ಚಿತ್ರದುರ್ಗ: ಸರ್ವರ ಜೀವನ ಉದ್ದೀಪನಗೊಳಿಸಲು ಸನ್ಮಾರ್ಗದಲ್ಲಿ ನಡೆಯಬೇಕು ಎಂಬುದು ಅಂಬೇಡ್ಕರ್ ಅವರ ಆಶಯವಾಗಿತ್ತು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಕೆ.ಬಿ.ಗೀತಾ ಹೇಳಿದರು.
ವಕೀಲರ ಭವನದಲ್ಲಿ ಜಿಲ್ಲಾ ವಕೀಲರ ಬಳಗದಿಂದ ಸೋಮವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 133ನೇ ಜಯಂತಿ ಉದ್ಘಾಟಿಸಿ ಮಾತನಾಡಿದರು.
ಸ್ವಾತಂತ್ರ್ಯ, ಸಮಾನತೆ, ಸಹೋದರತ್ವ ಬೋಧಿಸುವ ಧರ್ಮ ಸಂವಿಧಾನಶಿಲ್ಪಿ ಇಷ್ಟಪಡುತ್ತಿದ್ದರು. ಆಳ ಅಧ್ಯಯನ ಮಾಡಿದ್ದ ಅವರು ಕಷ್ಟ ಸಹಿಷ್ಣುವಾಗಿದ್ದರು. ಪ್ರಪಂಚ ಪರ್ಯಟನೆ ಮಾಡಿ ಭಾರತಕ್ಕೆ ಅತ್ಯಂತ ಶಕ್ತಿಶಾಲಿಯಾದ ಸಂವಿಧಾನವನ್ನು ಕೊಡುಗೆಯಾಗಿ ನೀಡಿದ್ದಾರೆ. ಹೀಗಾಗಿ ಅವರೊಬ್ಬ ಕಾನೂನು ಪಿತಾಮಹ ಎಂದು ಬಣ್ಣಿಸಿದರು.
1ನೇ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಶಂಕರಪ್ಪ ನಿಂಬಣ್ಣ ಕಲ್ಕಣಿ ಮಾತನಾಡಿ, ದೇಶಕ್ಕೆ ಸಂವಿಧಾನ ನೀಡಿರುವ ಅಂಬೇಡ್ಕರ್ ಅವರು ವಿದ್ವತ್ತನ್ನು ಸ್ವಂತಕ್ಕೆ ಎಂದಿಗೂ ಬಳಸಿಕೊಳ್ಳಲಿಲ್ಲ. ಜನಸಾಮಾನ್ಯರ ಹಕ್ಕುಗಳ ರಕ್ಷಣೆಗೆ ಕಾನೂನುಗಳನ್ನು ಜಾರಿಗೆ ತಂದರು. ದೇಗುಲಕ್ಕಿಂತ ಶಾಲೆಗಳ ಸಂಖ್ಯೆ ಹೆಚ್ಚಿಸಲು ಒತ್ತು ನೀಡಬೇಕೆಂಬುದು ಅವರ ಚಿಂತನೆಯಾಗಿತ್ತು ಎಂದರು.
ಬಾಲ್ಯದಿಂದಲೂ ಜೀವನದಲ್ಲಿ ಅನೇಕ ವಿರೋಧ ಎದುರಿಸಿದ ಅಂಬೇಡ್ಕರ್ ತತ್ವಗಳಂತೆ ಎಲ್ಲರೂ ನಡೆಯುವುದೇ ಅವರಿಗೆ ನೀಡುವ ಬಹುದೊಡ್ಡ ಗೌರವ ಎಂದು ಹೇಳಿದರು.
ನ್ಯಾಯಾಧೀಶರಾದ ಎಂ.ವಿಜಯ, ಎ.ಎಂ.ಚೈತ್ರಾ, ನೇಮಿಚಂದ್, ಅನಿತಾಕುಮಾರ್, ವಕೀಲ ಬೀಸ್ನಳ್ಳಿ ಜಯಣ್ಣ, ವಕೀಲರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ, ಉಪಾಧ್ಯಕ್ಷ ಬಿ.ಎಂ.ಅನಿಲ್‌ಕುಮಾರ್, ಪದಾಧಿಕಾರಿಗಳಾದ ಆರ್.ಗಂಗಾಧರ್, ಗಿರೀಶ್ ಮಲ್ಲಾಪುರ, ಪ್ರದೀಪ್‌ಕುಮಾರ್, ಮಾಜಿ ಅಧ್ಯಕ್ಷ ವಿಜಯಕುಮಾರ್ ಇತರರಿದ್ದರು.