ಹೊಳಲ್ಕೆರೆ (ಚಿತ್ರದುರ್ಗ)
ಪಟ್ಟಣದಲ್ಲಿ ಇತ್ತೀಚೆಗೆ ಮೃತಪಟ್ಟಿದ್ದ ಸನ್ಯಾಸಿ ಶಾಸ್ತ್ರಿಯೊಬ್ಬರ ಮನೆಯಲ್ಲಿ ಬಿಂದಿಗೆ, ಕೊಡ, ಚೀಲಗಳಲ್ಲಿ ಕೂಡಿಟ್ಟಿದ್ದ ಬರೋಬ್ಬರಿ 45 ಲಕ್ಷ ರೂ. ಗಳಿಗೂ ಹೆಚ್ಚಿನ ಹಣ ಪತ್ತೆಯಾಗಿದೆ.
ಗಂಗಾಧರಯ್ಯ(70) ಮೃತ ವ್ಯಕ್ತಿಯಾಗಿದ್ದು, ಅವಿವಾಹಿತರಾಗಿದ್ದ ಅವರು ಪಟ್ಟಣದ ಮದಕರಿ ಸರ್ಕಲ್ ಬಳಿಯ ಮನೆಯಲ್ಲಿ ಒಬ್ಬಂಟಿಯಾಗಿ ವಾಸ ಮಾಡುತ್ತಿದ್ದರು.
ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕಳೆದ ಜೂ.22ರ ರಾತ್ರಿ ಪಟ್ಟಣದ ಕಾಲಭೈರವೇಶ್ವರ ದೇವಸ್ಥಾನಕ್ಕೆ ತೆರಳಿದ್ದ ಸಂದರ್ಭ ಹೃದಯಾಘಾತದಿಂದ ಮೃತಪಟ್ಟಿದ್ದರು. ಪಟ್ಟಣದ ನಿವಾಸಿಗಳು ಅಂತ್ಯಸಂಸ್ಕಾರ ಮಾಡಿದ್ದರು.
ಗಂಗಾಧರಯ್ಯನವರ ಮನೆಯನ್ನು ಭಾನುವಾರ ಪರಿಶೀಲನೆ ನಡೆಸಿದಾಗ 10ರಿಂದ 500 ರೂ. ಮುಖಬೆಲೆಯ ನೋಟುಗಳು ದೊರೆತಿವೆ. ಒಂದು, ಎರಡು, ಐದು ರೂ. ಮುಖಬೆಲೆಯ ನಾಣ್ಯಗಳ ಮೌಲ್ಯವೇ 46,000 ರೂ. ಇದೆ. ಮನೆಯಲ್ಲಿ ತೆಂಗಿನಕಾಯಿ ರಾಶಿಯ ಕೆಳಗೆ ನೋಟು ತುಂಬಿದ ಹಲವು ಚೀಲಗಳು ಪತ್ತೆಯಾಗಿವೆ. ಮನೆಯ ಅಟ್ಟದ ಮೇಲೆ ಹಣ ತುಂಬಿದ ಕೊಡ ಸಿಕ್ಕಿದೆ.
ಹಣದ ಮೂಲ: ಗಂಗಾಧರಯ್ಯ ಶಾಸ್ತ್ರಿಯವರು ನಂದೀಶ್ವರ ಮಠದ ಅನುಯಾಯಿಯಾಗಿದ್ದು, ಶಾಸ್ತ್ರ ಹೇಳುವುದು ಹಾಗೂ ಶುಭ ಕಾರ್ಯಗಳಿಗೆ ಪೂಜೆ ಮಾಡಿಸುತ್ತಿದ್ದರು. 16 ಎಕರೆ ಜಮೀನು, 4 ಎಕರೆ ತೆಂಗಿನ ತೋಟ, ಗದ್ದೆ ಹೊಂದಿದ್ದರು. ಪೌರೋಹಿತ್ಯ ಹಾಗೂ ತೆಂಗಿನ ತೋಟ, ಜಮೀನಿನಿಂದ ಬಂದ ಆದಾಯವನ್ನು ಕೂಡಿಡುವ ಅಭ್ಯಾಸ ಬೆಳಸಿಕೊಂಡಿದ್ದರು. ಸರಳ, ಜೀವನ ನಡೆಸುತ್ತಿದ್ದ ಇವರು, ಇಂತಿಷ್ಟೇ ಹಣ ಕೊಡಿ ಎಂದು ಯಾರ ಬಳಿಯೂ ಕೇಳುತ್ತಿರಲಿಲ್ಲ.
ಭಕ್ತರು ಕೊಟ್ಟ ಕಾಣಿಕೆ ಪಡೆದು ಮನೆಯಲ್ಲಿ ಇಡುತ್ತಿದ್ದರು. ಬ್ಯಾಂಕ್ ವ್ಯವಹಾರ ಮಾಡುತ್ತಿರಲಿಲ್ಲ ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.
ಅವರ ಸಾವಿನ ನಂತರ ಭಕ್ತರ ಸಮ್ಮುಖದಲ್ಲಿ ಮನೆಯಲ್ಲಿದ್ದ ಹಣವನ್ನು ಎಣಿಕೆ ಮಾಡಿ ಅದನ್ನು ಬ್ಯಾಂಕ್‌ನಲ್ಲಿ ಠೇವಣಿ ಇಡಲಾಗಿದೆ. ಗಂಗಯ್ಯ ಅವರಿಂದ ಕೆಲವರು ಸಾಲ ಪಡೆದಿರಬಹುದು. ಅವರ ಸಾವಿನ ಹಿಂದಿನ ದಿನ ಭಕ್ತರೊಬ್ಬರು 1 ಲಕ್ಷ ನಗದು ತಂದು ಕೊಟ್ಟಿದ್ದರು ಎಂದು ಹೇಳಲಾಗಿದೆ. ತಾವು ಶಾಸ್ತ್ರಿಗಳಿಂದ 2 ಲಕ್ಷ ಹಣ ಪಡೆದಿದ್ದು, ಅದನ್ನು ಹಿಂದಿರುಗಿಸುತ್ತೇನೆ ಎಂದು ಮತ್ತೊಬ್ಬ ಭಕ್ತರು ಹೇಳಿದ್ದಾರೆ.
ಮನೆಯೊಳಗೆ ಯಾರನ್ನೂ ಬಿಟ್ಟುಕೊಳ್ಳುತ್ತಿರಲಿಲ್ಲ
ಗಂಗಾಧರಯ್ಯ ಒಂಟಿ ಜೀವನ ನಡೆಸುತ್ತಿದ್ದರು. ಅವಿವಾಹಿತರಾಗಿದ್ದ ಅವರು, ಬೇರೆಯವರು ಮಾಡಿದ ಅಡುಗೆ ಸೇವಿಸುತ್ತಿರಲಿಲ್ಲ. 70ರ ಹರೆಯದಲ್ಲೂ ತಾವೇ ಅಡುಗೆ ಮಾಡಿಕೊಳ್ಳುತ್ತಿದ್ದರು. ಯಾರನ್ನೂ ಮನೆ ಒಳಗೆ ಬಿಟ್ಟುಕೊಳ್ಳುತ್ತಿರಲಿಲ್ಲ. ಚಪ್ಪಲಿ ಕೂಡ ಧರಿಸುತ್ತಿರಲಿಲ್ಲ. ಅವರು ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಆಸ್ಪತ್ರೆಗೆ ಹೋಗೋಣವೆಂದರೂ ಒಪ್ಪಿರಲಿಲ್ಲ. ಗದ್ದುಗೆ ನಿರ್ಮಿಸಿ ಪೂಜೆ
ಜು.5ರಂದು ಗಂಗಾಧರಯ್ಯನವರ ಪುಣ್ಯಾರಾಧನೆ ಕಾರ್ಯಕ್ರಮವಿದೆ. ಅದು ಮುಗಿದ ಬಳಿಕ ತೋಟದಲ್ಲಿರುವ ಅವರ ಸಮಾಧಿ ಸ್ಥಳವನ್ನು ಸ್ಮಾರಕವನ್ನಾಗಿ ನಿರ್ಮಿಸಲಾಗುವುದು. ದಿನನಿತ್ಯ ಪೂಜೆ ಮಾಡಲು ಒಬ್ಬ ವ್ಯಕ್ತಿಯನ್ನು ನಿಯೋಜಿಸುವ ಕುರಿತು ಚರ್ಚೆ ನಡೆಸಿದ್ದೇವೆ. ಪಾರ್ಕ್ ನಿರ್ಮಿಸಿ ಅವರ ಹೆಸರನ್ನು ಅಚ್ಚಳಿಯದಂತೆ ಉಳಿಸುವ ಪ್ರಯತ್ನ ಮಾಡಲಾಗುವುದು
ಬಿ.ಎಸ್.ರುದ್ರಪ್ಪ, ಪುರಸಭೆ ಸದಸ್ಯ