ಜಿಲ್ಲೆ

ಸಭೆಗೆ ಗೈರಾದರೆ ಬೀಳುತ್ತೆ ಕೇಸ್ ; ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಎಚ್ಚರಿಕೆ

ತುಮಕೂರು : ಪರಿಶಿಷ್ಟ ಸಮುದಾಯಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ನಡೆಯುವ ಸಭೆಗಳಿಗೆ ಹಾಜರಾಗದ ಅಧಿಕಾರಿಗಳ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶೇಷ ಘಟಕ(ಎಸ್‌ಸಿಪಿ) ಹಾಗೂ ಗಿರಿಜನ ಉಪಯೋಜನೆ(ಟಿಎಸ್‌ಪಿ)ಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ ಪ.ಜಾತಿ ಮತ್ತು ವರ್ಗದವರ ಅಭಿವೃದ್ಧಿಗಾಗಿ ನಿಗದಿಯಾಗಿದ್ದ ಅನುದಾನ ಬಳಕೆಗೆ ಸಂಬಂಧಿಸಿದಂತೆ ವರ್ಷಾಂತ್ಯಕ್ಕೆ ಸಾಧಿಸಿದ ಇಲಾಖಾವಾರು ಪ್ರಗತಿ ಪರಿಶೀಲಿಸಿದರು.

ಕಡಿಮೆ ಹಾಗೂ ಶೂನ್ಯ ಪ್ರಗತಿ ಸಾಧಿಸಿದ ತಿಪಟೂರು ನಗರಸಭೆ, ಚಿಕ್ಕನಾಯಕನಹಳ್ಳಿ ಪುರಸಭೆ, ಗುಬ್ಬಿ ಪಟ್ಟಣ ಪಂಚಾಯತಿ ಅಧಿಕಾರಿಗಳಿಂದ ಕಡಿಮೆ ಸಾಧನೆಗೆ ಗರಂ ಆದರು. ನಿಗದಿತ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಉತ್ತಮ ಆರ್ಥಿಕ ಪ್ರಗತಿ ಸಾಧಿಸಿರುವ ತುಮಕೂರು ಮಹಾನಗರಪಾಲಿಕೆ, ಕೊರಟಗೆರೆ ಪಟ್ಟಣ ಪಂಚಾಯಿತಿ, ಶಿರಾ ನಗರಸಭೆಗಳ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ಕೈಗಾರಿಕಾ ಕೇಂದ್ರ, ಪಂಚಾಯತ್ ರಾಜ್ ಇಲಾಖೆ, ತೋಟಗಾರಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಹಕಾರ, ಮೀನುಗಾರಿಕೆ, ಬೆಸ್ಕಾಂ, ಪಶು ಸಂಗೋಪನೆ, ರೇಷ್ಮೆ ಇಲಾಖೆಗಳು 2021-22ನೇ ಸಾಲಿನಲ್ಲಿ ಎಸ್‌ಸಿಪಿ/ ಟಿಎಸ್‌ಪಿ ಯೋಜನೆಯಡಿ ಬಿಡುಗಡೆಯಾದ ಅನುದಾನವನ್ನು ಶೇ.100 ವೆಚ್ಚ ಮಾಡಿ ಪರಿಶಿಷ್ಟರ ಅಭ್ಯುದಯಕ್ಕೆ ವಿನಿಯೋಗಿಸಲಾಗಿದೆ ಎಂದು ಸಂಬಂಧಿಸಿದ ಇಲಾಖಾವಾರು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಸಭೆಗೆ ಹಾಜರಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಶಿರಾ ನಗರಸಭೆ ಮುಖ್ಯಾಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಲು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರೇಮಾಗೆ ಡಿಸಿ ಸೂಚಿಸಿದರು.

ಸಭೆಯ ನಂತರ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್‌ಗಳ ಅಂತಿಮ ಪಟ್ಟಿಗೆ ಸಂಬಂಧಿಸಿದಂತೆ ತಹಸೀಲ್ದಾರರು, ಮನೆ ಮಾಲೀಕರಿಂದ ಲಿಖಿತ ಮಾಹಿತಿ ಪಡೆದು ಅಂತಿಮ ಪಟ್ಟಿ ತಯಾರಿಸಬೇಕು ಎಂದು ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಆಂಜನಪ್ಪಗೆ ಸೂಚಿಸಿದರು.

ಕಾಮಗಾರಿ ಪೂರ್ಣಗೊಳಿಸಿ : ಮಧುಗಿರಿ ಪುರಸಭೆ ವ್ಯಾಪ್ತಿಯಲ್ಲಿ ಒಳಚರಂಡಿ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಬೇಕು ಹಾಗೂ ಅಲೆಮಾರಿ ಜನಾಂಗದವರಿಗೆ ನಿವೇಶನ ಒದಗಿಸಲು ತಯಾರಿಸಿರುವ ಪಟ್ಟಿಯನ್ನು ಮರು ಪರಿಶೀಲಿಸಬೇಕೆಂದು ಮುಖ್ಯಾಧಿಕಾರಿ ನಜ್ಮಾಗೆ ಸೂಚನೆ ನೀಡಿದರು. ಬಾಲ ಕಾರ್ಮಿಕತೆಯನ್ನು ತಡೆಯುವ ನಿಟ್ಟಿನಲ್ಲಿ ಅರಿವು ಮೂಡಿಸುವ ಸಲುವಾಗಿ ಕಾರ್ಮಿಕ ಇಲಾಖೆಯಿಂದ ಹೊರತರಲಾದ ಭಿತ್ತಿಪತ್ರವನ್ನು ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡಿದರು. ಜಂಟಿ ಕೃಷಿ ನಿರ್ದೇಶಕಿ ರಾಜಸುಲೋಚನಾ, ಮಹಾನಗರಪಾಲಿಕೆ ಆಯುಕ್ತೆ ರೇಣುಕಾ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಬಿ.ರಘು, ರೇಷ್ಮೆ ಇಲಾಖೆ ಉಪನಿರ್ದೇಶಕ ಬಾಲ ಕೃಷ್ಣಪ್ಪ ಇದ್ದರು.