ಚಾಮರಾಜನಗರ: ಹೊಸ ವರ್ಷದಲ್ಲಿ ಒಳ್ಳೆಯ ವಿಚಾರಗಳ ಬಗ್ಗೆ ಆಲೋಚಿಸಿ ಮುನ್ನಡೆಯೋಣ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಎಸ್.ಭಾರತಿ ಹೇಳಿದರು.
ನಗರದ ಜಿಲ್ಲಾ ವಕೀಲರ ಸಂಘ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ನೂತನ ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ವಕೀಲರು ಹಾಗೂ ನ್ಯಾಯಾಧೀಶರ ನಡುವೆ ಉತ್ತಮ ಬಾಂಧವ್ಯವಿರಲಿ. ಏನೇ ಸಮಸ್ಯೆಗಳಿದ್ದರೂ ಮುಕ್ತವಾಗಿ ಚರ್ಚಿಸಿ ಬಗೆಹರಿಸಿಕೊಳ್ಳಿ. ಸಮಾಜದಲ್ಲಿ ಪ್ರತಿಯೊಬ್ಬರೂ ಸನ್ಮಾರ್ಗದಲ್ಲಿ ನಡೆದು ಬಾಳ್ವೆ ನಡೆಸೋಣ ಎಂದರು.
ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಎಂ.ಆರ್.ಲೋಕಪ್ಪ ಮಾತನಾಡಿ, ಈ ಹಿಂದೆ ನ್ಯಾಯಾಧೀಶರಿಗೆ ಒಳ್ಳೆಯ ಸಹಕಾರ ನೀಡಿದ್ದೀರಿ. ಅದೇ ರೀತಿ ಮುಂದೆಯೂ ಸಹಕಾರ ನೀಡುವಂತೆ ವಕೀಲರಿಗೆ ತಿಳಿಸಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಮಾತನಾಡಿ, ಯುವ ವಕೀಲರು ಹಿರಿಯರ ಮಾರ್ಗದರ್ಶನ ಪಡೆದು ಉತ್ತಮ ರೀತಿಯಲ್ಲಿ ವೃತ್ತಿಯನ್ನು ನಿರ್ವಹಿಸಿಕೊಂದು ಮುನ್ನಡೆಯಿರಿ. ಸಮಾಜದ ಅಭಿವೃದ್ಧಿಗೆ ಯುವ ವಕೀಲರ ಪಾತ್ರ ಮಹತ್ವದ್ದಾಗಿದೆ ಎಂದರು.
ಮಕ್ಕಳ ಸ್ನೇಹಿ ನ್ಯಾಯಾಲಯದ ನ್ಯಾಯಾಧೀಶೆ ಎ.ಸಿ.ನಿಶಾರಾಣಿ ಮಾತನಾಡಿದರು. ಇದೇ ವೇಳೆ ಹೊಸ ವರ್ಷದ ಹಿನ್ನೆಲೆಯಲ್ಲಿ ಕೇಕ್ ಕತ್ತರಿಸಲಾಯಿತು. ರೆಡ್‌ಕ್ರಾಸ್ ಸಂಸ್ಥೆಯ ವತಿಯಿಂದ ಎಲ್.ಸುರೇಶ್ ಮಾಸ್ಕ್ ವಿತರಿಸಿದರು. ವಕೀಲರ ಸಂಘದಿಂದ ಹೊರತಂದಿರುವ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.
ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಎಸ್. ಹೊನ್ನಸ್ವಾಮಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಶ್ರೀಧರ, ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಚಂಪಕ, ಪ್ರಧಾನ ಸಿವಿಲ್ ನ್ಯಾಯಾಧೀಶರಾದ ವೆಂಕಟೇಶ್, ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ನಿವೇದಿತಾ, ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಎಸ್.ಮಂಜು ಹರವೆ, ಪ್ರಧಾನ ಕಾರ್ಯದರ್ಶಿ ಎನ್. ಕೆ.ವಿರೂಪಾಕ್ಷಸ್ವಾಮಿ, ಖಜಾಂಚಿ ಆರ್.ಗಿರೀಶ್, ಜಂಟಿ ಕಾರ್ಯದರ್ಶಿ ಮಲ್ಲು ಹಾಗೂ ವಕೀಲರು ಹಾಜರಿದ್ದರು.