ಬ್ಯಾಡಗಿ: ತಾಲೂಕು ಪಂಚಾಯಿತಿ ಸಾಮಾನ್ಯ ಹಾಗೂ ತ್ರೈಮಾಸಿಕ ಸಭೆಗಳಿಗೆ ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ಹಾಗೂ ಸಾರ್ವಜನಿಕ ಉದ್ಯಮ ಹಾಗೂ ಸಹಕಾರಿ ಸಂಸ್ಥೆಗಳ ಮುಖ್ಯಸ್ಥರು ಕಡ್ಡಾಯವಾಗಿ ಹಾಜರಾಗಬೇಕು. ನಿರ್ಲಕ್ಷ್ಯ ತೋರಿದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ, ರಾಜ್ಯಮಟ್ಟದ ಆಯಾ ಇಲಾಖೆ ಆಯುಕ್ತರಿಗೆ ಪತ್ರ ಬರೆದು ಕ್ರಮಕ್ಕೆ ಆಗ್ರಹಿಸುತ್ತೇನೆ ಎಂದು ತಾ.ಪಂ. ಅಧ್ಯಕ್ಷೆ ಸವಿತಾ ಸುತ್ತಕೋಟಿ ಎಚ್ಚರಿಸಿದರು.
ಪಟ್ಟಣದ ತಾ.ಪಂ. ಕಾರ್ಯಾಲಯದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ವರ್ಷಗಳಿಂದ ತಾಲೂಕು ಮಟ್ಟದ ಸಭೆಗಳಿಗೆ ಅಧಿಕಾರಿಗಳು ಹಾಜರಾತಿ, ಪ್ರಗತಿಪತ್ರಗಳನ್ನು ಸಮರ್ಪಕವಾಗಿ ನೀಡುತ್ತಿಲ್ಲ. ಈ ಕುರಿತು ಸಭೆಗಳಲ್ಲಿ ಹಲವು ಬಾರಿ ಸೂಚನೆ ನೀಡಲಾಗಿದೆ. ಆದರೂ, ಅಧಿಕಾರಿಗಳು ಬೇರೆ ಬೇರೆ ಕಾರಣ ಹೇಳುವ ಮೂಲಕ ಗೈರಾಗುವುದು, ತಪ್ಪು ಮಾಹಿತಿ ನೀಡುತ್ತಿದ್ದಾರೆ. ಈ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಕಳೆದ ತಿಂಗಳು ಪತ್ರ ಬರೆಯಲಾಗಿತ್ತು. ಸಭೆಯ ನಿಯಮ ಹಾಗೂ ಯಾವ ಅಧಿಕಾರಿಗಳ ಹಾಜರಾಗಬೇಕು ಎಂದು ಮಾಹಿತಿ ಕಳುಹಿಸಿದ್ದಾರೆ ಎಂದರು.
ತಾ.ಪಂ. ಅಧಿಕಾರಿಗಳ ಕರ್ತವ್ಯ ನಿರ್ಲಕ್ಷ್ಯ ಹಾಗೂ ಗೈರು ಹಾಜರು ಕುರಿತು ಅಬಕಾರಿ, ಕಂದಾಯ, ಕೃಷಿ, ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ, ಸಾರಿಗೆ, ಕಾರ್ವಿುಕ ಇಲಾಖೆ ಸೇರಿ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಕ್ರಮಕ್ಕೆ ಒತ್ತಾಯಿಸಿ ಪತ್ರ ಬರೆದರೂ, ಸ್ಪಂದಿಸಿಲ್ಲ. ಕೆಳ ಅಧಿಕಾರಿಗಳ ತಪ್ಪು ಮುಚ್ಚಿಕೊಳ್ಳಲು ಕ್ರಮ ಜರುಗಿಸದೆ, ನಮ್ಮ ಪತ್ರಗಳನ್ನು ಕಡತಗಳಲ್ಲಿ ಸೇರಿಸಿದ್ದಾರೆ. ಸರ್ಕಾರದ ಮೇಲಧಿಕಾರಿಗಳು ಈ ರೀತಿಯಾಗಿ ಕರ್ತವ್ಯ ಉಲ್ಲಂಘನೆ ಮಾಡಿದರೆ, ಸಾರ್ವಜನಿಕರಿಗೆ ಸರ್ಕಾರಿ ಸೌಲಭ್ಯ ಸಿಗಲು ಹೇಗೆ ಸಾಧ್ಯ ? ಈ ಕುರಿತು ಜಿಲ್ಲಾಧಿಕಾರಿ ಸಮಗ್ರ ತನಿಖೆ ನಡೆಸಿ, ಎಲ್ಲ ಇಲಾಖೆ ಅಧಿಕಾರಿಗಳಿಗೆ ಸರ್ಕಾರದ ಆದೇಶ ಪಾಲಿಸುವಂತೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.
ತಾ.ಪಂ. ಉಪಾಧ್ಯಕ್ಷೆ ಶಾಂತವ್ವ ದೇಸಾಯಿ ಮಾತನಾಡಿ, ಪ್ರಗತಿ ಪರಿಶೀಲನೆ ಸಭೆಗೆ ಅಬಕಾರಿ ನಿರೀಕ್ಷಕರು ಹಾಜರಾಗುವುದು ಕಡ್ಡಾಯವಲ್ಲ ಎಂದು ಆಯುಕ್ತರ ಪತ್ರ ನೀಡಿದ್ದರು. ಈ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ತಾ.ಪಂ. ಇಒ ಪತ್ರ ಬರೆದಿದ್ದರು. ಕಾರ್ಯದರ್ಶಿ ಈಗ ಆದೇಶ ಪತ್ರ ಕಳುಹಿಸಿದ್ದು, ಇದರಲ್ಲಿ ಅಬಕಾರಿ ಆಯುಕ್ತರು ಈ ರೀತಿ ಸರ್ಕಾರ ಆದೇಶ ವಿರುದ್ಧ ಸೂಚನೆ ನೀಡಲು ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮುಂದಿನ ಸಭೆಗಳಿಗೆ ಅಬಕಾರಿ ಅಧಿಕಾರಿಗಳು ಡ್ರೆಸ್ಕೋಡ್ ನಿಯಮ ಪಾಲಿಸಿ ಸಭೆಗೆ ಹಾಜರಾಗಬೇಕು. ಸಾರ್ವಜನಿಕ ಉದ್ಯಮಗಳು, ಸಹಕಾರಿ ಸಂಸ್ಥೆಗಳು ಮತ್ತು ಶಾಸನಬದ್ಧ ನಿಕಾಯಗಳು ಹಾಜರಿರಬೇಕು ಎಂದರು.