ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ಇತ್ತೀಚೆಗೆ ಸದನದಲ್ಲಿ ನಡೆದ ಬೆಳವಣಿಗೆ ನನ್ನ ಮನಸ್ಸಿಗೆ ಬೇಸರ ತರಿಸಿದೆ. ಹಾಗಾಗಿ ವಿಧಾನ ಪರಿಷತ್ ಸಭಾಪತಿ ಸ್ಥಾನದಲ್ಲಿ ಮುಂದುವರೆಯುವುದು ಸೂಕ್ತವಲ್ಲ ಎಂಬ ಭಾವನೆ ಬಂದಿದೆ. ಈ ಕುರಿತು ಹಿರಿಯರು, ಸ್ನೇಹಿತರೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋಗುತ್ತೇನೆ ಎಂದು ಕೆಲ ದಿನಗಳ ಹಿಂದೆ ಸಭಾಪತಿ ಆಸೀನದ ಮೇಲೆ ಕುಳಿತಾಗಲೇ ಹೇಳಿದ್ದೆ. ಏಕಾಏಕಿ ಆ ನಿರ್ಧಾರಕ್ಕೆ ಬರಲಾರೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಸಭಾಪತಿಯಾಗಿ ಮುಂದುವರಿಯಲು ಮನಸ್ಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಎಂಬುದು ಮೇಲ್ಮನೆ, ಚಿಂತಕರ ಚಾವಡಿ. ಕರ್ನಾಟಕ ವಿಧಾನ ಪರಿಷತ್ ದೇಶಕ್ಕೆ ಮಾದರಿಯಾದದ್ದು. ಇಂದು ಸದನ ಬಹಳ ಹದಗೆಟ್ಟಿದೆ. ಚರ್ಚೆ ಇಲ್ಲದೇ ಗದ್ದಲದಲ್ಲಿ ಬಿಲ್ಗಳು ಪಾಸ್ ಆಗುತ್ತವೆ. ಸಭಾಪತಿಗಳ ಮಾತು ಯಾರೂ ಕೇಳುವುದಿಲ್ಲ. ಸದನ ನಡೆಸುವುದು ಬಹಳ ಕಷ್ಟವಾಗಿದೆ. ಸದನದಲ್ಲಿ ಕುಳಿತು ಸರಿಯಾಗಿ ನಡೆಸದಿದ್ದರೆ ನಾವು ಅಯೋಗ್ಯರು ಎನ್ನಿಸಿಕೊಳ್ಳಬೇಕಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಭಾಪತಿ ಸ್ಥಾನ ನನಗೆ ಸಾಕಷ್ಟು ಗೌರವ ತಂದು ಕೊಟ್ಟಿದೆ. ಆದರೆ, ಇಂದು ಸಿಡಿ, ಹನಿಟ್ರ್ಯಾಪ್ ನಂಥ ವಿಷಯಗಳು ಚರ್ಚೆಗೆ ಬರುತ್ತಿವೆ. ನಾವು ಮೂಕಪ್ರೇಕ್ಷಕರಂತೆ ಕುಳಿತುಕೊಳ್ಳಬೇಕು. ಸಭಾಪತಿ ಸ್ಥಾನ ನಾಮಕಾವಸ್ತೆ ಆಗಿದೆ. ಈ ಸ್ಥಾನದಲ್ಲಿ ಕುಳಿತ ಮೇಲೆ ಸರಿಯಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗದಿದ್ದರೆ ಹೇಗೆ ? ನಾನು ಈ ಸ್ಥಾನಕ್ಕೆ ಯೋಗ್ಯ ಇದ್ದಿನೋ ಇಲ್ಲವೋ ಎಂದು ನನಗೆ ಅನಿಸುತ್ತಿದೆ. ಈ ಸ್ಥಾನಕ್ಕೆ ಘನತೆ ಗೌರವ ಇಲ್ಲದ ಮೇಲೆ ಇಲ್ಲಿ ಇರಬಾರದು ಎಂದು ತೀರ್ವನಕ್ಕೆ ಬಂದಿದ್ದೇನೆ ಎಂದು ಹೇಳಿದರು.
ವಿಧಾನ ಪರಿಷತ್ತಿನಲ್ಲಿ ಜೈಕಾರ, ಧಿಕ್ಕಾರ ಕೂಗಬಾರದು ಎನ್ನುವ ನಿಯಮವಿದೆ. ಪ್ಲೇಕಾರ್ಡ್ಗಳನ್ನು ತರಬಾರದು. ಅದರೂ ಅದನ್ನು ಯಾರು ಪಾಲನೆ ಮಾಡುತ್ತಿಲ್ಲ. 45 ವರ್ಷಗಳ ಅನುಭವದಲ್ಲಿ 15 ಮುಖ್ಯಮಂತ್ರಿಗಳು, 12 ಸಭಾಪತಿಗಳನ್ನು ನೋಡಿದ್ದೇನೆ. ನಾನು ಯಾರ ಮೇಲೆ ಆರೋಪ ಮಾಡುವುದಿಲ್ಲ. ಸದನ ನಡೆಸಲು ನನಗೆ ಯೋಗ್ಯತೆಯಿಲ್ಲ ಅನ್ನಿಸುತ್ತಿದೆ ಎಂದು ಭಾವುಕರಾದರು.