ಜಿಲ್ಲೆ

ಸಭಾಪತಿ ಹೊರಟ್ಟಿ ನಡೆಗೆ ಡಿಸಿಎಂ ಡಿ.ಕೆ.ಶಿವಕುಮಾರ ಬೇಸರ

ಬೆಳಗಾವಿ: ‘ವಿಧಾನ ಪರಿಷತ್ ಸಭಾಂಗಣದಲ್ಲಿಯೇ ಅಸಂವಿಧಾನಿಕ ಪದ ಬಳಸಿ 12 ಬಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಅವಮಾನಿಸಿರುವುದು ದಾಖಲೆಯಲ್ಲಿದೆ. ಘಟನೆ ನಡೆದ ಬಳಿಕ ಸಭಾಪತಿ ಚರ್ಚೆಗೆ ಅವಕಾಶ ಕೊಡಬೇಕಿತ್ತು.

ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕಿತ್ತು. ಆದರೆ, ಚರ್ಚೆಗೆ ಅವಕಾಶ ನೀಡದೆ ಸಭೆ ಮುಂದೂಡಿದರು’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅಸಮಾಧಾನ ವ್ಯಕ್ತಪಡಿಸಿದರು. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ನಿಂದಿಸಿದಕ್ಕೆ ಚರ್ಚೆ ಆಗಿದೆ. ನಮ್ಮ ನಾಯಕ ರಾಹುಲ ಗಾಂಧಿ ಅವರನ್ನು ನಿಂದಿಸಿದಾಗ ಹೋರಾಟ ಮಾಡಬೇಕಾಯಿತು.

ಈ ಸಂದರ್ಭದಲ್ಲಿ ಗೌರವಯುತ ಸ್ಥಾನದಲ್ಲಿರುವ ಸಚಿವೆಗೆ ಅಸಂವಿಧಾನಿಕ ಪದ ಬಳಸಿ ನಿಂದಿಸಿದ್ದಾರೆ. ಇದು ಚಿಕ್ಕಮಗಳೂರು ಸಂಸ್ಕೃತಿಯೇ? ಭಾರತೀಯ ಸಂಸ್ಕೃತಿಯೇ ಅಥವಾ ಬಿಜೆಪಿ ಸಂಸ್ಕೃತಿಯೇ? ಅವರೇ ಹೇಳಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದರು. ‘ಪ್ರಕರಣದಲ್ಲಿ ನಾವು ಯಾವುದಕ್ಕೂ ಮಧ್ಯಪ್ರವೇಶ ಮಾಡುತ್ತಿಲ್ಲ. ನಾವು ಹೇಳಿದ ಹಾಗೆ ಪೊಲೀಸರು ಕೇಳಬೇಕಾಗಿಯೂ ಇಲ್ಲ.

ಲಕ್ಷೀ ಹೆಬ್ಬಾಳ್ಕರ್ ಅವರಿಗೆ ಸ್ವಂತ ಕ್ಷೇತ್ರದಲ್ಲಿ ನಿಂದನೆ ಆಗಿದೆ. ಕಾರ್ಯಕರ್ತರಿಗೆ ಗೊತ್ತಾಗಿದ್ದರಿಂದ ಆಕ್ರೋಶಕ್ಕೆ ಒಳಗಾಗಿರುವುದು ಸ್ವಾಭಾವಿಕ’ ಎಂದರು.