ಕಡೂರು: ಕಾಯಕಕ್ಕೆ ಹೆಚ್ಚು ಮನ್ನಣೆ ನೀಡಿದ ನುಲಿಯ ಚಂದಯ್ಯ ಇಂದಿಗೂ ಸಮಾಜದ ಎಲ್ಲರಿಗೂ ದಾರಿ ದೀಪವಾಗಿದ್ದಾರೆ ಎಂದು ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ತಿಳಿಸಿದರು.
ತಾಲೂಕು ಕಚೇರಿಯಲ್ಲಿ ಶನಿವಾರ ನಡೆದ ಶಿವಶರಣ ನುಲಿಯ ಚಂದಯ್ಯ ಅವರ 918ನೇ ಜಯಂತ್ಯುತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿ, ನುಲಿಯ ಚಂದಯ್ಯ ಇಂದಿಗೂ ಪ್ರಸ್ತುತವಾಗಿ ಉಳಿದಿದ್ದಾರೆಂದರೆ ಅವರ ಆದರ್ಶವೇ ಕಾರಣ. ಅವರಂತೆ ಕಾಯಕ ಮತ್ತು ವಿದ್ಯಾ ದಾಸೋಹ ಇಂದಿನ ಪೀಳಿಗೆಗೆ ದಾರಿದೀಪದಂತಿದೆ. ಅವರ ಆದರ್ಶವನ್ನು ಪಾಲಿಸಿ ನಡೆದರೆ ಜಯಂತಿ ಆಚರಣೆಗಳು ಸಾರ್ಥಕವಾಗಲಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ನಂದಿ ಹೊಸಹಳ್ಳಿ ಮಠದ ಶ್ರೀ ವೃಷಭೇಂದ್ರ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ವಿಶ್ವಗುರು ಬಸವಣ್ಣನವರ ಅನುಭವ ಮಂಟಪ ಜಾತಿ, ಧರ್ಮದ ಎಲ್ಲೆ ಮೀರಿ ಜಗತ್ತಿಗೆ ಸಮಾನತೆಯ ಪ್ರಾಮುಖ್ಯತೆ ಸಾರಿದರು. ಅವರ ಸಮಕಾಲಿನರಾಗಿ ನುಲಿಯ ಚಂದಯ್ಯನವರು ಸಮ ಸಮಾಜ ನಿರ್ಮಾಣಕ್ಕೆ ಪ್ರಾಮುಖ್ಯತೆ ನೀಡಿದ್ದರು. ಸಮಾಜದ ಜನರು ಅಧಿಕಾರಕ್ಕಾಗಿ ಹಪಾಹಪಿಸದೆ ಸಿಕ್ಕ ಅವಕಾಶ ಬಳಸಿಕೊಂಡು ಬಡವರು, ಹಿಂದುಳಿದವರ ಏಳಿಗೆಗಾಗಿ ದುಡಿದರೆ ನುಲಿಯ ಚಂದಯ್ಯ ಅವರಿಗೆ ಗೌರವ ಸೂಚಿಸಿದಂತಾಗುತ್ತದೆ ಎಂದರು.
ಕುಳುವ ಸಮಾಜದ ತಾಲೂಕು ಅಧ್ಯಕ್ಷ ಎ.ಜಿ.ಗಿರೀಶ್ ಮಾತನಾಡಿ, ಬಸವಣ್ಣನವರ ವ್ಯಕ್ತಿತ್ವ, ಆದರ್ಶಕ್ಕೆ ಮಾರುಹೋಗಿ ಅವರ ಅನುಭವ ಮಂಟಪದಲ್ಲಿ ಹಲವಾರು ಶರಣರು ಸಮಾಜ ಸುಧಾರಣೆಯಲ್ಲಿ ಮತ್ತು ಅಧ್ಯಾತ್ಮ ಪ್ರಚಾರದಲ್ಲಿ ತೊಡಗಿದರು. ಅವರಲ್ಲಿ ನುಲಿಯ ಚಂದಯ್ಯ ಅವರು ಪ್ರಮುಖರು. ಕಾಯಕ ನಿಷ್ಠೆಗಿಂತ ಬೇರೊಂದಿಲ್ಲ. ಕಾಯಕ ಮುಂದೆ ದೇವನೂ ತೃಣ ಎಂದು ಸಾರಿ ಶಿವನನ್ನೂ ಕಾಯಕದಲ್ಲಿ ತೊಡಗಿಸಿದ ಕೀರ್ತಿ ಚಂದಯ್ಯ ಅವರು. ಕಾಯಕವೆಂದರೆ ಹಣ ಮಾಡುವ ಕಾರ್ಯವಲ್ಲ, ಸಮಾಜವನ್ನು ತಿದ್ದುವ ಕಾಯಕವೇ ಶ್ರೇಷ್ಠ ಎಂದು ಸಾರಿದ ಅವರ ದಾರಿಯಲ್ಲಿ ನಾವೆಲ್ಲರೂ ಸಾಗಬೇಕಿದೆ ಎಂದರು.
ಜಿಲ್ಲಾ ಗೌರವಾಧ್ಯಕ್ಷ ಟಿ.ಮೂರ್ತಿ, ತಾಲೂಕು ಪ್ರಧಾನ ಕಾರ್ಯದರ್ಶಿ ನವೀನ್, ಅಲೆಮಾರಿ ಅಭಿವೃದ್ಧಿ ನಿಗಮದ ಅನುಷ್ಠಾನ ಸಮಿತಿ ಸದಸ್ಯರಾದ ಮಲ್ಲಿದೇವಿಹಳ್ಳಿ ಶ್ರೀನಿವಾಸ್, ಮಂಜುನಾಥ್, ಯಗಟಿ ವಿಶ್ವನಾಥ್, ಜ್ಯೋತಿ, ಮುಖಂಡರಾದ ಹೋರಿತಿಮ್ಮನಹಳ್ಳಿ ಶ್ರೀನಿವಾಸ್, ರಮೇಶ್, ಅಣ್ಣಯ್ಯ, ದೇವರಾಜು, ಧರಣಿಕುಮಾರ್, ತಾಲೂಕು ಆಡಳಿತದ ಅಧಿಕಾರಿಗಳು ಇದ್ದರು.