ಹುಲಸೂರು ತಾಲೂಕಿನ ಗಡಿಗೌಡಗಾಂವದಲ್ಲಿ ಭಾನುವಾರ ರಾತ್ರಿ ಆಯೋಜಿಸಿದ್ದ ಬಸವ ಜಯಂತಿ ಉದ್ಘಾಟನಾ ಸಮಾರಂಭದಲ್ಲಿ ಬಸವಕಲ್ಯಾಣದ ಅನುಭವ ಮಂಟಪ ಅಧ್ಯಕ್ಲ್ಷಷಡೋಜ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರು, ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿ, ಶಾಸಕ ಶರಣು ಸಲಗರ, ಗ್ರಾಪಂ ಅಧ್ಯಕ್ಷೆ ಚಿತ್ರಾಬಾಯಿ ಸಂಜುರೆಡ್ಡಿ, ಸುಲೋಚನಾ ಬಂಡೆ, ಬಾಬುರಾವ ಪಾಟೀಲ, ಧೂಳಪ್ಪ ಭರಮಶೆಟ್ಟೆ ಇತರರಿದ್ದರು. 
ಜಿಲ್ಲೆ

ಸಮ ಸಮಾಜದ ಕ್ರಾಂತಿಗೆ ನಾಂದಿ ಹಾಡಿದ ಬಸವಣ್ಣ

ಹುಲಸೂರು: ಬಸವ ಧರ್ಮ ಎಲ್ಲರನ್ನು ಅಪ್ಪಿಕೊಳ್ಳುವ, ಒಪ್ಪಿಕೊಳ್ಳುವ ಧರ್ಮವಾಗಿದೆ. ಬಸವಣ್ಣ ಅವರು ಆಧ್ಯಾತ್ಮಿಕ ಹಾಗೂ ಧಾರ್ಮಿಕವಾಗಿಯೂ ತಮ್ಮನ್ನು ತೊಡಗಿಸಿಕೊಂಡು ಸಮ ಸಮಾಜ ನಿರ್ಮಾಣಕ್ಕೆ ಹೋರಾಡಿದ್ದರು. ಇಂದಿನ ಯುವಜನಾಂಗ ವಿಶ್ವಗುರು ಬಸವೇಶ್ವರರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾಗಬೇಕು ಎಂದು ಬಸವಕಲ್ಯಾಣದ ಅನುಭವ ಮಂಟಪ ಅಧ್ಯಕ್ಷ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.

ಗಡಿಗೌಡಗಾಂವ ಗ್ರಾಮದಲ್ಲಿ ಭಾನುವಾರ ರಾತ್ರಿ ಆಯೋಜಿಸಿದ್ದ ಬಸವ ಜಯಂತಿ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಹನ್ನೆರಡನೇ ಶತಮಾನದಲ್ಲಿ ವಚನಗಳ ಮೂಲಕ ಸಮ ಸಮಾಜದ ಕ್ರಾಂತಿಗೆ ನಾಂದಿ ಹಾಡಿದ ಬಸವಣ್ಣ ಅವರು ನಮಗೆಲ್ಲರಿಗೂ ಮಾದರಿಯಾಗಿದ್ದಾರೆ ಎಂದರು.

ಬಸವಣ್ಣನವರ ತತ್ವ-ಚಿಂತನೆ ಹಳ್ಳಿ ಹಳ್ಳಿಗಳಲ್ಲಿ ನೆಲೆಯೂರುವ ಅಗತ್ಯವಿದೆ. ಶರಣರ ಸಾಮರಸ್ಯದ ಪರಿಕಲ್ಪನೆ ಹಳ್ಳಿಗಳಲ್ಲಿ ಇಂದಿಗೂ ಜೀವಂತವಾಗಿದೆ. ಹಳ್ಳಿಗರ ಮನಸ್ಸು ಒಡೆಯುವ ಹಲವು ಅಂಶಗಳನ್ನು ಶರಣರ ತತ್ವಾದರ್ಶಗಳ ಅಧ್ಯಯನದಿಂದ ಎದುರಿಸಲು ಸಾಧ್ಯ ಎಂದರು.

ಶಾಸಕ ಶರಣು ಸಲಗರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿಶ್ವಗುರು ಬಸವಣ್ಣ ಅವರು ೧೨ನೇ ಶತಮಾನದಲ್ಲಿ ಸಮಾಜದಲ್ಲಿ ಬೇರೂರಿದ್ದ ಮೂಢನಂಬಿಕೆ, ಕಂದಾಚಾರಗಳನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಜೀವನದುದ್ದಕ್ಕೂ ಹೋರಾಟ ನಡೆಸಿದ ಶ್ರೇಷ್ಠ ಶರಣರಾಗಿದ್ದಾರೆ. ವೈಯಕ್ತಿಕ ಹಾಗೂ ಸಾಮಾಜಿಕವಾಗಿ ಅವರಷ್ಟು ಪರಿಶುದ್ಧ ಹಾಗೂ ಪ್ರಾಮಾಣಿಕ ವ್ಯಕ್ತಿತ್ವ ಎಲ್ಲಿಯೂ ಕಾಣಲು ಸಾಧ್ಯವಿಲ್ಲ. ಭಾರತದ ಬಹುದೊಡ್ಡ ತತ್ವಜ್ಞಾನಿ, ಸಾಂಸ್ಕೃತಿಕ ನಾಯಕ ಎಂದು ಕರೆಯಿಸಿಕೊಳ್ಳುವ ಘನತೆ ಬಸವಣ್ಣನವರು ಹೊಂದಿದ್ದಾರೆ ಎಂದು ಹೇಳಿದರು.

ಬಸವಕಲ್ಯಾಣ ಬಸವ ಮಹಾಮನೆಯ ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿ, ಬಸವ ಕೇಂದ್ರದ ತಾಲೂಕು ಅಧ್ಯಕ್ಷ ಆಕಾಶ ಖಂಡಾಳೆ, ತಾಪಂ ಮಾಜಿ ಸದಸ್ಯ ಶಬ್ಬೀರ್ ಪಾಶಾ ಮುಜಾವರ್ ಮಾತನಾಡಿದರು. ಬಸವ ದಳದ ಪ್ರಮುಖ ಅನಿಲಕುಮಾರ ತಾಂಬೋಳೆ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸೈನಿಕ ಮಹಾರುದ್ರಪ್ಪ ಮಂಠಾಳೆ ಗುರು ಬಸವ ಪೂಜೆ ನೆರವೇರಿಸಿದರು.

ಗ್ರಾಪಂ ಅಧ್ಯಕ್ಷೆ ಚಿತ್ರಾಬಾಯಿ ಸಂಜುರೆಡ್ಡಿ, ಗ್ರಾಪಂ ಉಪಾಧ್ಯಕ್ಷ ಸಂತೋಷ ಫುಲೆ, ಪಿಡಿಒ ಸುಲೋಚನಾ ಬಂಡೆ, ಪ್ರಮುಖರಾದ ಬಾಬುರಾವ ಪಾಟೀಲ, ಧೂಳಪ್ಪ ಭರಮಶೆಟ್ಟೆ, ಧೂಳಪ್ಪ ಹಾಲಪ್ಪ, ಗ್ರಾಪಂ ಸದಸ್ಯರಾದ ದೀಪಕ ಪಾಟೀಲ, ಸಂತೋಷ ಭರಮಶೆಟ್ಟೆ, ಜಗನ್ನಾಥ ಖ್ಯಾಡೆ, ಸಾಹಿತಿ ಡಾ.ಭೀಮಾಶಂಕರ ಬಿರಾದಾರ, ಸತೀಶ ಹಿರೇಮಠ, ಮಹಾರುದ್ರ ಭರಮಶೆಟ್ಟಿ ಇತರರಿದ್ದರು.

ದೇವಾನಂದ ಕುರದೆ ಸ್ವಾಗತಿಸಿದರು. ಸಂಗಮೇಶ ನಿರೂಪಣೆ ಮಾಡಿದರು. ಸಂತೋಷ ತಾಂಬೋಳೆ ವಂದಿಸಿದರು. ಗ್ರಾಮದ ಐವತ್ತಕ್ಕೂ ಹೆಚ್ಚು ಪ್ರಗತಿಪರ ರೈತರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

ಭವ್ಯ ಮೆರವಣಿಗೆ: ಬಸವ ಜಯಂತಿ ಪ್ರಯುಕ್ತ ಬೆಳಗ್ಗೆ ೮ಕ್ಕೆ ಬಸವೇಶ್ವರ ವೃತ್ತದಿಂದ ಹಸಿರು ತೋರಣಗಳಿಂದ ಸಿಂಗರಿಸಿದ ವಾಹನದಲ್ಲಿ ಬಸವಣ್ಣನವರ ಭಾವಚಿತ್ರ ಮತ್ತು ಪ್ರತಿಮೆಯ ಅದ್ದೂರಿ ಮೆರವಣಿಗೆಗೆ ಗ್ರಾಪಂ ಸದಸ್ಯರಾದ ದೀಪಕ ಪಾಟೀಲ ಮತ್ತು ಸಂತೋಷ ಭರಮಶೆಟ್ಟೆ ಚಾಲನೆ ನೀಡಿದರು. ೪೦ ಎತ್ತಿನ ಬಂಡಿಗಳು ನೋಡುಗರ ಗಮನ ಸೆಳೆಯಿತು.