ಜಿಲ್ಲೆ

ಸಮಗ್ರ ಅಭಿವೃದ್ಧಿ ಕಂಡ ತುಮಕೂರು: 7ನೇ ವಾರ್ಷಿಕೋತ್ಸವಕ್ಕಾಗಿ ಸ್ಮಾರ್ಟ್​ ಉತ್ಸವ

ತುಮಕೂರು: ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಸ್ಮಾರ್ಟ್​ಸಿಟಿ ಯೋಜನೆಯಿಂದಾಗಿ ನಗರವು ಸಮಗ್ರ ಅಭಿವೃದ್ಧಿ ಹೊಂದಿದೆ ಎಂದು ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್​ ಅಭಿಪ್ರಾಯಪಟ್ಟರು.

ನಗರದ ಆಲದಮರ ಪಾರ್ಕ್​ನಲ್ಲಿ ಸ್ಮಾರ್ಟ್​ಸಿಟಿ ಯೋಜನೆಯ 7ನೇ ವಾರ್ಷಿಕೋತ್ಸವದ ಅಂಗವಾಗಿ ಪ್ರೆಸ್​ಕ್ಲಬ್​ ತುಮಕೂರು ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ "ಸ್ಮಾರ್ಟ್​ ಉತ್ಸವ'ಕ್ಕೆ ಚಾಲನೆ ನೀಡಿ ಮಾತನಾಡಿದರು. ಸ್ಮಾರ್ಟ್​ಸಿಟಿ ಯೋಜನೆಗೆ ತುಮಕೂರು ಆಯ್ಕೆಯಾಗದೇ ಇದ್ದಿದ್ದರೆ ನಗರದ ಸ್ಥಿತಿ ಹೇಗಿರುತ್ತಿತ್ತು ಎಂಬುದನ್ನು ಊಹಿಸಲಸಾಧ್ಯ. ಆದರೆ, 2ನೇ ಹಂತದಲ್ಲಿ ಸ್ಮಾರ್ಟ್​ಸಿಟಿ ಯೋಜನೆಗೆ ತುಮಕೂರು ಆಯ್ಕೆಯಾದ ನಂತರ 900 ಕೋಟಿ ರೂ. ವೆಚ್ಚದಲ್ಲಿ 128 ಅಭಿವೃದ್ಧಿ ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ ಎಂದರು.

ಸ್ಮಾರ್ಟ್​ಸಿಟಿ ಯೋಜನೆ ಘೋಷಣೆಯಾಗಿ ಜೂ.25ಕ್ಕೆ 7 ವರ್ಷ ಸಂದಿದೆ. ಈ ಯೋಜನೆಗೆ ತುಮಕೂರು ಆಯ್ಕೆಯಾಗಿ 5 ವರ್ಷಗಳಾಗಿವೆ. ನಗರದಾದ್ಯಂತ ಸುಮಾರು 151 ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. 128 ಯೋಜನೆಗಳು ಪೂರ್ಣಗೊಂಡಿವೆ. 27 ಹೊಸ ಯೋಜನೆಗಳು ಟೆಂಡರ್​ ಹಂತದಲ್ಲಿವೆ. ಒಟ್ಟಾರೆ ನಗರದ ಚಿತ್ರಣವನ್ನು ಸ್ಮಾರ್ಟ್​ಗೊಳಿಸಲಾಗಿದೆ ಎಂದು ಹೇಳಿದರು.

ನಗರಕ್ಕೆ 7ನೇ ಸ್ಥಾನ: ಸ್ಮಾರ್ಟ್​ಸಿಟಿ ಯೋಜನೆ ಅನುಷ್ಠಾನದಲ್ಲಿ ದೇಶದಲ್ಲೇ ತುಮಕೂರು 7ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ನಂ.1 ಆಗಿದೆ. ಈ ಸ್ಥಾನವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಗುಣಮಟ್ಟದ ಅಭಿವೃದ್ಧಿ ಕಾರ್ಯಗಳಿಗೆ ಅಧಿಕಾರಿಗಳು ಶ್ರಮವಹಿಸಬೇಕಿದೆ ಎಂದು ಜ್ಯೋತಿಗಣೇಶ್​ ಸಲಹೆ ನೀಡಿದರು.

ಜನರೂ ಸ್ಮಾರ್ಟ್​ ಆಗಬೇಕು: ನಗರವು ಸ್ಮಾರ್ಟ್​ ಆಗಿ ಕಾಣಬೇಕಾದರೆ ನಾಗರಿಕರೂ ಸ್ಮಾರ್ಟ್​ ಆಗಬೇಕು. ನಗರದ ಸ್ವಚ್ಛತೆ, ಶುಚಿತ್ವದೊಂದಿಗೆ ಸುಂದರವಾಗಿರುವಂತೆ ನೋಡಿಕೊಳ್ಳುವ ಜವಾಬ್ದಾರಿ ಜನರ ಮೇಲಿದೆ. ನಗರಗಳಂತೆ ಹಳ್ಳಿಗಳು ಸ್ಮಾರ್ಟ್​ ಆಗಬೇಕೆಂಬುದು ಕೇಂದ್ರ ಸರ್ಕಾರದ ಅಭಿಲಾಷೆಯಾಗಿದೆ. ಹಾಗಾಗಿ, ಆದರ್ಶ ಗ್ರಾಮ ಯೋಜನೆಯನ್ನು ಜಾರಿಗೆ ತಂದು ಹಳ್ಳಿಗಳ ಸಮಗ್ರ ಅಭಿವೃದ್ಧಿಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಸಂಸದ ಜಿ.ಎಸ್​.ಬಸವರಾಜು ಹೇಳಿದರು.

ಸ್ಮಾರ್ಟ್​ಸಿಟಿ ಎಂಡಿ ರಂಗಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೇಯರ್​ ಕೃಷ್ಣಪ್ಪ, ಪಾಲಿಕೆ ಸದಸ್ಯರಾದ ಗಿರಿಜಾ, ಮಂಜುಳಾ, ರಮೇಶ್​, ಪ್ರೆಸ್​ ಕ್ಲಬ್​ ಉಪಾಧ್ಯಕ್ಷರಾದ ಶ್ರೀನಿವಾಸರೆಡ್ಡಿ, ಮಾರುತಿ ಗಂಗಹನುಮಯ್ಯ, ಖಜಾಂಚಿ ಸಂಗಮೇಶ್​, ಪ್ರಧಾನ ಕಾರ್ಯದರ್ಶಿ ಯೋಗೇಶ್​, ಸಂಟನಾ ಕಾರ್ಯದರ್ಶಿ ರಂಗನಾಥ್​ ಮರಡಿ ಮತ್ತಿತರರಿದ್ದರು.

ಆಕರ್ಷಕ ಸಾಂಸತಿಕ ಉತ್ಸವ: ಸ್ಮಾರ್ಟ್​ಸಿಟಿ 7ನೇ ವಾರ್ಷಿಕೋತ್ಸವ ಅಂಗವಾಗಿ ಆಯೋಜಿಸಿದ್ದ ಸಾರ್ಟ್​ ಉತ್ಸವವು ಸಾಂಸತಿಕ ಹಬ್ಬವಾಗಿ ಮಾರ್ಪಟ್ಟಿತ್ತು. ಆಲದಮರ ಪಾರ್ಕ್​ ಆವರಣದಲ್ಲಿ ಶ್ರೀ ರಾಜರಾಜೇಶ್ವರಿ ನೃತ್ಯ ಕಲಾಮಂದಿರ, ವಿದ್ಯಾನಿಧಿ ಕಾಲೇಜು, ಎಸ್​ಐಟಿ ಕಾಲೇಜು ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸತಿಕ ಕಾರ್ಯಕ್ರಮಗಳು ಮನಸೂರೆಗೊಂಡವು. ಇದಕ್ಕೂ ಮುನ್ನ ಎಸ್​.ಎಸ್​. ಪುರಂನ ರೈಲ್ವೆ ಪ್ಯಾರಲಲ್​ ರಸ್ತೆಯಲ್ಲಿ ಗಿಡಗಳನ್ನು ನೆಡಲಾಯಿತು. ಉಪ್ಪಾರಹಳ್ಳಿ ಮೆಲ್ಸೇತುವೆಯ ಸೌಂದರ್ಯೀಕರಣಕ್ಕಾಗಿ ಬಣ್ಣ ಬಳಿಯುವ ಕಾಮಗಾರಿಗೂ ಚಾಲನೆ ನೀಡಲಾಯಿತು.

ಪ್ರೆಸ್​ಕ್ಲಬ್​ ಕಾರ್ಯ ಪ್ರಶಂಸನೀಯ: ಸರ್ಕಾರಿ ಜೂನಿಯರ್​ ಕಾಲೇಜು ಮೈದಾನದಲ್ಲಿನ ಆಲದಮರ ಪಾರ್ಕ್​ನ್ನು 70ರಿಂದ 80 ಲಕ್ಷ ರೂ. ವೆಚ್ಚದಲ್ಲಿ ಸ್ಮಾರ್ಟ್​ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಲಾಗಿದೆ. 2 ವರ್ಷಗಳಿಂದ ನಿರ್ವಹಣೆ ಇಲ್ಲದೆ ಕುಡುಕರ ತಾಣವಾಗಿ ಮಾರ್ಪಟ್ಟಿತ್ತು. ಅದನ್ನು ಪ್ರೆಸ್​ಕ್ಲಬ್​ ದತ್ತು ಪಡೆದು ಸಮಾಜಮುಖಿ, ಪರಿಸರ ಕಾಳಜಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಇದೊಂದು ಉತ್ತಮ ಬೆಳವಣಿಗೆ ಎಂದು ಜ್ಯೋತಿಗಣೇಶ್​ ಮೆಚ್ಚುಗೆ ವ್ಯಕ್ತಪಡಿಸಿದರು.