ಮದ್ದೂರು: ವಿದ್ಯಾರ್ಥಿಗಳು ನಿರ್ದಿಷ್ಟ ಗುರಿಯೊಂದಿಗೆ ಸಾಧನೆಗೆ ನಿರಂತರವಾಗಿ ಪರಿಶ್ರಮ ವಹಿಸಿ ಅಧ್ಯಯನ ನಡೆಸಿದರೆ ಉನ್ನತ ಸ್ಥಾನಮಾನ ಪಡೆದು ಸಮಾಜದಲ್ಲಿ ಒಳ್ಳೆಯ ಹೆಸರು ಗಳಿಸಬಹುದು ಎಂದು ಸಹಾಯಕ ಪ್ರಾಧ್ಯಾಪಕ ಡಾ.ಪರಶಿವಮೂರ್ತಿ ಹೇಳಿದರು.
ಪಟ್ಟಣದ ಎಚ್.ಕೆ.ವೀರಣ್ಣಗೌಡ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಕನ್ನಡ ಸಂಘದ 2023-24ನೇ ಸಾಲಿನ ಕ್ರೀಡೆ, ಸಾಂಸ್ಕೃತಿಕ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಚಟುವಟಿಕೆಗಳ ಸಮಾರೋಪ ಸಮಾರಂಭ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ಗ್ರಾಮೀಣ ಪ್ರದೇಶದ ಪಾಲಕರಲ್ಲಿ ಹಲವಾರು ಕಷ್ಟ ಹಾಗೂ ತೊಂದರೆಗಳಿದ್ದರೂ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ರೀತಿಯ ತೊಂದರೆ ಆಗದಂತೆ ಆರ್ಥಿಕ ಮತ್ತು ಶೈಕ್ಷಣಿಕ ನೆರವನ್ನು ಒದಗಿಸುತ್ತಿದ್ದಾರೆ. ಆದರೆ, ವಿದ್ಯಾರ್ಥಿಗಳು ಮೊಬೈಲ್ ಚಾಳಿಗೆ ಬಿದ್ದು ತಮ್ಮ ಶೈಕ್ಷಣಿಕ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ವಿಷಾದಿಸಿದರು.
ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳಿಂದ ವಿದ್ಯಾರ್ಥಿಗಳು ಮಾನಸಿಕವಾಗಿ ಹಾಗೂ ದೈಹಿಕವಾಗಿ ಕುಸಿಯುತ್ತಿದ್ದಾರೆ. ಅವರ ಭವಿಷ್ಯವನ್ನು ಚಿಕ್ಕ ವಯಸ್ಸಿನಲ್ಲಿ ಹಾಳು ಮಾಡಿಕೊಂಡು ದುಶ್ಚಟಗಳಿಗೆ ದಾಸರಾಗಿ ಜೀವನವನ್ನು ಅಂತ್ಯ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಸಮಾಜದಲ್ಲಿ ಹೆಚ್ಚಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಪಾಲಕರ ಹಾಗೂ ಗುರುಗಳ ಮಾರ್ಗದರ್ಶನ ಪಡೆದು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕೆಂದು ಕಿವಿಮಾತು ಹೇಳಿದರು.
ಎಂ.ಎಚ್.ಚನ್ನೇಗೌಡ ವಿದ್ಯಾಸಂಸ್ಧೆ ಅಧ್ಯಕ್ಷ ಎಂ.ಸ್ವರೂಪ್‌ಚಂದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಅಂಕ ಗಳಿಕೆಗೆ ಸೀಮಿತವಾಗದೆ ಉತ್ತಮವಾದ ನಡವಳಿಕೆ ಹಾಗೂ ಅಭ್ಯಾಸಗಳನ್ನು ಬೆಳೆಸಿಕೊಂಡು ಸುಸಂಸ್ಕೃತರಾಗಿ ರೂಪುಗೊಳ್ಳಬೇಕು ಎಂದು ತಿಳಿಸಿದರು.
ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಪದವಿ ಪೂರ್ವ ಹಂತ ಬಹುಮುಖ್ಯವಾಗಿದ್ದು ಪರೀಕ್ಷಾ ಸಮಯ ಸಮೀಪಿಸುತ್ತಿರುವುದರಿಂದ ಉತ್ತಮ ಆರೋಗ್ಯಕರ ಪೌಷ್ಟಿಕ ಆಹಾರಗಳನ್ನು ಸೇವಿಸಿ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಕಾಪಾಡುವುದರ ಮೂಲಕ ಶಿಕ್ಷಕರ ಮಾರ್ಗದರ್ಶನದಲ್ಲಿ ಪರೀಕ್ಷೆಯನ್ನು ಎದುರಿಸಿ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳುವುದರ ಮೂಲಕ ತಂದೆ-ತಾಯಿಗಳಿಗೆ, ಗುರುಗಳಿಗೆ ಹಾಗೂ ಸಂಸ್ಧೆಗೆ ಕೀರ್ತಿ ತರಬೇಕು ಎಂದು ಹೇಳಿದರು.
ಸಂಸ್ಧೆಯ ಕಾರ್ಯದರ್ಶಿ ಸಿ.ಅಪೂರ್ವಚಂದ್ರ, ಕಸಾಪ ತಾಲೂಕು ಅಧ್ಯಕ್ಷ ಕೆ.ಎಸ್.ಸುನೀಲ್ ಕುಮಾರ್, ಮಾಜಿ ಅಧ್ಯಕ್ಷ ವಿ.ಹರ್ಷ, ಪ್ರಾಂಶುಪಾಲರಾದ ಜಿ.ಎಸ್.ಶಂಕರೇಗೌಡ, ಯು.ಎಸ್. ಶಿವಕುಮಾರ್, ಉಪ ಪ್ರಾಂಶುಪಾಲೆ ಜಿ.ಎಸ್.ನಂದಿನಿ, ರಾ.ಸೇ.ಯೋ ಅಧಿಕಾರಿ ಎಚ್.ಎಸ್. ಪಂಚಲಿಂಗೇಗೌಡ, ಕ್ರೀಡಾ ಕಾರ್ಯದರ್ಶಿ ಜಿ.ಸುರೇಂದ್ರ, ಅಧ್ಯಾಪಕ ಕಾರ್ಯದರ್ಶಿ ಎನ್. ರೇವಣ್ಣ, ಕನ್ನಡ ಸಂಘದ ಕಾರ್ಯದರ್ಶಿ ಎಸ್.ಪ್ರೇಮಕುಮಾರಿ ಇದ್ದರು.