ಜಿಲ್ಲೆ

ಸನಾತನ ಧರ್ಮ ವ್ಯಕ್ತಿ ಆಧಾರಿತವಲ್ಲ, ತತ್ತ್ವ ಆಧಾರಿತ: ಸ್ವಾಮಿ ವೀರೇಶಾನಂದ ಸರಸ್ವತಿ ಬಣ್ಣನೆ

ಮೈಸೂರು: ಸನಾತನ ಧರ್ಮ ವ್ಯಕ್ತಿ ಆಧಾರಿತವಲ್ಲ, ತತ್ತ್ವ ಆಧಾರಿತ. ಆದ್ದರಿಂದ ಅದು ಹೆಚ್ಚು ಪ್ರಚಾರ ಆಗಬೇಕು ಎಂದು ‘ವಿಜಯವಾಣಿ’ ಅಂಕಣಕಾರರೂ ಆದ ತುಮಕೂರು ಶ್ರೀರಾಮಕೃಷ ವಿವೇಕಾನಂದಾಶ್ರಮದ ಅಧ್ಯಕ್ಷರಾದ ಸ್ವಾಮಿ ವೀರೇಶಾನಂದ ಸರಸ್ವತಿ ಹೇಳಿದರು.
ಮೈಸೂರು ವಿಶ್ವವಿದ್ಯಾಲಯದ ಡಾ.ಎಸ್.ರಾಧಾಕೃಷ್ಣನ್ ತತ್ತ್ವಶಾಸ್ತ್ರ ಮತ್ತು ಭಾರತೀಯ ಸಂಸ್ಕೃತಿ ಕೇಂದ್ರದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಭಾರತ ಸಂಸ್ಕೃತಿ: ಸಂಸ್ಕೃತ ಭಾರತಿ’ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಹಿಂದು ಧರ್ಮಕ್ಕೆ ವೇದಗಳೇ ಮೂಲ ಧರ್ಮಗ್ರಂಥಗಳು. ಸನಾತನ ಧರ್ಮದ ಬಗ್ಗೆ ಪ್ರಾಧ್ಯಾಪಕರು ಮಕ್ಕಳಿಗೆ ತಿಳಿಸಬೇಕು. ಸನಾತನ ಧರ್ಮದಲ್ಲಿ ಋಷಿಗಳು, ಅವತಾರ ಪುರುಷರಿಂದಷ್ಟೇ ರಚನೆಯಾಗಿಲ್ಲ. ಭಾರತ ಸಂಸ್ಕೃತ ಮತ್ತು ಸಂಸ್ಕೃತಿಯ ತ್ರಿವೇಣಿ ಸಂಗಮ. ಸನಾತನ ಭಾರತೀಯ ಧರ್ಮದಲ್ಲಿ ಭಗವಂತನ ಸ್ವರೂಪ ಅಡಗಿದೆ. ಶಂಕರಾಚಾರ್ಯರು, ವಿವೇಕಾನಂದರು ನಮ್ಮ ದೇಶದ ಆದರ್ಶ ಪುರುಷರು ಎಂದು ಬಣ್ಣಿಸಿದರು.
ಕೋವಿಡ್ ಸಮಯದಲ್ಲಿ ಅಮೆರಿಕದ ಅಧ್ಯಕ್ಷ ಮಿದುಳಿನಿಂದ ಯೋಚಿಸಿದರು. ಪರಿಣಾಮ, ಪ್ರಾಣ ಬಿಟ್ಟವರ ಸಂಖ್ಯೆ ಹೆಚ್ಚಿತು. ಆದರೆ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಹೃದಯದಿಂದ ಆಲೋಚಿಸಿದರು. ಹಾಗಾಗಿ, ಪ್ರಾಣಹಾನಿ ಅಮೆರಿಕಕ್ಕೆ ಹೋಲಿಸಿದರೆ ಕಡಿಮೆ ಇತ್ತು ಎಂದು ವಿಶ್ಲೇಷಿಸಿದರು.
ವಿಶ್ವವನ್ನೇ ತಲ್ಲಣಗೊಳಿಸಿದ ಕೋವಿಡ್, ಭಾರತದ ಆರ್ಥಿಕ ವ್ಯವಸ್ಥೆಯ ಮೇಲೆ ಅಂತಹ ಪರಿಣಾಮ ಬೀರಲಿಲ್ಲ. ಅಂತಃಕರಣ ಹಾಗೂ ಮಾನವೀಯ ಮೌಲ್ಯಗಳು ಭಾರತೀಯರ ರಕ್ತದಲ್ಲೇ ಇವೆ. ಸನಾತನ ಧರ್ಮಕ್ಕೆ ಸಾವಿಲ್ಲ. ಭಾರತದ ಧರ್ಮ ಹಾಗೂ ಸಂಸ್ಕೃತಿಯನ್ನು ಪೂರ್ವಗ್ರಹ ಇಲ್ಲದೆ ಅಧ್ಯಯನ ಮಾಡಿದರೆ ನೈಜ ಸ್ವರೂಪ ಸಿಗುತ್ತದೆ ಎಂದು ಪ್ರತಿಪಾದಿಸಿದರು.
ಸಂದರ್ಶಕ ಪ್ರಾಧ್ಯಾಪಕ ಪ್ರೊ.ಅನಂತರಾಮು ಅವರು ಮಹರ್ಷಿ-ವಾಲ್ಮೀಕಿ ವಿಷಯ ಕುರಿತು ಉಪನ್ಯಾಸ ನೀಡಿದರು.
ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತಕುಮಾರ್, ಸಂದರ್ಶಕ ಪ್ರಾಧ್ಯಾಪಕರಾದ ರಾಮಶೇಷು, ಪ್ರೊ.ಸುರೇಶ ಇತರರು ಇದ್ದರು.