ಜಿಲ್ಲೆ

ಸನ್ಮಾನಕ್ಕೆ ಸೀಮಿತವಾದ ಸಾಮಾನ್ಯ ಸಭೆ

ಧಾರವಾಡ: ಜಿಲ್ಲಾ ಪಂಚಾಯಿತಿ ಸದಸ್ಯರ ಅಧಿಕಾರಾವಧಿ ಸೋಮವಾರ ಅನೌಪಚಾರಿಕವಾಗಿ ಮುಕ್ತಾಯ ವಾಯಿತು. ಉಪಾಧ್ಯಕ್ಷ ಹೊರತುಪಡಿಸಿ ಅಧ್ಯಕ್ಷೆ ಹಾಗೂ ಸರ್ವ ಸದಸ್ಯರಿಗೆ ಸನ್ಮಾನಿಸುವ ಮೂಲಕ ಸಾಮಾನ್ಯ ಸಭೆ, ಸನ್ಮಾನ ಸಮಾರಂಭವಾಗಿ ಮಾರ್ಪಟ್ಟಿತು.

ಸಾಮಾನ್ಯ ಸಭೆ ಬೆಳಗ್ಗೆ 11 ಗಂಟೆಗೆ ನಿಗದಿಯಾಗಿತ್ತು. ಆದರೆ, ಉಪಾಧ್ಯಕ್ಷ ಶಿವಾನಂದ ಕರಿಗಾರ ಅವರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೋಮವಾರವೂ ಜಿಪಂ ಮುಖ್ಯ ದ್ವಾರದ ಬಳಿ ಧರಣಿ ಮುಂದುವರಿಸಿದರು. ನಂತರ ಬಂದ ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ ಹಾಗೂ ಕೆಲ ಸದಸ್ಯರು ಧರಣಿಗೆ ಸಾಥ್ ನೀಡಿದರು. ಹೀಗಾಗಿ, ಸಾಮಾನ್ಯ ಸಭೆಯಲ್ಲಿ ಕೋರಂ ಕೊರತೆ ಎದುರಾಯಿತು.

ಅಷ್ಟೊತ್ತಿಗೆ ಸಿಇಒ ಡಾ. ಪಿ. ಸುಶೀಲಾ ಅವರು ಜಿ.ಪಂ. ಸಭಾಂಗಣದಲ್ಲಿ ಹಾಜರಿದ್ದರು. ಅಲ್ಲಿದ್ದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಅವರು, ಅಧಿಕಾರ ವಹಿಸಿಕೊಂಡಾಗಿನಿಂದ ಅಭಿವೃದ್ಧಿ ಕೆಲಸಗಳಿಗೆ ಸ್ಪಂದಿಸಿಲ್ಲವೇ? ಎಂದು ಪ್ರಶ್ನಿಸಿದರು. ಅಲ್ಲಿದ್ದ ಕೆಲ ಕಾಂಗ್ರೆಸ್, ಬಿಜೆಪಿ ಸದಸ್ಯರು ಉತ್ತಮವಾಗಿ ಸ್ಪಂದಿಸುತ್ತಿದ್ದೀರಿ ಎಂದರು.

ನಂತರ ಸಭಾಂಗಣಕ್ಕೆ ಆಗಮಿಸಿದ ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ, ಕೋರಂ ಕೊರತೆಯ ಹಿನ್ನೆಲೆಯಲ್ಲಿ ಊಟದ ವಿರಾಮದ ನಂತರ ಸಭೆ ಮುಂದುವರಿಸುವುದಾಗಿ ಘೋಷಿಸಿದರು. ಊಟದ ನಂತರ ಸಭೆ ಸೇರಿದರೂ ಕೋರಂ ಕೊರತೆಯಿಂದ ಸಭೆಯನ್ನು ಅನಿರ್ದಿಷ್ಟಾವಧಿವರೆಗೆ ಮುಂದೂಡಲಾಯಿತು.

ಸನ್ಮಾನ: ಹಾಲಿ ಸದಸ್ಯರ ಅಧಿಕಾರವಧಿ 2021ರ ಮೇ 4ರವರೆಗೆ ಇದ್ದರೂ ಮತ್ತೊಂದು ಸಾಮಾನ್ಯ ಸಭೆ ಜರುಗುವ ಸಾಧ್ಯತೆ ಇಲ್ಲ. ಹೀಗಾಗಿ, ಜಿಪಂ ಸಿಇಒ ಸುಶೀಲಾ ಅವರು ಎಲ್ಲ ಸದಸ್ಯರನ್ನು ಸನ್ಮಾನಕ್ಕೆ ಆಹ್ವಾನಿಸಿದರು. ಎಲ್ಲರನ್ನೂ ವೇದಿಕೆಗೆ ಕರೆಸಿ ಮೊದಲು ಮಹಿಳಾ ಸದಸ್ಯರು ನಂತರ ಪುರುಷ ಸದಸ್ಯರನ್ನು ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಟ್ಟರು. ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸದಸ್ಯರನ್ನು ಸನ್ಮಾನಿಸಿದರು.

ಮಾಜಿ ಅಧ್ಯಕ್ಷೆ ಚೈತ್ರಾ ಶಿರೂರ ಆಕ್ರೋಶ: ಜಿ.ಪಂ. ಸಾಮಾನ್ಯ ಸಭೆ ಕರೆದು ಸ್ವತಃ ಅಧ್ಯಕ್ಷ- ಉಪಾಧ್ಯಕ್ಷರೇ ಧರಣಿ ಕುಳಿತಿರುವುದು ಖಂಡನೀಯ ಎಂದು ಮಾಜಿ ಅಧ್ಯಕ್ಷೆ ಚೈತ್ರಾ ಶಿರೂರ ಆಕ್ರೋಶ ವ್ಯಕ್ತಪಡಿಸಿದರು. ಅವರಿಗೆ ಕೆಲ ಕಾಂಗ್ರೆಸ್ ಸದಸ್ಯರು ಬೆಂಬಲ ನೀಡಿದ್ದರಿಂದ ಕೋರಂ ಕೊರತೆಯಾಗಿ ಸಭೆ ಮುಂದೂಡಿಕೆಯಾಯಿತು. ತಾವು ಅಧ್ಯಕ್ಷರಾಗಿದ್ದಾಗ ನಿಯಮಿತವಾಗಿ ಕೆಡಿಪಿ, ಸಾಮಾನ್ಯ ಸಭೆಗಳು ಜರುಗಿವೆ. ಆದರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ನಿಯಮಿತವಾಗಿ ಸಭೆಗಳು ನಡೆಯಲಿಲ್ಲ. ದುರಾಡಳಿತ ಮತ್ತು ನಿಷ್ಕಾಳಜಿಯಿಂದ 2 ವರ್ಷ ಜಿ.ಪಂ. ಅನುದಾನ ಲ್ಯಾಪ್ಸ್ ಆಗಿದೆ. ಕೊನೆಯ ಸಾಮಾನ್ಯ ಸಭೆ ಕಾಂಗ್ರೆಸ್ ಸದಸ್ಯರ ವೈಮನಸಿನಿಂದ ನಡೆಯಲಿಲ್ಲ. ಈಗಿನ ಸಿಇಒ ಉತ್ತಮ ಆಡಳಿತಗಾರರಾಗಿದ್ದು, ಅವರ ಮೇಲೆ ವಿನಾಕಾರಣ ಆರೋಪ ಹೊರಿಸುವುದು ಸರಿಯಲ್ಲ ಎಂದರು.

ಕಣ್ಣೀರಿಟ್ಟ ಹಾಲಿ ಮಾಜಿ ಅಧ್ಯಕ್ಷೆ: ಸನ್ಮಾನ ಸಮಾರಂಭದಲ್ಲಿ ಮಾಜಿ ಅಧ್ಯಕ್ಷೆ ಚೈತ್ರಾ ಶಿರೂರ ಅವರು ಭಾವುಕರಾದರು. ಆಡಳಿತಾವಧಿಯ ಅನುಭವ ಹಂಚಿಕೊಳ್ಳುತ್ತಿದ್ದ ವೇಳೆ ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ ಸಹ ಕಣ್ಣೀರಿಟ್ಟರು. ವೇದಿಕೆಯಲ್ಲಿದ್ದ ಸಿಇಒ ಸುಶೀಲಾ ಸಮಾಧಾನಪಡಿಸಿದರು.

ಏಕಾಂಗಿಯಾದ ಉಪಾಧ್ಯಕ್ಷ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಧರಣಿ ನಡೆಸುತ್ತಿರುವ ಜಿ.ಪಂ. ಉಪಾಧ್ಯಕ್ಷ ಶಿವಾನಂದ ಕರಿಗಾರಗೆ ಆರಂಭದಲ್ಲಿ ಕೆಲ ಸದಸ್ಯರು ಸಾಥ್ ನೀಡಿದರು. ಊಟದ ವಿರಾಮದ ನಂತರ ಕರಿಗಾರ ಒಬ್ಬಂಟಿಯಾದರು. ಒಂದೆಡೆ 16 ಸದಸ್ಯರು ಸಭಾಂಗಣದಲ್ಲಿ ಸನ್ಮಾನ ಸ್ವೀಕರಿಸುತ್ತಿದ್ದರೆ, ಜಿ.ಪಂ. ಮುಖ್ಯ ದ್ವಾರದ ಬಳಿ ಕರಿಗಾರ ಧರಣಿ ಮುಂದುವರಿಸಿದ್ದರು. ಅವರಿಗೆ ಕ್ಷೇತ್ರದ ಜನರು, ಮಾಜಿ ಪೈಲ್ವಾನರು ಸಾಥ್ ನೀಡಿದ್ದರು.

ಅನುಭವ ಹಂಚಿಕೊಂಡರು…: ‘ಪಕ್ಷ ಭೇದ ಮರೆತು ಎಲ್ಲರೂ ಮಾರ್ಗದರ್ಶನ ನೀಡಿದರು. 5 ವರ್ಷಗಳ ಒಡನಾಟ ಕಣ್ಮುಂದೆ ಇದ್ದು, ಮನಸು ಭಾರವಾಗಿದೆ’ ಎಂದು ಭಾವನಾ ಬೇಲೂರ ಭಾವುಕವಾಗಿ ಮಾತನಾಡಿದರು. ‘ನಾವೆಲ್ಲ 60 ತಿಂಗಳ ಆಡಳಿತದಲ್ಲಿರುವವರು. ಅಧಿಕಾರಿಗಳು 60 ವರ್ಷ ಆಡಳಿತದಲ್ಲಿರುವವರು. ನಾವೆಲ್ಲ ಮಾಜಿಯಾದರೂ ಕುಟುಂಬ ಸಂಬಂಧ ಮುಂದುವರಿಯಲಿ’ ಎಂದು ಕಲ್ಲಪ್ಪ ಪುಡಕಲಕಟ್ಟಿ ಆಶಿಸಿದರು.