ವಿಜಯವಾಣಿ ಸುದ್ದಿಜಾಲ ಧಾರವಾಡ
ಶಿಕ್ಷಕರು ಪಠ್ಯದ ಜೊತೆಗೆ ಪೂರಕ ಚುಟವಟಿಕೆಗಳಲ್ಲಿ ಭಾಗವಹಿಸುವುದರಿಂದ ಅವರಲ್ಲಿನ ಕ್ರಿಯಾಶೀಲತೆ ಹೆಚ್ಚುತ್ತದೆ. ಮಕ್ಕಳ ಶೈಕ್ಷಣಿಕ ಅಭಿವದ್ಧಿಗೆ ಅದು ಪೂರಕವಾಗುತ್ತದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ನಗರದ ರಾಯಾಪುರದ ಜ್ಞಾನವಿಕಾಸ ತರಬೇತಿ ಸಂಸ್ಥೆಯಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಹಪಠ್ಯ ಚಟುವಟಿಕೆಗಳ ರಾಜ್ಯ ಮಟ್ಟದ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬೋಧನಾ ಕೌಶಲಗಳನ್ನು ಬಳಸಿಕೊಂಡು ಬೋಧಿಸಿದಾಗ ಮಾತ್ರ ಮಕ್ಕಳ ಕಲಿಕೆ ಪರಿಣಾಮಕಾರಿಯಾಗುತ್ತದೆ. ವಿಷಯಕ್ಕೆ ತಕ್ಕಂತೆ ಅಭಿನಯ, ಹಾಡುಗಾರಿಕೆ ಮುಖಾಂತರ ಮಕ್ಕಳಿಗೆ ಕಲಿಸಬೇಕು. ಇಲಾಖೆಯು ಸಹಪಠ್ಯ ಚಟುವಟಿಕೆಗಳ ಸ್ಪರ್ಧೆಗಳನ್ನು ಆಯೋಜಿಸುವುದರಿಂದ ಶಿಕ್ಷಕರಲ್ಲಿನ ಸುಪ್ತ ಪ್ರತಿಭೆ, ಕೌಶಲ ಮತ್ತು ಜ್ಞಾನವು ಮಕ್ಕಳಲ್ಲಿ ಗುಣಾತ್ಮಕ ಶಿಕ್ಷಣ ಬೆಳೆಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತದೆ ಎಂದರು.
ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ, ಅವರಲ್ಲಿನ ಪ್ರತಿಭೆಯನ್ನು ಹೆಚ್ಚಿಸುವಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದೆ. ಶಿಕ್ಷಕರೂ ಸಹಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸಿ ಮಾನಸಿಕ ಸದಢತೆ, ಉತ್ಸಾಹ ಬೆಳೆಸಿಕೊಳ್ಳಬೇಕು ಎಂದರು.
ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಂಭು ಲಿಂಗನಗೌಡ ಪಾಟೀಲ, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತೆ ಜಯಶ್ರೀ ಶಿಂತ್ರೆ ಮಾತನಾಡಿದರು.
ಶಿಕ್ಷಕರ ಕಲ್ಯಾಣ ನಿಧಿಯ ಉಪ ನಿರ್ದೇಶಕ ಹನುಮಂತರಾಯ ಡಿ., ಜಿಲ್ಲಾ ಉಪ ನಿರ್ದೇಶಕ ಎಸ್.ಎಸ್. ಕೆಳದಿಮಠ, ಡಯಟ್ ಪ್ರಾಚಾರ್ಯೆ ಎನ್.ಕೆ. ಸಾವಕಾರ, ಸಂಘದ ಪದಾಧಿಕಾರಿಗಳಾದ ಎಂ.ಕೆ. ಬಿರಾದಾರ, ಜೆ.ಎನ್. ನಂದನ, ವಿ.ಎ್. ಚುಳಕಿ, ಎ್.ವಿ. ಮಂಜಣ್ಣನವರ ವೇದಿಕೆಯಲ್ಲಿದ್ದರು.
ಶಿಕ್ಷಣಾಧಿಕಾರಿಗಳು, ಡಿವೈಪಿಸಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.