ಚಾಮರಾಜನಗರ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಪ್ರತಿಷ್ಠಿತ ಸಂಸ್ಥೆಗಳ ಮೂಲಕ ಅಲ್ಪಸಂಖ್ಯಾತರ ಸಮುದಾಯದ ಯುವ ಜನರಿಗೆ ವಸತಿಯುತ ಪೊಲೀಸ್ ಸಬ್‌ಇನ್ಸ್‌ಸ್ಪೆಕ್ಟರ್ (ಪಿ.ಎಸ್.ಐ) ನೇಮಕಾತಿ ಪರೀಕ್ಷಾ ಪೂರ್ವ ತರಬೇತಿಗೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ರಾಜ್ಯಾಂದ್ಯತ ಅಲ್ಪಸಂಖ್ಯಾತರ ಅಭ್ಯರ್ಥಿಗಳಿಗೆ ಆರ್ಥಿಕ ಹೊರೆ ತಪ್ಪಿಸಲು, ಅಭ್ಯರ್ಥಿಗಳ ಸುರಕ್ಷತಾ ದೃಷ್ಟಿಯಿಂದ ಕಲಿಕಾ ಪೂರಕ ವಾತಾವರಣ ಒದಗಿಸಲು, ಉತ್ತಮ ಫಲಿತಾಂಶ ಮತ್ತು ಸರ್ಕಾರಿ ಉದ್ಯೋಗ ಪಡೆದುಕೊಳ್ಳಲು ಅನುಕೂಲವಾಗುವಂತೆ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ರಾಜ್ಯದ ಬೆಳಗಾವಿ ಅಥವಾ ಮೈಸೂರು ಕಂದಾಯ ವಿಭಾಗಗಳಲ್ಲಿ 90 ದಿನಗಳ ವಸತಿಯುತ ತರಬೇತಿ ನೀಡಲಾಗುವುದು.
ಅಭ್ಯರ್ಥಿಗಳು 21 ರಿಂದ 30 ವರ್ಷದೊಳಗಿರಬೇಕು. ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಯು.ಜಿ.ಸಿ ಮಾನ್ಯತೆ ಪಡೆದ ಅಂಗೀಕೃತ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿರಬೇಕು.ಅಭ್ಯರ್ಥಿಯು ಕರ್ನಾಟಕದ ಖಾಯಂ ನಿವಾಸಿಯಾಗಿದ್ದು ಅಲ್ಪಸಂಖ್ಯಾತರ ಸಮುದಾಯಗಳಾದ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಜೈನ್, ಬೌದ್ಧ ಮತ್ತು ಪಾರ್ಸಿ ಸಮುದಾಯಗಳಿಗೆ ಸೇರಿದವರಾಗಿರಬೇಕು. ನಿಗದಿತ ನಮೂನೆಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆದಿರಬೇಕು. ಪುರಷರಾಗಿದ್ದಲ್ಲಿ ಕನಿಷ್ಠ 168 ಸೆಂ.ಮೀ ಮತ್ತು ಮಹಿಳೆಯರಾಗಿದ್ದಲ್ಲಿ ಕನಿಷ್ಠ 157 ಸೆಂ.ಮೀ ಎತ್ತರ ಹಾಗೂ ಪುರಷರು ಕನಿಷ್ಠ 50 ಕೆ.ಜಿ ಮತ್ತು ಮಹಿಳೆಯರು ಕನಿಷ್ಠ 45 ಕೆ.ಜಿ. ತೂಕವಿರಬೇಕು. ಎದೆಯ ಸುತ್ತಳತೆ (ಪುರುಷರಿಗೆ) ಕನಿಷ್ಠ 76 ಸೆಂ.ಮೀ ಇರಬೇಕು.\
ಅಭ್ಯರ್ಥಿಗಳನ್ನು ಪದವಿಯಲ್ಲಿ ಪಡೆದ ಅಂಕಗಳ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಮೈಸೂರು ಮತ್ತು ಬೆಳಗಾವಿಯಲ್ಲಿ ತರಬೇತಿ ನಡೆಯಲಿದ್ದು, ಅರ್ಜಿಗಳನ್ನು ವೆಬ್‌ಸೈಟ್ ಮೂಲಕ ಮೇ 23ರೊಳಗೆ ಸಲ್ಲಿಸಬೇಕು. ಇಲಾಖಾ ವೆಬ್-ಸೈಟ್ ನಲ್ಲಿ ಕಾಲಕಾಲಕ್ಕೆ ನೀಡಲಾಗುವ ಮಾಹಿತಿಯು ಅಧಿಕೃತ ಮತ್ತು ಅಂತಿಮವಾಗಿರುತ್ತದೆ. ಅಭ್ಯರ್ಥಿಯು ತರಬೇತಿಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗೆ ಅಂತಿಮ ವರ್ಷದ ಪದವಿ ಫಲಿತಾಂಶ ಪ್ರಕಟಗೊಂಡಿರಬೇಕು. ಕುಟುಂಬದ ವಾರ್ಷಿಕ ಆದಾಯ 8 ಲಕ್ಷ ರೂ.ಗಳನ್ನು ಮೀರಿರಬಾರದು. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆದಿರಬೇಕು. ಇಲಾಖಾ ವತಿಯಿಂದ ಯಾವುದೇ ಪತ್ರ ವ್ಯವಹಾರವನ್ನು ನಡೆಸಲಾಗುವುದಿಲ್ಲವಾದ್ದರಿಂದ, ಇಲಾಖಾ ವೆಬ್‌ಸೈಟ್ ವೀಕ್ಷಿಸಬೇಕು. ತಪ್ಪು ಮಾಹಿತಿಯಿಂದ ಉಂಟಾಗಬಹುದಾದ ಲೋಪಗಳಿಗೆ ಸಂಬಂಧಪಟ್ಟ ಅಭ್ಯರ್ಥಿಗಳೇ ಕಾರಣವಾಗಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ನಗರದ ಜಿಲ್ಲಾಡಳಿತ ಭವನದ ಮಲ್ಟಿಪರ್ಪಸ್ ಹಾಲ್‌ನಲ್ಲಿರುವ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿಗಳ ಕಚೇರಿ ಅಥವಾ ಅಲ್ಪಸಂಖ್ಯಾತರ ಸಹಾಯವಾಣಿ ಸಂಖ್ಯೆ 8277799990 ಸಂಪರ್ಕಿಸುವಂತೆ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.