ಜಿಲ್ಲೆ

ಸಮ ಸಮಾಜ ನಿರ್ಮಾಣ ಯುವಸಮೂಹದ ಹೊಣೆ

ಲಲಾಟಾಕ್ಷ ಎಸ್

ಹುಣಸೂರು: ಭಾರತವನ್ನು ಸಮ ಸಮಾಜದ ಮೂಲಕ ನವ ಸಮಾಜವನ್ನಾಗಿಸುವ ಹೊಣೆಗಾರಿಕೆ ಯುವಸಮೂಹದ ಮೇಲಿದೆ ಎಂದು ಮೈಸೂರು ವಿಶ್ವವಿದ್ಯಾಲಯ ಸಂಜೆ ಕಾಲೇಜಿನ ಪ್ರಾಂಶುಪಾಲ ಡಾ.ವಿ.ಷಣ್ಮುಗಂ ಅಭಿಪ್ರಾಯಪಟ್ಟರು.

ನಗರದ ಡಿ.ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ವಿಭಾಗ ಮತ್ತು ಐಕ್ಯೂಎಸಿ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. ಅಂಬೇಡ್ಕರ್ ಪ್ರಸ್ತುತ ಕಾಲಘಟ್ಟದಲ್ಲಿ ಎಷ್ಟು ಮುಖ್ಯ ಎಂಬುದನ್ನು ಎಲ್ಲರು ಅರಿಯಬೇಕಿದೆ. ಯುವ ಸಮೂಹ ಅಂಬೇಡ್ಕರ್ ಅವರ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಅಂಬೇಡ್ಕರ್ ಅವರಿಂದ ಭಾರತವು ನವ ಸಮಾಜವಾಗಿ, ಸಮಾನತೆಯಿಂದ ಬದುಕುವ ಧ್ಯೇಯವನ್ನು ಹೊಂದಿದೆ. ಸಂವಿಧಾನದ ಮೂಲಕ ರಾಷ್ಟ್ರವನ್ನು ಪ್ರಬುದ್ಧಗೊಳಿಸುವ ಮಾರ್ಗವನ್ನು ಅಂಬೇಡ್ಕರ್ ತೋರಿದ್ದಾರೆ. ಅಂಬೇಡ್ಕರ್ ಅವರು ಕೇವಲ ಒಂದು ಸಮಾಜದ ಏಳಿಗೆಗಾಗಿ ದುಡಿದಿಲ್ಲ. ಸಮಾಜದ ಎಲ್ಲರ ಏಳಿಗೆಗಾಗಿ, ಒಳ್ಳಗೊಳ್ಳುವ ಸಾಂವಿಧಾನಿಕ ನೀತಿಗಳನ್ನು ರೂಪಿಸಿದ್ದಾರೆ. ಇಂತಹ ಸಮ ಸಮಾಜದ ಆಶಯಗಳಿಂದ ಭಾರತೀಯ ಸಮಾಜವು ವಿಶ್ವದ ಅತಿದೊಡ್ಡ ಶಕ್ತಿಯಾಗಿ ರೂಪುಗೊಂಡಿದೆ ಎಂದರು.

ಪ್ರಾಂಶುಪಾಲ ಬಿ.ಸಿ.ಸುರೇಶ್, ವಿದ್ಯಾರ್ಥಿಗಳು ಅಂಬೇಡ್ಕರ್ ಅವರಿಂದ ಸ್ಫೂರ್ತಿಗೊಂಡು ಸಾಧನೆಗೆ ಮುಂದಾಗಬೇಕು ಎಂದು ಹೇಳಿದರು.

ಮೈಸೂರಿನ ರಂಗ ಗರಡಿ ತಂಡದ ಕಲಾವಿದರು ‘ನಮ್ಮ ವಿಧಾನ-ಸಂವಿಧಾನ’ ಎಂಬ ಅಂಬೇಡ್ಕರ್ ಕುರಿತ ರೂಪಕ ಪ್ರದರ್ಶಿಸಿದರು. ಐಕ್ಯೂಎಸಿ ಸಂಯೋಜಕ ಡಾ.ಬಸವರಾಜು, ಪ್ರಾಧ್ಯಾಪಕರಾದ ಡಾ.ಬಿ.ವಿ.ವಸಂತಕುಮಾರ್, ಡಾ.ಆರ್.ಜಿ.ಚಿದಾನಂದ, ಡಾ.ದೀಪಕ್, ಡಾ.ಶಿಲ್ಪಾ, ಡಾ.ಸೌಮ್ಯಾ, ಹರ್ಷವರ್ಧನ್, ರಮೇಶ್, ವಿದ್ಯಾರ್ಥಿಗಳಾದ ಮಲ್ಲಿಕಾರ್ಜುನ, ಪ್ರದೀಪ್, ಎಚ್.ಎಂ. ಸಚ್ಚಿದಾನಂದ, ಮಹೇಶ್, ನಟೇಶ್, ಸೋನಾ, ಭಾನುಪ್ರಿಯಾ ಹಾಜರಿದ್ದರು.