ಜಿಲ್ಲೆ

ಸಭೆ ಕರೆದ ಪುರಸಭೆ ಸಿಬ್ಬಂದಿ ಪೇಚಿಗೆ

ಸೇಡಂ: ವ್ಯಾಪಾರಿಗಳಿಗೆ ಯಾವುದೇ ವಿಷಯ ತಿಳಿಸದೆ ಎಸಿ ಸಾಹೇಬ್ರು ಸಭೆ ಕರೆದಿದ್ದಾರೆ. ಎಲ್ಲರೂ ಬನ್ನಿ ಎಂದು ಗುರುವಾರ ಹೇಳಿದ ಪುರಸಭೆ ಸಿಬ್ಬಂದಿ ಶುಕ್ರವಾರ ಕರೆದಿದ್ದ ಸಭೆಯಲ್ಲಿ ವರ್ತಕರ ಎದುರು ಪೇಚಿಗೆ ಸಿಲುಕಿದ ಪ್ರಸಂಗ ನಡೆಯಿತು.

ಗುರುವಾರ ಬಹುತೇಕ ಅಂಗಡಿಗಳಿಗೆ ಪುರಸಭೆ ಸಿಬ್ಬಂದಿ ತೆರಳಿ ಶುಕ್ರವಾರ ಬೆಳಗ್ಗೆ 11ಕ್ಕೆ ಸಹಾಯಕ ಆಯುಕ್ತರು ಸಭೆ ಕರೆದಿದ್ದಾರೆ, ಬರಬೇಕು ಎಂದು ಹೇಳಿದ್ದಾರೆ. ಯಾವ ಕಾರಣಕ್ಕೆ ಸಭೆ ಎಂದು ವ್ಯಾಪಾರಿಗಳು ಕೇಳಿದ್ದು, ನಮಗೇನೂ ಗೊತ್ತಿಲ್ಲ. ಸಾಹೇಬ್ರು ನೀವೆಲ್ಲ ಬರಬೇಕು ಎಂದು ತಿಳಿಸಲು ಹೇಳಿದ್ದಾರೆ ಅಷ್ಟೆ ಎಂದು ಹೇಳಿ ಹೋಗಿದ್ದಾರೆ.

ಗೊಂದಲಕ್ಕೀಡಾದ ವ್ಯಾಪಾರಿಗಳು ಆತಂಕದಲ್ಲಿಯೇ ಶುಕ್ರವಾರ ಬೆಳಗ್ಗೆ ಸುವರ್ಣ ಭವನದಲ್ಲಿ ಕರೆದಿದ್ದ ಮೀಟಿಂಗ್‌ಗೆ ಬಂದಿದ್ದಾರೆ. ಆದರೆ ಸಭೆಯಲ್ಲಿ ಸಹಾಯಕ ಆಯುಕ್ತರು, ಪುರಸಭೆ ಮುಖ್ಯಾಧಿಕಾರಿಗಳೇ ಇರಲಿಲ್ಲ. ಪರಿಸರ ಅಭಿಯಂತರೆ ಪ್ರಿಯಾಂಕಾ ವಿಭೂತಿ, ಆರೋಗ್ಯ ನಿರೀಕ್ಷಕ ಬಸವರಾಜ ಸಭೆ ನಡೆಸಲು ಮುಂದಾದರು. ಇದರಿಂದ ಸಿಟ್ಟಿಗೆದ್ದ ವ್ಯಾಪಾರಸ್ಥರು ಸಭೆ ಯಾವ ಉz್ದೆÃಶಕ್ಕೆ ಕರೆದಿದ್ದೀರಿ? ಪ್ರಮುಖ ಅಧಿಕಾರಿಗಳೇ ಇಲ್ಲವಲ್ಲ ಎಂದು ಕಿಡಿಕಾರಿದರು.

ಎಸಿ ಸಾಹೇಬ್ರು ಬೆಳಗ್ಗೆ ನಮ್ಮೊಂದಿಗೆ ಮಾರುಕಟ್ಟೆ ಸುತ್ತಾಡಿದ್ದಾರೆ. ಎಲ್ಲೆಂದರಲ್ಲಿ ಕಸ ಬಿದ್ದಿರುವುದನ್ನು ಗಮನಿಸಿದ್ದು, ವ್ಯಾಪಾರಸ್ಥರಿಗೆ ತಿಳಿಹೇಳಲು ಹಾಗೂ ಟ್ರೇಡ್ ಲೈಸೆನ್ಸ್ ಬಗ್ಗೆ ಚರ್ಚಿಸುವುದಕ್ಕಾಗಿ ಸಭೆ ಕರೆದಿದ್ದರು. ಅನಿವಾರ್ಯ ಕಾರಣಕ್ಕೆ ಎಸಿ, ಮುಖ್ಯಾಧಿಕಾರಿಗಳು ಬಂದಿಲ್ಲ ಎಂದು ಸಿಬ್ಬಂದಿ ಸಮಜಾಯಿಸಿ ನೀಡಿದರು.

ಉದ್ಯಮಿ ಅಂಬಾರಾವ ಪಾಟೀಲ್ ಮಾತನಾಡಿ, ನಾವು ಲೈಸೆನ್ಸ್ ಪಡೆಯಲು ಪುರಸಭೆಗೆ ಬಂದರೆ ಕೆಲಸವೇ ಆಗಲ್ಲ. ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಮಾರುಕಟ್ಟೆಯಲ್ಲಿ ಕಸ ಬಿದ್ದಿದೆ ಎಂದು ಸಾಕಷ್ಟು ಬಾರಿ ಪುರಸಭೆಗೆ ತಿಳಿಸಿದರೂ ವಿಲೇವಾರಿ ಕಾರ್ಯ ಆಗಿಲ್ಲ. ನಮ್ಮಲ್ಲಿ ಬಂದು ಕಸ ಸಂಗ್ರಹಿಸಿದರೆ ನಾವೇಕೆ ರಸ್ತೆ ಮೇಲೆ ಹಾಕುತ್ತೇವೆ ಎಂದು ಹರಿಹಾಯ್ದರು. ಸಭೆ ಇಲ್ಲಿಗೆ ಮುಗಿಸಿ. ಮುಂದಿನ ದಿನಗಳಲ್ಲಿ ಸಹಾಯಕ ಆಯುಕ್ತರು, ಮುಖ್ಯಾಧಿಕಾರಿ, ಪೊಲೀಸ್ ಅಧಿಕಾರಿಗಳನ್ನು ಸೇರಿಸಿ ಮೀಟಿಂಗ್ ಕರೆಯಿರಿ ಎಂದು ಆಗ್ರಹಿಸಿದರು.

ವ್ಯಾಪಾರಿಗಳಾದ ರಮೇಶ ಮಾಲಪಾಣಿ, ಅಬ್ದುಲ್ ಸತ್ತಾರ್, ಶರಣಪ್ಪ ರುದ್ನೂರ, ಸಂತೋಷ, ಗೋವಿಂದ ಕರ್ವಾ, ಬಸವರಾಜ ಚಂದನಕೇರಿ, ಪ್ರಶಾಂತ ಮಹೇಂದ್ರಕರ, ಸಂತೋಷ ದೊಂತಾ ಇತರರಿದ್ದರು.