ಜಿಲ್ಲೆ

ಸಬ್ಸಿಡಿ ನೆಪದಲ್ಲಿ 1.49 ಕೋಟಿ ರೂ. ವಂಚನೆ

ಕಲಬುರಗಿ: ಪಶುಭಾಗ್ಯ ಯೋಜನೆಯಡಿ ಸಬ್ಸಿಡಿ ಕೊಡಿಸುವುದಾಗಿ ನಂಬಿಸಿ ನಿವೃತ್ತ ಪಶು ಅಧಿಕಾರಿಗೆ ವ್ಯಕ್ತಿಯೊಬ್ಬ ೧.೪೯ ಕೋಟಿ ರೂ.ವಂಚಿಸಿದ ಘಟನೆ ನಗರದಲ್ಲಿ ನಡೆದಿದೆ. ಜಿಡಿಎ ಕಾವೇರಿ ನಗರದ ಕಿರಾಣಿ ಅಂಗಡಿ ಮಾಲೀಕ ಮಲ್ಲಿಕಾರ್ಜುನ ಘನಶೆಟ್ಟಿ ಮೋಸಕ್ಕೆ ಒಳಗಾದವರು. ಚಿಟಗುಪ್ಪದ ನಿವೃತ್ತ ಪಶು ಅಧಿಕಾರಿ ಶಿವಾನಂದ ಎಕಾಂಬರಿ ಆರೋಪಿ.

ಚಿಟಗುಪ್ಪದಲ್ಲಿರುವ ಹೊಟೇಲ್‌ಗೆ ಚಹಾ ಕುಡಿಯಲು ಬರುತ್ತಿದ್ದ ನಿವೃತ್ತ ಪಶು ಅಧಿಕಾರಿ ಶಿವಾನಂದ ಎಕಾಂಬರಿ ಪರಿಚಯ ಆಗಿದೆ. ಪಶು ಭಾಗ್ಯ ಯೋಜನೆಯ ಜನರಲ್ ಕೋಟಾದಲ್ಲಿ ಶೇ.೧೦ ಸಬ್ಸಿಡಿ ಕೊಡಿಸುವುದಾಗಿ ನಂಬಿಸಿದ್ದಾನೆ. ಆಗ ಜಮೀನು ಮಾರಿದ್ದ ೬೫ ಲಕ್ಷ ರೂ. ಹಣವನ್ನು ಹಂತ ಹಂತವಾಗಿ ಮಲ್ಲಿಕಾರ್ಜುನ ಘನಶೆಟ್ಟಿ ನೀಡಿದ್ದಾನೆ. ನಂತರ ಸಬ್ಸಿಡಿ ಹೆಚ್ಚಿಸುವುದಾಗಿ ಹೇಳಿ ಮತ್ತೆ ಹಂತ ಹಂತವಾಗಿ ಒಟ್ಟು ೧.೪೯ ಕೋಟಿ ಹಣ ಪಡೆದಿದ್ದಾನೆ. ಸುಮಾರು ೯ ಲಕ್ಷ ರೂ. ಸಬ್ಸಿಡಿ ಎಂದು ವಾಪಾಸ್ ನೀಡಿದ್ದಾರೆ. ಉಳಿದ ಹಣ ಕೇಳಿದಾಗ ತನ್ನ ಎಸ್‌ಬಿಐ ಖಾತೆ ಚೆಕ್ ನೀಡಿದ್ದಾನೆ. ನಂತರ ಪರಿಚಯದ ಬೆಂಗಳೂರಿನ ಸುನಂದಾ ಪ್ರವೀಣ್ ಎಂಬುವವರಿಗೂ ಸಹ ಪಶುಭಾಗ್ಯ ಯೋಜನೆ ಅಡಿಯಲ್ಲಿ ಸಬ್ಸಿಡಿ ಕೊಡಿಸುವುದಾಗಿ ಹೇಳಿ ನಂಬಿಸಿ ೧೦ ಲP್ಷÀ ರೂ.ಪಡೆದು ಮರಳಿ ಹಣ ನೀಡದೆ ವಂಚಿಸಿದ್ದಾನೆ. ಹಣ ಕೇಳಲು ಹೋದರೆ ಅಟ್ರಾಸಿಟಿ ಕೇಸ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.