ಅರಸೀಕೆರೆ: ಸಮ ಸಮಾಜದ ನಿರ್ಮಾಣ ಹನ್ನೆರಡನೇ ಶತಮಾನದ ಬಸವಾದಿ ಶಿವಶರಣ ಆಶಯವಾಗಿತ್ತು ಎಂದು ಸಾಣೇಹಳ್ಳಿ ಶ್ರೀತರಳಬಾಳು ಜಗದ್ಗುರು ಶಾಖಾ ಮಠದ ಡಾ.ಶ್ರೀಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಜಾಜೂರು ಗ್ರಾಮದಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ‘ಮತ್ತೆ ಕಲ್ಯಾಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ ದರು. ಶತಮಾನಗಳ ಹಿಂದೆ ನಡೆಯುತ್ತಿದ್ದ ಶೋಷಣೆ ತಪ್ಪಿಸಲು ಬಸವಣ್ಣನವರು ಅನುಭವ ಮಂಟಪದಲ್ಲಿ ಪುರುಷರೊಂದಿಗೆ ಮಹಿ ಳೆಗೂ ಸಮಾನತೆಯ ಪ್ರಾತಿನಿಧ್ಯ ನೀಡಿದ್ದರು. ನಡುವೆ ಸುಳಿವಾತ್ಮ ಹೆಣ್ಣೂ ಅಲ್ಲ, ಗಂಡೂ ಅಲ್ಲವೆಂದ ಅಕ್ಕಮಹಾದೇವಿ, ಗೊಗ್ಗವ್ವೆ, ಕಸ ಗುಡಿಸುವ ಸತ್ಯಕ್ಕ, ಅಕ್ಕಮ್ಮ ನಮಗೆ ಪ್ರೇರಕ ಶಕ್ತಿಯಾಗಿದ್ದಾರೆ ಎಂದು ಬಣ್ಣಿಸಿದರು.
ತಿಪಟೂರಿನ ಷಡಕ್ಷರ ಮಠದ ಶ್ರೀರುದ್ರಮುನಿ ಸ್ವಾಮೀಜಿ ಮಾತನಾಡಿ, ಶರಣರು ‘ಮಂಡೆ ಮಾಸಿದೊಡೆ ಮಜ್ಜನವ ಮಾಡುವುದು, ವಸ್ತ್ರ ಮಾಸಿದೊಡೆ ಮಡಿವಾಳನಿಗಿಕ್ಕುವುದು, ಮನದ ಮೈಲಿಗೆಯಾದರೆ ಶಿವಶರಣರ ಅನುಭಾವ ಮಾಡುವುದು ಎಂದರು. ಅದರಂತೆ ಕಲ್ಯಾಣದಲ್ಲಿ ಅನುಭವ ಮಂಟಪವನ್ನು ಸ್ಥಾಪಿಸಿದರು. ಇಂದು ಮಲಿನಗೊಂಡಿರುವ ಮನಕ್ಕೆ ‘ಮತ್ತೆ ಕಲ್ಯಾಣದ ಮೂಲಕ ಅಂದಿನ ಅನುಭವಮಂಟಪವನ್ನು ಇಂದು ಮತ್ತೆ ನಮ್ಮೂರಿಗೆ ಪಂಡಿತಾರಾಧ್ಯ ಶ್ರೀಗಳು ತಂದಿದ್ದಾರೆ. ಜನರನ್ನು ಜಾಗೃತಗೊಳಿಸುವ ಕೆಲಸ ಕಾರ್ಯ ವನ್ನು ಪಂಡಿತಾರಾಧ್ಯ ಶ್ರೀಗಳು ಮಾಡುತ್ತಿದ್ದಾರೆ. ಶ್ರೀಗಳು ನಡೆದಾಡುವ ವಿಶ್ವವಿದ್ಯಾಲಯವಿದ್ದಂತೆ. ‘ಜಗತ್ತನ್ನು ಬಿಡುವಾಗ ನಾವು ನಗುತ್ತಿರಬೇಕು; ಜಗವೆಲ್ಲ ಅಳುತ್ತಿರಬೇಕು. ಹಾಗೆ ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕೆಂದರೆ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡಬೇಕು. ಆಗ ಸಾವೂ ಸಾರ್ಥಕವಾಗುವುದು. ಅಂತಹ ಸಾರ್ಥಕ ಬದುಕು ಬದುಕುವುದು ಹೇಗೆ ಎನ್ನುವುದನ್ನು ಪೂಜ್ಯರು ಈ ಕಾರ್ಯಕ್ರಮದ ಮೂಲಕ ತೋರಿಸಿಕೊಡುತ್ತಿದ್ದಾರೆ. ಇಂಥ ಪೂಜ್ಯರು ನೂರಾರು ವರ್ಷ ಬದುಕಬೇಕು. ಈ ನಿಟ್ಟಿನಲ್ಲಿ ಆಯುಷ್ಯಕ್ಕಿಂತ ಆರೋಗ್ಯ ಮುಖ್ಯವಾಗಬೇಕು ಎಂದರು.
ಚಿತ್ರದುರ್ಗದ ಮಾದಾರ ಚೆನ್ನಯ್ಯ ಗುರುಪೀಠದ ಶ್ರೀಬಸವ ಮಾದಾರ ಚೆನ್ನಯ್ಯ ಸ್ವಾಮೀಜಿ ಮಾತನಾಡಿ, ಪ್ರತಿವರ್ಷ ನಡೆಯುವ ಮತ್ತೆ ಕಲ್ಯಾಣದ ಕಾರ್ಯಕ್ರಮದಲ್ಲಿ ನಾನೂ ಒಂದು ಭಾಗವಾಗಿರುವುದಕ್ಕೆ ನನಗೆ ಹೆಮ್ಮೆಯಿದೆ. ಜಗತ್ತಿನಲ್ಲಿ ಮೊಟ್ಟಮೊದಲ ಬಾರಿಗೆ ಸಮಾನತೆ, ಸ್ವಾತಂತ್ರ್ಯ, ಮಾನವ ಹಕ್ಕು, ಜಾಗೃತಿ, ಸಂವಿಧಾನ ನೀಡಿದ್ದು ಬಸವಣ್ಣನವರ ಕಾರ್ಯಕ್ಷೇತ್ರವಾಗಿದ್ದ ಕಲ್ಯಾಣವೆಂದು ಬಣ್ಣಿಸಿದರು.ಉಪನ್ಯಾಸಕಿ ಸುಜಾತಾ ಮೇಲೇಗೌಡ ‘ಶರಣೆಯರ ಕೊಡುಗೆ ಕುರಿತು ಉಪನ್ಯಾಸ ನೀಡಿದರು. ತಹಸೀಲ್ದಾರ್ ವಿಭಾ ವಿ . ರಾಥೋಡ್ ಮಾತನಾಡಿದರು.
ಶಿವಸಂಚಾರ ತಂಡದ ಕೆ.ಜ್ಯೋತಿ, ಎಚ್.ಎಸ್.ನಾಗರಾಜ್ ಮತ್ತು ತಬಲ ಸಾಥಿ ಶರಣ್ ವಚನಗೀತೆಗಳನ್ನು ಹಾಡಿದರು. ಸಾಣೇ ಹಳ್ಳಿಯ ಶಿವಸಂಚಾರದ ಕಲಾವಿದರು ವಚನ ನೃತ್ಯರೂಪಕ ನೀಡಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ‘ಸಾಮರಸ್ಯ ನಡಿಗೆ ಜರುಗಿತು. ಶ್ರೀಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ರಚಿಸಿದ, ವೈ.ಡಿ.ಬದಾಮಿ ನಿರ್ದೇಶನದ ‘ಮರಣವೇ ಮಹಾನವಿ ನಾಟಕ ಪ್ರದರ್ಶಿಸಿದರು.