗೌಡ ಹಾಗೂ ಕುಮಾರಸ್ವಾಮಿ ಚುನಾಯಿತರಾಗಿ ಹೋಗಿದ್ದರು. ಕನಕಪುರ ಲೋಕಸಭಾ ಹೆಸರನ್ನು ಬದಲಿಸಿದಾಗ ಬೆಂಗಳೂರು ದಕ್ಷಿಣ ಜಿಲ್ಲೆ ರಚನೆಗೆ ಟೀಕೆ ಮಾಡುತ್ತಿರುವುದು ಅಪಹಾಸ್ಯ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗಲೇ ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಬೆಂಗಳೂರಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಕಾಲ ಬದಲಾದಂತೆ ಜಿಲ್ಲೆಯ ಅಭಿವೃದ್ಧಿಗಾಗಿ ಈಗ ರಾಮನಗರದ ಹೆಸರು ಬದಲಾವಣೆ ಮಾಡುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.
ಮಾಜಿ ಸಚಿವ ಮಹೇಶ್ ಮಾತನಾಡಿ, ಮಾಧ್ಯಮಗಳು ಸಾರ್ವಜನಿಕರ ಜನಾಭಿಪ್ರಾಯಗಳನ್ನು ಸಾಕಾರಗೊಳಿಸುವುದರೊಂದಿಗೆ ಹೊಸಹೊಸ ಚಿಂತನೆಗಳನ್ನು ಬೆಳೆಸಬೇಕು. ಯಾವುದೇ ಕಾರಣಕ್ಕೂ ನಕಾರಾತ್ಮಕ ಅಂಶಗಳಿಗೆ ಅವಕಾಶ ಕೊಡದೆ, ಜನರನ್ನು ದಿಕ್ಕು ತಪ್ಪಿಸದೆ, ಸ್ವಸ್ಥ ಸಮಾಜ ಕಟ್ಟುವ ಕೆಲಸ ಮಾಡಬೇಕು. ಇದು ಪ್ರತಿಯೊಂದು ಮಾಧ್ಯಮದ ಜವಾಬ್ದಾರಿ ಸಹ ಎಂದರು.
ಶ್ರೀ ಕ್ಷೇತ್ರ ಶಿವಾಲದಗಿರಿ ಅನ್ನದಾನೇಶ್ವರನಾಥ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಎಸ್.ರವಿ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಡಿ.ವಿಜಯದೇವ್, ಮಾಜಿ ಅಧ್ಯಕ್ಷ ನಾರಾಯಣಗೌಡ, ಆರ್‌ಇಎಸ್ ಸಂಸ್ಥೆ ಅಧ್ಯಕ್ಷ ಹೊನ್ನಿಗನಹಳ್ಳಿ ಶ್ರೀಕಂಠು, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಆರ್.ಕೃಷ್ಣಮೂರ್ತಿ, ತಾಲೂಕು ಗ್ಯಾರಂಟಿ ಸಮಿತಿ ಸದಸ್ಯ ಕೆ.ಎನ್.ದಿಲೀಪ್, ತಹಸೀಲ್ದಾರ್ ಸ್ಮಿತಾ ರಾಮು, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಗಿರೀಶ್, ಪದಾಧಿಕಾರಿಗಳು, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಸ್ತುವಾರಿ ಜಯರಾಂ, ಜಿಲ್ಲಾಧ್ಯಕ್ಷ ಬಿ.ವಿ.ಸೂರ್ಯಪ್ರಕಾಶ್, ಕಾರ್ಯದರ್ಶಿ ಟಿ.ಶಿವರಾಜು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಲಿಂಗೇಗೌಡ, ವಾರ್ತಾ ಇಲಾಖೆ ಅಧಿಕಾರಿ ರವಿರಾಜು, ಪ್ರಗತಿಪರ ಸಂಘಟನೆಗಳ ಅಧ್ಯಕ್ಷ ಕುಮಾರಸ್ವಾಮಿ, ಭಾಸ್ಕರ್, ಪ್ರಶಾಂತ್ ಇದ್ದರು.