ಜಿಲ್ಲೆ

ಸಬ್ಕಾ ವಿಕಾಸ್ ಸಾಕಾರಕ್ಕೆ ದಾಪುಗಾಲಿಡುವ ಬಜೆಟ್

ಚಿತ್ರದುರ್ಗ: ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಬ್ಕಾ ವಿಕಾಸ್ ಸಾಕಾರಕ್ಕೆ ದಾಪುಗಾಲಿಡುವ ಬಜೆಟ್ ಮಂಡಿಸಿದ್ದಾರೆ ಎಂದು ಸಂಸದ ಗೋವಿಂದ ಎಂ. ಕಾರಜೋಳ ಹೇಳಿದ್ದಾರೆ.

ಇದು ಸರ್ವ ವ್ಯಾಪಿ-ಸರ್ವ ಸ್ಪರ್ಶಿಯಾಗಿದೆ. ಬಡವರು, ರೈತರು, ಮಹಿಳೆಯರು, ಯುವಜನರು, ಉದ್ದಿಮೆದಾರರು ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದವರನ್ನೂ ಒಳಗೊಂಡಂತೆ ಶಿಕ್ಷಣ, ಆರೋಗ್ಯ ಸಹಿತ ಪ್ರಮುಖ 10 ಕ್ಷೇತ್ರಗಳ ಅಭಿವೃದ್ಧಿ ಬಗ್ಗೆ ಗಮನ ಹರಿಸಲಾಗಿದೆ. ದೇಶದ ಬೆಳವಣಿಗೆ ಹೆಚ್ಚಿಸಲು, ಮಧ್ಯಮ ವರ್ಗವನ್ನು ಬಲಪಡಿಸುವ ಐತಿಹಾಸಿಕ ಬಜೆಟ್ ಇದಾಗಿದೆ ಎಂದು ತಿಳಿಸಿದ್ದಾರೆ.

ದೇಶದ ಶೇ.70 ಗ್ರಾಮೀಣರು ಕೃಷಿ ಚಟುವಟಿಕೆಗಳ ಭಾಗವಾಗಿದ್ದು, ೃಷಿ ಕ್ಷೇತ್ರದ ಬಲವರ್ಧನೆಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ಸೌಲಭ್ಯವನ್ನು 3 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ ಏರಿಸಲಾಗಿದೆ. ಪ್ರಧಾನಮಂತ್ರಿ ಕೃಷಿ ಧನಧಾನ್ಯ ಯೋಜನೆಯಡಿ 1.7 ಕೋಟಿ ರೈತರಿಗೆ ಶಕ್ತಿ ತುಂಬುವ ಮೂಲಕ ಉತ್ಪಾದಕತೆ ಹೆಚ್ಚಿಸಲು ಕೇಂದ್ರ ಮುಂದಾಗಿದೆ.

ವೈದ್ಯ ಕಾಲೇಜುಗಳಲ್ಲಿ ಸೀಟು ಹೆಚ್ಚಳ, ಸರ್ಕಾರಿ ಶಾಲೆಗಳಿಗೆ ಬ್ರಾಡ್‌ಬ್ಯಾಂಡ್ ಸೌಲಭ್ಯ ಸಿಗಲಿದೆ. ಬೀದಿ ಬದಿ ವ್ಯಾಪಾರಿಗಳಿಗೆ ಕ್ರೆಡಿಟ್ ಕಾರ್ಡ್ ಘೋಷಣೆ ಮೂಲಕ ಅತೀ ಸೂಕ್ಷಸಂಗತಿಗಳ ಬಗ್ಗೆಯೂ ಹಣಕಾಸು ಸಚಿವರು ಗಮನ ನೀಡಿದ್ದಾರೆ ಎಂದು ಸಂಸದರು ತಿಳಿಸಿದ್ದಾರೆ.

ಜಿಲ್ಲಾಸ್ಪತ್ರೆಗಳಲ್ಲಿ ಕ್ಯಾನ್ಸರ್ ತಪಾಸಣೆ ಕೇಂದ್ರಗಳನ್ನು ಸ್ಥಾಪಿಸುವ, ಜಲ್‌ಜೀವನ್ ಮಿಷನ್ ಯೋಜನೆಯನ್ನು 2028 ರವರೆಗೆ ವಿಸ್ತರಿಸುವ ಘೋಷಣೆ ಸ್ವಾಗತಾರ್ಹ. ವೈಯಕ್ತಿಕ ಆದಾಯ ತೆರಿಗೆ ರಿಯಾಯಿತಿ ಮಿತಿ 12 ಲಕ್ಷ ರೂ. ಗೆ ಏರಿಸಿರುವುದು ಶ್ಲಾಘನೀಯ. ರಕ್ಷಣಾ ಕ್ಷೇತ್ರಕ್ಕೆ ಅತಿ ಹೆಚ್ಚು ಅನುದಾನ ಹಂಚಿಕೆ ಮೂಲಕ ಬಲಿಷ್ಠ ಭಾರತ ನಿರ್ಮಾಣದ ವೇಗಕ್ಕೆ ಮತ್ತಷ್ಟು ಚುರುಕು ನೀಡಿದ್ದಾರೆ ಎಂದು ಕಾರಜೋಳ ಅವರು ಅಭಿಪ್ರಾಯಪಟ್ಟಿದ್ದಾರೆ.