ಜಿಲ್ಲೆ

ಸಭಾಪತಿ ಮಾಡುವ ವಿಶ್ವಾಸ ವ್ಯಕ್ತಪಡಿದ ಹೊರಟ್ಟಿ : ವಿರೋಧಿಸುವವರನ್ನು ಸಮಾಧಾನ ಪಡಿಸಲಾಗಿದೆ

ಹುಬ್ಬಳ್ಳಿ : ವಿಧಾನ ಪರಿಷತ್​ನ ಕೆಲವು ಬಿಜೆಪಿ ಸದಸ್ಯರು ನನ್ನನ್ನು ಸಭಾಪತಿ ಮಾಡಲು ವಿರೋಧಿಸುತ್ತಿದ್ದಾರೆ. ಪರಿಷತ್​ನ 31 ಸದಸ್ಯರಲ್ಲಿ ಕೇವಲ ನಾಲ್ಕು ಜನರ ವಿರೋಧ ಇದೆ. ಇದೀಗ ಅವರೆಲ್ಲರನ್ನು ಸಮಾಧಾನಪಡಿಸಲಾಗಿದ್ದು, ಸಭಾಪತಿ ಮಾಡುವ ವಿಶ್ವಾಸ ಇದೆ ಎಂದು ವಿಧಾನ ಪರಿಷತ್​ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ನಗರದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪಕ್ಷಕ್ಕೆ ಈಗ ಬಂದವರನ್ನು ಏಕೆ ಸಭಾಪತಿ ಮಾಡಬೇಕೆಂಬ ಪ್ರಶ್ನೆ ಕೆಲವರಲ್ಲಿ ಇತ್ತು. ಆದರೆ, ಮಾಜಿ ಸಿಎಂ ಬಿ.ಎಸ್​. ಯಡಿಯೂರಪ್ಪ ಅವರು "ನಮ್ಮ ನಾಲಿಗೆ ಒಂದೇ ಇರಬೇಕು. ಅವರನ್ನು ಸಭಾಪತಿ ಮಾಡಬೇಕು' ಎಂದಿದ್ದಾರೆ. ಬಿಜೆಪಿಯವರು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ. ನನ್ನನ್ನು ಸಭಾಪತಿ ಮಾಡುತ್ತಾರೆಂಬ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜಕೀಯದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಸಹಜ. ಬಿಜೆಪಿ ಹೈಕಮಾಂಡ್​ ಹಾಗೂ ಮುಖ್ಯಮಂತ್ರಿ ಅವರು ನನ್ನನ್ನು ಸಭಾಪತಿಯನ್ನಾಗಿಸುವ ಬಗ್ಗೆ ಯಾವಾಗ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕು ಎಂದರು.
ನನ್ನನ್ನು ಬಿಜೆಪಿಯವರು ಸೈಡ್​ಲೈನ್​ ಮಾಡಿದ್ದಾರೋ ಅಥವಾ ಯಾವ ಲೈನ್​ ಮಾಡಿದ್ದಾರೋ ಗೊತ್ತಿಲ್ಲ. ಆದರೆ, ಅಧಿವೇಶನ ಪ್ರಾರಂಭಗೊಂಡ ನಂತರ ಸಭಾಪತಿ ಮಾಡುತ್ತಾರೆ ಎಂಬ ನಂಬಿಕೆ ಇದೆ ಎಂದು ಹೇಳಿದರು.