ಹಾಸನ: ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಇಡೀ ರಾಜ್ಯದಲ್ಲೇ ಜಿಲ್ಲೆಯಲ್ಲಿ ಉತ್ತಮ ರೀತಿಯಲ್ಲಿ ಅನುಷ್ಠಾನಗೊಂಡಿವೆ. ಇದಕ್ಕಾಗಿ ಜಿಲ್ಲಾಡಳಿತಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದ ಹಾಕಿ ಮೈದಾನದಲ್ಲಿ ಗುರುವಾರ ನಡೆದ 78ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ನಮ್ಮದು ನುಡಿದಂತೆ ನಡೆಯುವ ಸರ್ಕಾರ. ಸಾಮಾಜಿಕ ನ್ಯಾಯ, ಸಮ ಸಮಾಜದ ನಿರ್ಮಾಣ ನಮ್ಮ ಆದ್ಯತೆ ಮತ್ತು ಬದ್ಧತೆ. ಎಲ್ಲರ ನೆರವಿನಿಂದ ರಾಜ್ಯವನ್ನು ಸವಾರ್ಂಗೀಣ ಅಭಿವೃದ್ಧಿಯತ್ತ ಕೊಂಡೊಯ್ಯುತ್ತೇವೆ. ದುಡಿಯುವ ಕೈಗಳನ್ನು ಬಲಪಡಿಸುತ್ತೇವೆ ಎಂದು ಅಭಯ ನೀಡಿದರು.
ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಗಳನ್ನು ಸರ್ಕಾರ ಈಡೇರಿಸಿದ್ದು, ಶಕ್ತಿ, ಗೃಹಜ್ಯೋತಿ, ಗೃಹಲಕ್ಷ್ಮೀ, ಅನ್ನ ಭಾಗ್ಯ, ಯುವನಿಧಿ ಎಲ್ಲಾ ಕಾರ್ಯಕ್ರಮಗಳನ್ನು ನಮ್ಮ ಜಿಲ್ಲೆಯಲ್ಲಿ ಬೇರೆ ಎಲ್ಲ ಜಿಲ್ಲೆಗಳಿಗಿಂತ ಮುಂಚೂಣಿಯಲ್ಲಿ ಜಾರಿ ಮಾಡಿದ್ದೇವೆ. ಈ ಕಾರ್ಯಕ್ರಮಗಳಲ್ಲಿ ಅನ್ನಭಾಗ್ಯ ನಮಗೆ ಅಚ್ಚುಮೆಚ್ಚಿನ ಕಾರ್ಯಕ್ರಮ. ನಮ್ಮ ರಾಜ್ಯದ ಯಾವುದೇ ಭಾಗದಲ್ಲಿ ಯಾರೂ ಕೂಡ ಹಸಿವಿನಿಂದ ಇರದಂತಹ ವಾತಾವರಣವನ್ನು ಸೃಷ್ಟಿ ಮಾಡಿದೆ ಎಂದು ತಿಳಿಸಿದರು.
ದೇವರ ಕೃಪೆಯಿಂದ ಎಲ್ಲಾ ಜಲಾಶಯಗಳು ತುಂಬಿರುವುದು ಸಂತೋಷದ ಸಂಗತಿ. ಮುಂದಿನ ದಿನಗಳಲ್ಲಿ ರೈತಾಪಿ ವರ್ಗದವರು ಬೇಸಾಯದ ಕೆಲಸದಲ್ಲಿ ನಿರತರಾಗಲು ಪೂರಕವಾಗಿ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಿ ಅವರನ್ನೇ ದೊಡ್ಡ ಆಸ್ತಿಯನ್ನಾಗಿ ಮಾಡಿ. ಮಕ್ಕಳ ಪ್ರತಿಭೆ ಗುರುತಿಸಿ ಅದಕ್ಕೆ ಉತ್ತೇಜನ ನೀಡಬೇಕು. ವಿದ್ಯೆ ಸಾಧಕರ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ. ವಿದ್ಯಾರ್ಥಿಗಳು ತಮ್ಮ ಮುಂದಿನ ಜೀವನದ ಬಗ್ಗೆ ಸ್ಪಷ್ಟ ಗುರಿ ಇಟ್ಟುಕೊಂಡು ಛಲದಿಂದ ಓದಿದರೆ ಅದರ ಪ್ರತಿಫಲ ಖಂಡಿತಾ ಸಿಗುತ್ತದೆ ಎಂದರು.
ಟಿಪ್ಪು ಸುಲ್ತಾನ್ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತನ್ನ ಇಬ್ಬರು ಮಕ್ಕಳನ್ನು ಒತ್ತೆಯಿಟ್ಟು ಹೋರಾಡಿದ್ದಾರೆ. ಅವರ ಬಗ್ಗೆ ಬೇರೆ ಬೇರೆ ಭಾವನೆ ಸಲ್ಲದು. ಬ್ರಿಟಿಷರ ವಿರುದ್ಧ ಟಿಪ್ಪು ಸುಲ್ತಾನ್ ಒಂದಲ್ಲ, ಎರಡಲ್ಲ ನಾಲ್ಕು ಯುದ್ಧ ಮಾಡಿದ್ದಾರೆ. ತಂದೆಯ ಆಣತಿಯಿಂದ ಆತನ ಇಬ್ಬರು ಸೆರೆವಾಸದಲ್ಲಿದ್ದರು. ಟಿಪ್ಪು ಸುಲ್ತಾನ್ ಸಹ ಸ್ವಾತಂತ್ರ್ಯ ಹೋರಾಟಗಾರ ಎಂದು ಬಣ್ಣಿಸಿದರು.
ಈ ಬಾರಿ ಸಹ ಹಾಸನಾಂಬ ಜಾತ್ರಾ ಮಹೋತ್ಸವವನ್ನು ಅದ್ಧೂರಿ ಹಾಗೂ ವಿಜೃಂಭಣೆಯಿಂದ ನಡೆಸಲಾಗುವುದು. ಇದಕ್ಕೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು. ಕಳೆದ ಬಾರಿ ಸುಮಾರು 14 ಲಕ್ಷ ಭಕ್ತರು ದೇವಿಯ ದರ್ಶನ ಪಡೆದಿದ್ದರು. ಸುಮಾರು 8 ಕೋಟಿ ರೂ. ಕಾಣಿಕೆ ರೂಪದಲ್ಲಿ ಆದಾಯ ಸಂಗ್ರಹವಾಗಿತ್ತು. ಈ ಸಲವೂ ಹಿಂದಿನ ವರ್ಷಕ್ಕಿಂತ ಚೆನ್ನಾಗಿ ಉತ್ಸವ ಆಚರಿಸೋಣ. ಪ್ರತಿಯೊಬ್ಬರೂ ಸಹಕರಿಸಿ ಎಂದು ವಿನಂತಿಸಿದರು.
ಸಾಹಿತ್ಯ, ಕಲೆ, ಸಂಸ್ಕೃತಿ ವಿಚಾರದಲ್ಲಿ ಹಾಸನದ ಹಿರಿಮೆಯನ್ನು ಕೊಂಡಾಡಿದ ಸಚಿವರು, ವಿಶೇಷವಾಗಿ ಯಶೋಧರ ದಾಸಪ್ಪನವರು ಮದ್ಯಪಾನ ನಿಷೇಧ ಮಾಡುವಂತಹ ಹೋರಾಟದಲ್ಲಿ ಅಗ್ರಗಣ್ಯರಾಗಿದ್ದರು. ನಮ್ಮ ಜಿಲ್ಲೆಯವರು ಎಂಬುದು ಹೆಮ್ಮೆಯ ವಿಷಯ. ಹಾಸನ ಜಿಲ್ಲೆಯ ಬಹಳಷ್ಟು ಮಹನೀಯರು ಸಮಾಜಕ್ಕೆ ತಮ್ಮನ್ನು ಅರ್ಪಣೆ ಮಾಡಿಕೊಂಡಿದ್ದಾರೆ ಎಂದರು.
ಇದೇ ವೇಳೆ ಕೃಷಿ, ಕಂದಾಯ, ಕೈ ಮಗ್ಗ ಮತ್ತು ಜವಳಿ ಇಲಾಖೆ, ತೋಟಗಾರಿಕೆ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಲೋಕೋಪಯೋಗಿ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಸರ್ಕಾರ ಮಾಡಿರುವ ಸಾಧನೆ ವಿವರಿಸಿದರು.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ವಸತಿ ಯೋಜನೆ, ಗ್ರಾಮೀಣ ಕುಡಿಯುವ ನೀರು ಯೋಜನೆಯಡಿ ಗ್ರಾಮೀಣ ಭಾಗಕ್ಕೆ ಶುದ್ಧ ಕುಡಿಯುವ ನೀರು ಪೂರೈಸಲು ಜಲಜೀವನ್ ಮಿಷನ್ ಅಡಿ 2841 ಕಾಮಗಾರಿಗಳಲ್ಲಿ 898 ಕಾಮಗಾರಿ ಪೂರ್ಣಗೊಳಿಸಲಾಗಿದೆ ಎಂದು ವಿವರಿಸಿದರು.
ಇದಕ್ಕೂ ಮುನ್ನ ಮಹಾತ್ಮಗಾಂಧಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಸಚಿವರು ಹಾಗೂ ಜನಪ್ರತಿನಿಧಿಗಳು, ಅಧಿಕಾರಿಗಳು ಪುಷ್ಪಾರ್ಚನೆ ಮಾಡಿದರು. ನಂತರ ಪೊಲೀಸ್, ಎನ್‌ಸಿಸಿ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನದ ವೇಳೆ ಗೌರವ ವಂದನೆ ಸ್ವೀಕರಿಸಿದರು.
ಈ ವೇಳೆ ಸಂಸದ ಶ್ರೇಯಸ್ ಎಂ.ಪಟೇಲ್, ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್, ಜಿಲ್ಲಾಧಿಕಾರಿ ಸಿ.ಸತ್ಯಭಾಮಾ, ಎಸ್ಪಿ ಮೊಹಮದ್ ಸುಜೀತಾ, ಜಿಪಂ ಸಿಇಒ ಪೂರ್ಣಿಮಾ, ಎಡಿಸಿ ಕೆ.ಟಿ.ಶಾಂತಲಾ, ಉಪ ವಿಭಾಗಾಧಿಕಾರಿ ಮಾರುತಿ, ತಹಸೀಲ್ದಾರ್ ಶ್ವೇತಾ ಇತರರು ಇದ್ದರು.
ಸರ್ಕಾರಕ್ಕೆ ಅತಿವೃಷ್ಟಿ ಹಾನಿ ವರದಿ:
ಜಿಲ್ಲೆಯಲ್ಲಿ ಜೋರು ಮಳೆಗೆ 3 ಜೀವಹಾನಿಯಾಗಿದ್ದು, ತಲಾ 15 ಲಕ್ಷ ರೂ. ಪರಿಹಾರ ನೀಡಲಾಗಿದೆ. ಒಟ್ಟು 4 ಜಾನುವಾರು ಸತ್ತಿದ್ದು, 1.32 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. 204 ಮನೆ ಪೂರ್ಣ ಹಾನಿಯಾಗಿವೆ. 530 ಮನೆ ಭಾಗಶಃ ಕುಸಿದಿವೆ. ಒಟ್ಟು 734 ಮನೆ ಹಾನಿಯಾಗಿದ್ದು, ಎನ್‌ಡಿಆರ್‌ಎಫ್ ಅಥವಾ ಎಸ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ಪರಿಹಾರ ಪಾವತಿಸಲಾಗಿದೆ ಎಂದು ಸಚಿವರು ವಿವರಿಸಿದರು.
1082.14 ಹೆಕ್ಟೇರ್ ಕೃಷಿ ಬೆಳೆ, 249.17 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಹಾನಿ ವಿವರವನ್ನು ಪೋರ್ಟಲ್‌ನಲ್ಲಿ ನಮೂದಿಸಲು ಅವಕಾಶ ಕಲ್ಪಿಸಿದ ನಂತರ ಪರಿಹಾರ ಪಾವತಿಗೆ ಕ್ರಮ ವಹಿಸಲಾಗುವುದು. ಜಿಲ್ಲೆಯಲ್ಲಿ 1119 ವಿದ್ಯುತ್ ಕಂಬ, 4 ಟ್ರಾನ್ಸ್‌ಫಾರ್ಮರ್, 5,463 ವಿದ್ಯುತ್ ತಂತಿ ಹಾನಿಯಾಗಿವೆ. ಎಲ್ಲವನ್ನೂ ಬದಲಾಯಿಸಲಾಗಿದೆ. ಹಾಗೆಯೇ ಲೋಕೋಪಯೋಗಿ, ಆರ್‌ಡಿಪಿಆರ್ ಇಲಾಖೆಯ ಒಟ್ಟು 526.56 ಕಿಮೀ ರಸ್ತೆ ಹಾಳಾಗಿದೆ. 31 ಸೇತುವೆ, 516 ಶಾಲೆ, 304 ಅಂಗನವಾಡಿ, 9 ಪಿಎಚ್‌ಸಿ ಹಾಗೂ 68 ಕೆರೆ ಹಾನಿಯಾಗಿದ್ದು, ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮನಸೂರೆಗೊಂಡ ಸಾಂಸ್ಕೃತಿಕ ಕಾರ್ಯಕ್ರಮ
ಸ್ವಾತಂತ್ರ್ಯೋತ್ಸವದ ಹಿನ್ನಲೆಯಲ್ಲಿ ವಿವಿಧ ಶಾಲೆಗಳ ನೂರಾರು ವಿದ್ಯಾರ್ಥಿಗಳು ಬ್ರಿಟಿಷರ ವಿರುದ್ಧ ಹೋರಾಡಿದ ವಿವಿಧ ಚಿತ್ರಣವನ್ನು ನೃತ್ಯ ರೂಪಕದ ನೀಡಿದ ಸಾಂಸ್ಕೃತಿಕ ಕಾರ್ಯಕ್ರಮ ಸಾರ್ವಜನಿಕರ ಮನಸೂರೆಗೊಂಡಿತು.
ಸಾಧಕರಿಗೆ ಸನ್ಮಾನ
ಸ್ವಾತಂತ್ರ್ಯ ಹೋರಾಟಗಾರರು, ಸಮಾಜಸೇವೆ, ಪತ್ರಿಕೋದ್ಯಮ, ಹೋಂ ಗಾರ್ಡ್ಸ್, ಅಗ್ನಿಶಾಮಕ ವಿಭಾಗ, ರಕ್ತದಾನಿಗಳು, ಕ್ರೀಡೆ, ಪೌರಕಾರ್ಮಿಕರು, ಪೋಲೀಸ್ ಇಲಾಖೆ, ಮಾಜಿ ಸೈನಿಕರು, ಆರೋಗ್ಯ, ಇಲಾಖೆ ಸ್ಕೌಟ್ಸ್ ಮತ್ತು ಗೈಡ್, ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಕಾಲೇಜು ಶಿಕ್ಷಣದಲ್ಲಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳು, ಭಾರತ ಸೇವಾದಳ ಹಾಗೂ ಈ ಬಾರಿ ಅಂಗಾಂಗ ದಾನಿಗಳ ಕುಟುಂಬದ ಸದಸ್ಯರನ್ನು ಇದೇ ಸಂರ್ಭದಲ್ಲಿ ಸನ್ಮಾನ ಮಾಡಲಾಯಿತು.
ಆಕರ್ಷಕ ಪಥ ಸಂಚಲನ
ಪಥಸಂಚಲನದಲ್ಲಿ ಭಾಗವಹಿಸಿದ್ದ ವಿವಿಧ ತಂಡಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ತಂಡಗಳಿಗೆ ಬಹುಮಾನ ನೀಡಲಾಯಿತು. ಮೂರು ವಿಭಾಗಗಳಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಮೂರು ಬಹುಮಾನ ನೀಡಲಾಯಿತು.