ಭರತ್ ಶೆಟ್ಟಿಗಾರ್ ಮಂಗಳೂರು
ಹಿಂದು ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಕನಸಿನ ಯೋಜನೆ ‘ಸಪ್ತಪದಿ’ ಸಾಮೂಹಿಕ ಸರಳ ವಿವಾಹ ಯೋಜನೆಗೆ ಕರಾವಳಿ ಜನರೇ ಆಸಕ್ತಿ ತೋರುತ್ತಿಲ್ಲ. ದ.ಕ-ಉಡುಪಿ ಜಿಲ್ಲೆಯಲ್ಲಿ ನೋಂದಣಿ ಆರಂಭವಾಗಿದ್ದು, ನಿರೀಕ್ಷೆಗೆ ತಕ್ಕ ಪ್ರತಿಕ್ರಿಯೆ ಲಭಿಸಿಲ್ಲ.
ಇಲಾಖೆ ವ್ಯಾಪ್ತಿಗೆ ಒಳಪಡುವ ದ.ಕ ಜಿಲ್ಲೆಯ 20 ಮತ್ತು ಉಡುಪಿ ಜಿಲ್ಲೆಯ 15 ‘ಎ’ ವರ್ಗದ ದೇವಾಲಯಗಳಲ್ಲಿ ಏ.26 ಮತ್ತು ಮೇ 24ರಂದು ಸಾಮೂಹಿಕ ಸರಳ ವಿವಾಹ ಆಯೋಜಿಸಲು ಉದ್ದೇಶಿಸಲಾಗಿದೆ. ದ.ಕ.ಜಿಲ್ಲೆಯಲ್ಲಿ ಇಲ್ಲಿಯವರೆಗೆ 90 ಅರ್ಜಿಗಳನ್ನು ಜನರು ಪಡೆದಿದ್ದರು. ಇದರಲ್ಲಿ ನೋಂದಣಿಯಾದದ್ದು 10 ಮಾತ್ರ. ಉಡುಪಿ ಜಿಲ್ಲೆಯಲ್ಲಿ 210 ಮಂದಿ ಅರ್ಜಿ ಪಡೆದಿದ್ದರೂ, 40 ಮಂದಿ ಮದುವೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ.
ಮಾ.27ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಇಲಾಖೆ ಜಾಹೀರಾತು, ಹೋರ್ಡಿಂಗ್ಸ್, ಕರಪತ್ರಗಳ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡುತ್ತಲೇ ಇದೆ. ವಿವಾಹ ಯೋಜನೆ ಮಾಹಿತಿಗೆ 1800-4256654 ಟೋಲ್ ಫ್ರೀ ಸಂಖ್ಯೆಯನ್ನು ಸಂಪರ್ಕಿಸಬಹುದು. ಮುಂದಿನ ದಿನಗಳಲ್ಲಿ ನೋಂದಣಿ ಹೆಚ್ಚಾಗಬಹುದು ಎನ್ನುವುದು ಇಲಾಖೆಯ ಅಧಿಕಾರಿಗಳ ವಿಶ್ವಾಸ.
ನೋಂದಣಿ ಮಾಡಿಕೊಳ್ಳುವುದು ಹೇಗೆ?: ಸಪ್ತಪದಿ ಯೋಜನೆಯಡಿ ಮದುವೆ ಆಗ ಬಯಸುವವರು ಆಯಾ ದೇವಾಲಯ ಕಚೇರಿಯಿಂದ ಅರ್ಜಿ ಪಡೆದು ಸಲ್ಲಿಸಬೇಕು. ಅರ್ಜಿಯೊಂದಿಗೆ ವಧು-ವರರ ತಂದೆ, ತಾಯಿ ಒಪ್ಪಿಗೆ ಪತ್ರ, ಪಡಿತರ ಚೀಟಿ ಜೆರಾಕ್ಸ್, ವಯಸ್ಸಿನ ದೃಢೀಕರಣ ಪತ್ರ ಮೊದಲಾದ ದಾಖಲೆಗಳನ್ನು ಇಡಬೇಕು. ವಿವಾಹ ಸ್ಥಳದಲ್ಲಿ ವಿವಾಹ ನೋಂದಣಾಧಿಕಾರಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದು ವಿವಾಹ ನೋಂದಣಿ ಮಾಡಿಕೊಳ್ಳಲಿದ್ದಾರೆ.
ಇಲಾಖೆಯಿಂದ ಪ್ರೋತ್ಸಾಹ: ಯೋಜನೆಯಲ್ಲಿ ವರನಿಗೆ ಹೂವಿನ ಹಾರ, ಪಂಚೆ, ಶರ್ಟ್ ಮತ್ತು ಶಲ್ಯಕ್ಕಾಗಿ 5 ಸಾವಿರ ರೂ. ಪ್ರೋತ್ಸಾಹ ಧನ ಮತ್ತು ವಧುವಿಗೆ ಹೂವಿನ ಹಾರ, ಧಾರೆ ಸೀರೆ ಮತ್ತು ರವಿಕೆ ಕಣಕ್ಕಾಗಿ 10 ಸಾವಿರ ರೂ. ಪ್ರೋತ್ಸಾಹಧನ ಹಾಗೂ 40 ಸಾವಿರ ರೂ. ಮೌಲ್ಯದ 8 ಗ್ರಾಂ ತೂಕದ ಚಿನ್ನದ ತಾಳಿ, 2 ಚಿನ್ನದ ಗುಂಡು ನೀಡಲಾಗುತ್ತದೆ. ಪೂರಕವಾಗಿ ಕಂದಾಯ ಇಲಾಖೆಯ ಆದರ್ಶ ವಿವಾಹ ಯೋಜನೆಯಡಿ 2 ವರ್ಷದ 10 ಸಾವಿರ ರೂ. ಬಾಂಡ್, ಪ.ಜಾ, ಪ.ಪಂ ಮದುಮಕ್ಕಳಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ 50 ಸಾವಿರ ರೂ. ನಗದು ದೊರೆಯಲಿದೆ.
ಈ ದೇವಸ್ಥಾನಗಳಲ್ಲಿವೆ ವಿವಾಹ ಸೌಲಭ್ಯ: ದ.ಕ. ಜಿಲ್ಲೆಯಲ್ಲಿ ಶ್ರೀ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ, ಸೋಮೇಶ್ವರ ಸೋಮನಾಥೇಶ್ವರ ದೇವಸ್ಥಾನ, ಬಪ್ಪನಾಡು ದುರ್ಗಾಪರವೇಶ್ವರಿ ದೇವಸ್ಥಾನ, ಕುಡುಪು ಅನಂತ ಪದ್ಮನಾಭ, ಕದ್ರಿ ಮಂಜುನಾಥ, ಮಂಗಳಾದೇವಿ ದೇವಸ್ಥಾನ, ಪಣಂಬೂರು ನಂದನೇಶ್ವರ , ಕಾಟಿಪಳ್ಳ ಮಹಾಗಣಪತಿ, ಕಾವೂರು ಮಹಾಲಿಂಗೇಶ್ವರ ದೇವಸ್ಥಾನ, ಶಿಬರೂರು ಕೊಡಮಂತಾಯ ದೈವಸ್ಥಾನ, ಮರೋಳಿ ಸೂರ್ಯನಾರಾಯಣ ದೇವಸ್ಥಾನ, ಪೊಳಲಿ ರಾಜರಾಜೇಶ್ವರಿ ದೇವಸ್ಥಾನ, ನಂದಾವರ ವಿನಾಯಕ ಶಂಕರನಾರಾಯಣ ದುರ್ಗಾಂಬ ದೇವಸ್ಥಾನ, ಪಣೋಲಿಬೈಲು ಕಲ್ಲುರ್ಟಿ ದೈವಸ್ಥಾನ, ಪುತ್ತೂರು ಮಹಾಲಿಂಗೇಶ್ವರ, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ, ಸೌತಡ್ಕ ಮಹಾಗಣಪತಿ, ಬಳ್ಳಮಂಜ ಅನಂತಪದ್ಮನಾಭ, ಕುಕ್ಕೆ ಸುಬ್ರಹ್ಮಣ್ಯ, ತೋಡಿಕಾನ ಮಲ್ಲಿಕಾರ್ಜುನ ದೇವಸ್ಥಾನ. ಉಡುಪಿ ಜಿಲ್ಲೆಯಲ್ಲಿ ಶ್ರೀ ಮಂದಾರ್ತಿ ಶ್ರೀದುರ್ಗಾಪರಮೇಶ್ವರಿ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ, ಉಪ್ಪುಂದ ದುರ್ಗಾಪರಮೇಶ್ವರಿ, ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನ, ಪೆರ್ಡೂರು ಅನಂತ ಪದ್ಮನಾಭ, ಕಾಪು ಹೊಸ ಮಾರಿಗುಡಿ, ಪಡುಬಿದ್ರಿ ಮಹಾಲಿಂಗೇಶ್ವರ, ಹಿರಿಯಡ್ಕ ವೀರಭದ್ರ ದೇವಸ್ಥಾನ, ಕಡಿಯಾಳಿ ಮಹಿಷಮರ್ಧಿನಿ, ಕಮಲಶಿಲೆ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನ, ಕೋಟೇಶ್ವರ ಕೋಟಿ ಲಿಂಗೇಶ್ವರ, ಗುಡ್ಡೆಮ್ಮಾಡಿ ಸುಬ್ರಹ್ಮಣ್ಯ ದೇವಸ್ಥಾನ, ಕೋಟ ಅಮೃತೇಶ್ವರಿ, ನೀಲಾವರ ಮಹಿಷ ಮರ್ಧಿನಿ ದೇವಸ್ಥಾನದಲ್ಲಿ ಸಪ್ತಪದಿ ಸಾಮೂಹಿಕ ವಿವಾಹಕ್ಕೆ ಅವಕಾಶವಿದೆ.
ಇತರ ಜಿಲ್ಲೆಗೆ ಹೋಲಿಸಿದರೆ ದ.ಕ.ಜಿಲ್ಲೆಯಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ಮದುವೆಯಾಗುವುದು ಕಡಿಮೆ. ದೇವಳಗಳಲ್ಲಿ ಮದುವೆಯಾಗುವವರೂ ಇದ್ದಾರೆ. ಸಾಮೂಹಿಕ ವಿವಾಹದ ಮೂಲಕ ಸಮಾಜಕ್ಕೆ ಮಾದರಿಯಾಗಲು ಇದೊಂದು ಅವಕಾಶ. ಏಪ್ರಿಲ್-ಮೇ ತಿಂಗಳಲ್ಲಿ ಮದುವೆಯಾಗಲು ಉದ್ದೇಶಿಸುವವರು ಸಪ್ತಪದಿ ಸಾಮೂಹಿಕ ವಿವಾಹ ಯೋಜನೆಯ ಸುದುಪಯೋಗ ಪಡೆದುಕೊಳ್ಳಬಹುದು. ಕೋಟ ಶ್ರೀನಿವಾಸ ಪೂಜಾರಿ ಸಚಿವ, ಹಿಂದು ಧಾರ್ಮಿಕ, ಧರ್ಮಾದಾಯ ದತ್ತಿ ಇಲಾಖೆ