ಕಾನಹೊಸಹಳ್ಳಿ: ಸಮಾಜದ ಒಳಿತಿಗಾಗಿ ಸತ್ಕಾರ್ಯ ಮಾಡುವವರಿಗೆ ಪುಣ್ಯ ಲಭಿಸುತ್ತದೆ. ಸರ್ವ ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸಿದಾಗ ಶಿವ ಮೆಚ್ಚುತ್ತಾನೆ ಎಂಬುದನ್ನು ಅರಿಯಬೇಕಿದೆ ಎಂದು ಉಜ್ಜಿನಿ ಸದ್ಧರ್ಮ ಪೀಠದ ಜಗದ್ಗುರು ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಭಗವತ್ಪಾದರು ತಿಳಿಸಿದರು.
ಬಯಲುತುಂಬರಗುದ್ದಿ ಗ್ರಾಮದಲ್ಲಿ ನಂದೀಶ್ವರ ಸ್ವಾಮಿ ಜಾತ್ರೋತ್ಸವ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಸೋಮವಾರ ಮಾತನಾಡಿದರು. ಧಾರ್ಮಿಕ ಆಚರಣೆ, ಪರಂಪರೆ ಸನಾತನ ಕಾಲದಿಂದಲೂ ಇದ್ದು, ಅದನ್ನು ಪಾಲಿಸುವುದರಿಂದ ಮನಸ್ಸಿಗೆ ನೆಮ್ಮದಿ ಲಭಿಸಲಿದೆ ಎಂದರು.
ಪಂಚಪೀಠಗಳಿಗೆ ಒಬ್ಬೊಬ್ಬ ಗೋತ್ರ ಪುರುಷ ಇದ್ದು, ಉಜ್ಜಿನಿ ಪೀಠದ ಗೋತ್ರಪುರುಷ ನಂದಿ ಆಗಿದ್ದಾನೆ. ಅಂಥ ನಂದೀಶ್ವರನ ರಥೋತ್ಸವ ಮಾಡಿದ ಗ್ರಾಮಸ್ಥರು ಪುಣ್ಯವಂತರು. ಮುಕ್ಕೋಟಿ ದೇವರಲ್ಲಿ ಶಿವನನ್ನು ಮಹಾದೇವ ಎನ್ನುತ್ತೇವೆ. ಅಂಥ ಶಿವನ ಆರಾಧನೆಯಲ್ಲಿ ತೊಡಗುವ ಸದ್ಭಕ್ತರಿಗೆ ಒಳ್ಳೆಯದೇ ಆಗಲಿದೆ ಎಂದು ತಿಳಿಸಿದರು.
ಕಾಶಿ ಜಗತ್ತಿನ ಪ್ರಾಚೀನ ನಗರವಾಗಿದ್ದು, ಅದಕ್ಕೆ ವಿದ್ಯಾನಗರಿ, ವೇದ ನಗರಿ, ಜ್ಞಾನ ನಗರಿ, ಪುಣ್ಯ ನಗರಿ, ಗಂಗಾ ನಗರಿ ಎಂದು ಕರೆಯಲಾಗುತ್ತದೆ. ಉಜ್ಜಿನಿ ಜಗದ್ಗುರುಗಳು ಪ್ರಯಾಗರಾಜ್, ಕಾಶಿ ಪವಿತ್ರ ಯಾತ್ರೆ ನಂತರ ಉಜ್ಜಿನಿ, ಆ ಬಳಿಕ ಬಯಲುತುಂಬರಗುದ್ದಿ ಗ್ರಾಮಕ್ಕೆ ಆಗಮಿಸಿರುವುದು ನಿಮ್ಮೆಲ್ಲರ ಪುಣ್ಯದ ಫಲವಾಗಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ಕಲಿಸುವುದರೊಂದಿಗೆ ಸತ್ಪ್ರಜೆಗಳನ್ನಾಗಿ ರೂಪಿಸುವ ಹೊಣೆಗಾರಿಗೆ ಪ್ರತಿಯೊಬ್ಬ ತಂದೆ, ತಾಯಿ ಮೇಲಿದೆ ಎಂದು ಉಜ್ಜಿನಿ ಜಗದ್ಗುರುಗಳು ತಿಳಿಸಿದರು.