ಕೋಲಾರ: ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ನಿರ್ವಹಣೆಯಲ್ಲಿ ಪ್ರಮುಖ ಪಾತ್ರವಹಿಸುವ ಪಿಡಬ್ಲ್ಯುಡಿ ಇಲಾಖೆ ಅಧಿಕಾರಿ ತಡವಾಗಿ ಆಗಮಿಸಿದ್ದಕ್ಕೆ ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಶೋಕಾಸ್ ನೋಟಿಸ್ ಜಾರಿ ಮಾಡಲು ಎಡಿಸಿಗೆ ಸೂಚಿಸಿದರು.
ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ನ್ಯಾಯಾಂಗ ಸಭಾಂಗಣದಲ್ಲಿ ಸೋಮವಾರ ಕರೆದಿದ್ದ 75ನೇ ಸ್ವಾತಂತ್ರ್ಯ ದಿನಾಚರಣೆ ಪೂರ್ವಭಾವಿ ಸಭೆಯಲ್ಲಿ ವಿವಿಧ ಇಲಾಖೆಗೆ ಡಿಸಿ ಜವಾಬ್ದಾರಿ ಹಂಚಿಕೆ ಮಾಡಿದರು. ಸರ್.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ವೇದಿಕೆ, ಧ್ವನಿವರ್ಧಕ ವ್ಯವಸ್ಥೆ, ದೀಪಾಲಂಕಾರದ ಜವಾಬ್ದಾರಿಯನ್ನು ಪಿಡಬ್ಲ್ಯುಡಿ ಇಲಾಖೆಗೆ ವಹಿಸುವಂತೆ ಸೂಚಿಸಿದರು. ಸಭೆ ಆರಂಭವಾಗಿ 45 ನಿಮಿಷ ಕಳೆದರೂ ಅಧಿಕಾರಿ ಬಾರದಿರುವುದನ್ನು ಕಂಡು ಶೋಕಾಸ್ ನೋಟಿಸ್ ಜಾರಿ ಮಾಡುವಂತೆ ಅಪರ ಜಿಲ್ಲಾಧಿಕಾರಿ ಡಾ. ಸ್ನೇಹ ಸಿ.ವಿ.ಅವರಿಗೆ ಸೂಚಿಸಿದರು.
ತಡವಾಗಿ ಆಗಮಿಸಿದ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಡಿಸಿ, 10 ಗಂಟೆಯ ಸಭೆಗೆ 11 ಗಂಟೆಗೆ ಬಂದಿದ್ದೀರಿ, ನಿಮಗೆ ಜವಾಬ್ದಾರಿ ಇಲ್ಲವೇ? ಕಾರ್ಯಕ್ರಮದಲ್ಲಿ ಏನಾದರೂ ಹೆಚ್ಚುಕಡಿಮೆಯಾದಲ್ಲಿ ನೀವೇ ನೇರಹೊಣೆ ಎಂದು ಎಚ್ಚರಿಕೆ ನೀಡಿದರು.
ವಾರಿಯರ್ಸ್‌ಗೆ ಸನ್ಮಾನ: ಸನ್ಮಾನಕ್ಕೆ ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿ ಮಕ್ಕಳು ಇರುವುದಿಲ್ಲವಾದ್ದರಿಂದ ಕರೊನಾ ವಾರಿಯರ್ಸ್ ಆಗಿ ದುಡಿದಿರುವ ಆರೋಗ್ಯ ಇಲಾಖೆ ಸಿಬ್ಬಂದಿ, ಪೊಲೀಸ್, ಗೃಹರಕ್ಷಕದಳ, ಅಂಗನವಾಡಿ-ಆಶಾ ಕಾರ್ಯಕರ್ತೆಯರು, ಪೌರಕಾರ್ಮಿಕರನ್ನು ಗುರುತಿಸಬೇಕಿದ್ದು, ಸ್ವಾತಂತ್ರ್ಯ ಹೋರಾಟಗಾರರು ಇದ್ದರೆ ಗುರುತಿಸಿ ಎಂದರು.
ಸರ್ಕಾರದಿಂದ ಹೊಸ ಮಾರ್ಗಸೂಚಿ ಬಂದರೆ ಮತ್ತೊಮ್ಮೆ ಸಭೆ ನಡೆಸಿ ಆ ಪ್ರಕಾರ ಸ್ವಾತಂತ್ರ್ಯೋತ್ಸವ ಹಮ್ಮಿಕೊಳ್ಳೋಣ. ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಇಲಾಖೆವಾರು ಅಧಿಕಾರಿಗಳು ಸಮರ್ಪಕವಾಗಿ ಜವಾಬ್ದಾರಿ ನಿರ್ವಹಿಸಬೇಕು. ಕ್ರೀಡಾಂಗಣದಲ್ಲಿ ಸಮಸ್ಯೆ ಇದ್ದಲ್ಲಿ ಸರಿಪಡಿಸಬೇಕು. ಪರೇಡ್‌ಗೆ ಎನ್‌ಸಿಸಿ ತಂಡ ಬಳಸಬೇಕು. ಸ್ವಾಗತ ಸಮಿತಿ, ಮಿನಿಟ್ ಟು ಮಿನಿಟ್ ಜವಾಬ್ದಾರಿ ಅಪರ ಜಿಲ್ಲಾಧಿಕಾರಿ ವಹಿಸಿಕೊಳ್ಳಬೇಕು. ಸಚಿವರ ಭಾಷಣವನ್ನು ವಾರ್ತಾ ಇಲಾಖೆ ನೋಡಿಕೊಳ್ಳಬೇಕು. ರಾಷ್ಟ್ರಗೀತೆ, ನಾಡಗೀತೆ, ರೈತಗೀತೆಗಳಲ್ಲಿ ಅಭಾಸ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದರು.
ಸ್ವಾತಂತ್ರ್ಯ ದಿನಾಚರಣೆಯಂದು ಎಲ್ಲ ಕಚೇರಿಗಳಲ್ಲಿ ಬೆಳಗ್ಗೆ 8 ಗಂಟೆಗೂ ಮುನ್ನವೇ ಧ್ವಜಾರೋಹಣ ನೆರವೇರಿಸಿ ಜಿಲ್ಲಾಡಳಿತದ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬ ಅಧಿಕಾರಿಯೂ ಹಾಜರಾಗಬೇಕು ಎಂದು ಸೂಚಿಸಿದರು.
ಜಿಪಂ ಸಿಇಒ ಎನ್.ಎಂ.ನಾಗರಾಜ್, ದೈಹಿಕ ಶಿಕ್ಷಣಾಧಿಕಾರಿ ಮಂಜುನಾಥ್, ಎಸ್ಪಿ ಡಿ. ಕಿಶೋರ್‌ಬಾಬು, ಉಪವಿಭಾಗಾಧಿಕಾರಿ ಆನಂದ ಪ್ರಕಾಶ್ ಮೀನ, ಡಿಡಿಪಿಐ ಕೃಷ್ಣಮೂರ್ತಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.