ಬೆಳಗಾವಿ: ದಶಕಗಳಿಂದ ಮೂಲ ಸೌಕರ್ಯ, ಕುಡಿಯುವ ನೀರು, ಒಳಚರಂಡಿ, ವಿದ್ಯುತ್ ಇತರ ಸಮಸ್ಯೆಗಳಿಂದ ಬಳಲುತ್ತಿರುವ ರಾಮತೀರ್ಥ ನಗರವನ್ನು ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ) ದಿಂದ ಪಾಲಿಕೆಗೆ ಹಸ್ತಾಂತರಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು.
ನಗರದ ಮಹಾನಗರ ಪಾಲಿಕೆಯ ಪರಿಷತ್ ಸಭಾಂಗಣದಲ್ಲಿ ಬುಧವಾರ ಜರುಗಿದ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಸದಸ್ಯ ಹಣಮಂತ ಕೊಂಗಾಲಿ ಅವರು, ಕುಮಾರಸ್ವಾಮಿ ಬಡಾವಣೆಯನ್ನು ಪಾಲಿಕೆಗೆ ಹಸ್ತಾಂತರ ಮಾಡಿದ ರೀತಿಯಲ್ಲೇ ರಾಮತೀರ್ಥ ನಗರವನ್ನು ಪಾಲಿಕೆ ವ್ಯಾಪ್ತಿಗೆ ತೆಗೆದುಕೊಳ್ಳಬೇಕು ಎಂಬ ಆಗ್ರಹಿಸಿದ್ದಕ್ಕೆ ಸದಸ್ಯರು ಧ್ವನಿಗೂಡಿಸಿದರು.
ಈಗಾಗಲೇ ರಾಜ್ಯ ಸರ್ಕಾರವು ಬುಡಾ ವತಿಯಿಂದ 1997ರಲ್ಲಿ 333 ಎಕರೆ ಪ್ರದೇಶದಲ್ಲಿ ನಿರ್ಮಿಸಿರುವ ರಾಮತೀರ್ಥ ನಗರವನ್ನು ಸಮಗ್ರ ಅಭಿವೃದ್ಧಿಪಡಿಸಿ ಒಂಬತ್ತು ತಿಂಗಳ ಒಳಗಾಗಿ ಮಹಾನಗರ ಪಾಲಿಕೆಗೆ ಹಸ್ತಾಂತರಿಸುವಂತೆ ಬುಡಾಕ್ಕೆ ಸೂಚನೆ ನೀಡಿತ್ತು. ಆದರೆ, ರಸ್ತೆ, ಒಳಚರಂಡಿ, ಉದ್ಯಾನ, ಬಿದಿ ದೀಪ ಸೇರಿ ಇತರ ಸೌಲಭ್ಯಗಳನ್ನು ಕಲ್ಪಿಸಲು ವಿವಿಧ ಅಭಿವೃದ್ಧಿ ಕಾಮಗಾರಿಗಳು ಆಮೆಗತಿಯಲ್ಲಿ ಸಾಗುತ್ತಿವೆ.
ಇದರಿಂದ ಸ್ಥಳೀಯ ನಿವಾಸಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಹಾಗಾಗಿ, ಪಾಲಿಕೆಯು ಕೂಡಲೇ ರಾಮತೀರ್ಥ ನಗರವನ್ನು ಹಸ್ತಾಂತರಿಸಿಕೊಳ್ಳಲು ಕ್ರಮ ವಹಿಸಬೇಕು ಎಂದು ವಿನಂತಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ಮೇಯರ್ ಶೋಭಾ ಸೋಮನಾಚೆ, ರಾಮತೀರ್ಥ ನಗರವನ್ನು ಪಾಲಿಕೆಗೆ ಹಸ್ತಾಂತರಿಸುವ ವಿಷಯದ ಕುರಿತು ಕಮಿಟಿ ಸಲಹೆ ಪಡೆದುಕೊಂಡು ಪ್ರಕ್ರಿಯೆ ಆರಂಭಿಸಲು ಠರಾವ್ ಪಾಸ್ ಮಾಡಿದರು.
ಪಾಲಿಕೆ ವ್ಯಾಪ್ತಿಯ ಬೆಳಗಾವಿ ದಕ್ಷಿಣ ಮತ್ತು ಉತ್ತರ ವಿಧಾನಸಭಾ ಕ್ಷೇತ್ರಗಳಲ್ಲಿನ ಅೋಷಿತ ಕೊಳಚೆ ಪ್ರದೇಶಗಳು ಸಾಕಷ್ಟಿವೆ. ಆದರೆ, ಮೂಲ ಸೌಕರ್ಯ ಇಲ್ಲದೆ ಸಮಸ್ಯೆ ಎದುರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಕೊಳಚೆ ಪ್ರದೇಶಗಳು ಎಂದು ೋಷಿಸಿ ಅಭಿವೃದ್ಧಿಪಡಿಸಬೇಕು. ಶ್ರೀನಗರದಲ್ಲಿ ಅನುಭವ ಮಂಟಪದ ಬಳಿ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣ ಕಾಮಗಾರಿ ಕೈ ಬಿಟ್ಟು ಉದ್ಯಾನ ನಿರ್ಮಿಸಬೇಕು ಎಂದು ಸದಸ್ಯರು ಆಗ್ರಹಿಸಿದರು. ಉಪಮೇಯರ್ ರೇಷ್ಮಾ ಪಾಟೀಲ, ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಸದಸ್ಯರು, ಅಧಿಕಾರಿಗಳು ಇದ್ದರು.
ಬುಡಾಕ್ಕೆ ಸದಸ್ಯ ಹಣಮಂತ ಕೊಂಗಾಲಿ ನೇಮಕ: ಸರ್ಕಾರದ ವಿವಿಧ ಇಲಾಖೆಗಳ ಸಮಿತಿಗಳಿಗೆ ಪಾಲಿಕೆ ಸದಸ್ಯರ ನಾಮನಿರ್ದೇಶನಕ್ಕೆ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು. ಜತೆಗೆ ಪಾಲಿಕೆ ವತಿಯಿಂದ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ)ಕ್ಕೆ ನಾಮನಿರ್ದೇಶಿತ ಸದಸ್ಯರಾಗಿ ಪಾಲಿಕೆ ಸದಸ್ಯ ಹಣಮಂತ ಕೊಂಗಾಲಿ ಅವರನ್ನು ನೇಮಕಗೊಳಿಸಿ ಪಾಲಿಕೆ ಸಭೆ ನಿರ್ಣಯ ಕೈಗೊಂಡಿದೆ.
ಕೈಗೊಂಡ ಪ್ರಮುಖ ನಿರ್ಣಯಗಳು: ಪಾಲಿಕೆ ವ್ಯಾಪ್ತಿಯಲ್ಲಿ ಡೇಟಾ ಎಂಟ್ರಿ ಮಾಡುವ 40 ಜನರನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಿಸುವುದು. ಪಾಲಿಕೆಯ ವಿರೋಧ ಪಕ್ಷದ ನಾಯಕನಾಗಿ ಕಾಂಗ್ರೆಸ್ ಸದಸ್ಯ ಮುಜಮಿಲ್ ಡೋಣಿ ಆಯ್ಕೆ. ವಾರ್ಡ್‌ಗಳಲ್ಲಿ ತಡೆಹಿಡಿರುವ ಕಾಮಗಾರಿಗಳ ಮುಂದುವರಿಸಲು ನಿರ್ಧಾರ. ನಗರದ ಉದ್ಯಾನಗಳಲ್ಲಿ ಗಾಜಿನ ಮನೆಗಳ ನಿರ್ವಹಣೆಗೆ ಖಾಸಗಿ ಸಂಸ್ಥೆಗಳಿಗೆ ನೀಡಲು ನಿರ್ಧಾರ. ಸ್ಮಾರ್ಟ್‌ಸಿಟಿ ಯೋಜನೆಯಿಂದ ಪಾಲಿಕೆಗೆ ಹಸ್ತಾಂತರಗೊಂಡಿರುವ ಕಾಮಗಾರಿಗಳ ನಿರ್ವಹಣೆಗೆ ಪ್ರತ್ಯೇಕೆ ಸಭೆಗೆ ನಿರ್ಣಯ. ಬೆಳಗಾವಿ ಮಹಾನಗರದಲ್ಲಿ ಜರುಗುವ ಗಣಪತಿ ಉತ್ಸವಕ್ಕೆ 2 ಕೋಟಿ ರೂ.ಅನುದಾನ ಪ್ರಸ್ತಾವನೆ ನಿರ್ಣಯ.