ಬೆಂಗಳೂರು ಗ್ರಾಮಾಂತರ: ಪ್ರಸ್ತುತ ರಾಜ್ಯದಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲ, ಸಿಎಂ ಬದಲಾವಣೆ ವಿಚಾರ ಪಕ್ಷದ ಹೈಕಮಾಂಡ್‌ಗೆ ಬಿಟ್ಟಿದ್ದು, ಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ ಎಂದು ಪೌರಾಡಳಿತ ಮತ್ತು ಸಕ್ಕರೆ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಹೇಳಿದರು.
ಹೊಸಕೋಟೆಯ ಕನಕಭವನದಲ್ಲಿ ಹುಟ್ಟುಹಬ್ಬದ ಪ್ರಯುಕ್ತ ಮಂಗಳವಾರ ಹಮ್ಮಿಕೊಂಡಿದ್ದ ಉಚಿತ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದರು. ಬಳಿಕ, ಕೆಲ ದಿನಗಳಿಂದ ನಡೆಯುತ್ತಿರುವ ಸಿಎಂ ಬದಲಾವಣೆ ಕುರಿತ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಸದ್ಯದ ಪರಿಸ್ಥಿತಿಯಲ್ಲಿ ಅಂಥ ಯಾವುದೇ ಬದಲಾವಣೆ ಸಾಧ್ಯವಿಲ್ಲ. ಸಿಎಂ ಕುರ್ಚಿ ಖಾಲಿಯೂ ಇಲ್ಲ ಎಂದು ಪುನರುಚ್ಚರಿಸಿದರು.
ಹೈಕಮಾಂಡ್ ಯಾವುದೇ ತೀರ್ಮಾನ ತೆಗೆದುಕೊಂಡರೂ ಅದಕ್ಕೆ ನಮ್ಮೆಲ್ಲರ ಸಮ್ಮತಿ ಇದೆ. ರಾಜ್ಯ ರಾಜಕೀಯದಲ್ಲಿ ಯಾವುದೇ ಬದಲಾವಣೆಯಾದರೂ ನಮ್ಮ ಸಚಿವ ಸ್ಥಾನಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನೇತ್ರದಾನಕ್ಕೆ 250 ನೋಂದಣಿ: ಸಚಿವರ ಹುಟ್ಟುಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ನೇತ್ರದಾನ ಶಿಬಿರದಲ್ಲಿ 250 ಅಭಿಮಾನಿಗಳು ನೇತ್ರದಾನಕ್ಕೆ ಹೆಸರು ನೋಂದಾಯಿಸಿಕೊಂಡರು. ಈ ವೇಳೆ ಮಾತನಾಡಿದ ಸಚಿವರು, ಅಂಧರ ಬಾಳಿಗೆ ಬೆಳಕಾಗುವ ನಿಟ್ಟಿನಲ್ಲಿ ಈ ಶಿಬಿರ ಹಮ್ಮಿಕೊಳ್ಳಲಾಗಿದೆ. ಅಭಿಮಾನಿಗಳು ಸ್ವಯಂಪ್ರೇರಿತವಾಗಿ ನನ್ನ ಹುಟ್ಟುಹಬ್ಬದ ಪ್ರಯುಕ್ತ ಇಂಥ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಅವರೆಲ್ಲರ ಸಾಮಾಜಿಕ ಕಳಕಳಿ ಹೀಗೆ ಮುಂದುವರಿಯಲಿ ಎಂದು ಆಶಿಸುತ್ತೇನೆ ಎಂದರು.
ಅನಾಥಶ್ರಮಗಳಿಗೆ ದಿನಸಿಕಿಟ್: ಹೊಸಕೋಟೆಯ ಕ್ರಿಶ್ಚಿಯನ್ ಮಿಷನ್ ಆಸ್ಪತ್ರೆ ಸೇರಿ ವಿವಿಧ ಅನಾಥಶ್ರಮಕ್ಕೆ ಮಂಗಳವಾರ ಭೇಟಿ ನೀಡಿದ ಸಚಿವ ಎಂಟಿಬಿ ನಾಗರಾಜ್, ದಿನಸಿ ಕಿಟ್, ಹಣ್ಣು-ಹಂಪಲುಗಳೊಂದಿಗೆ ಸಿಹಿ ಹಂಚಿದರು.
ಅಭಿಮಾನಕ್ಕೆ ಅಭಾರಿಯಾಗಿದ್ದೇನೆ: ಕರೊನಾ ಹಿನ್ನೆಲೆಯಲ್ಲಿ ಸರಳವಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳಲಾಗಿದೆ, ಯಾರೂ ಅದ್ದೂರಿ ಆಚರಣೆಗೆ ಮುಂದಾಗಬಾರದು ಎಂದು ಹಲವು ಬಾರಿ ಅಭಿಮಾನಿಗಳಲ್ಲಿ ಮನವಿ ಮಾಡಿದ್ದೆ. ಆದರೂ ಕೆಲವರು ಹಾರ ಹಾಕಿ ಶಾಲು ಹೊದಿಸಿ ಶುಭಕೋರಿದರು. ಅವರ ಅಭಿಮಾನಕ್ಕೆ ಆಭಾರಿಯಾಗಿದ್ದೇನೆ, ಆದರೂ ಅಭಿಮಾನಿಗಳು ದಯವಿಟ್ಟು ಹಾರ ತುರಾಯಿಗೆ ಬದಲು ಮತ್ತಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಉತ್ತಮ ಕೆಲಸಕ್ಕೆ ಮುಂದಾಗಬೇಕು ಎಂದು ಸಚಿವರು ಕರೆ ನೀಡಿದರು.
1800 ಸಾವಿರ ವ್ಯಾಕ್ಸಿನ್: 2 ತಿಂಗಳಿಂದ ಹೊಸಕೋಟೆ ವ್ಯಾಪ್ತಿಯಲ್ಲಿ ಎಂಟಿಬಿ ಚಾರಿಟಬಲ್ ಟ್ರಸ್ಟ್ ವತಿಯಿಂದ ನಡೆಸಿಕೊಂಡು ಬರುತ್ತಿರುವ ಉಚಿತ ಲಸಿಕಾ ಅಭಿಯಾನ ಮುಂದುವರಿದಿದ್ದು, ಮಂಗಳವಾರ ಹುಟ್ಟುಹಬ್ಬದ ಪ್ರಯುಕ್ತ ಹೊಸಕೋಟೆಯ ಕನಕಭವನ ಹಾಗೂ ಎಸ್‌ಜೆಆರ್ ಕಲ್ಯಾಣ ಮಂಟಪದಲ್ಲಿ 18 ವರ್ಷ ಮೇಲ್ಪಟ್ಟ 1800 ಮಂದಿಗೆ ಉಚಿತ ವ್ಯಾಕ್ಸಿನ್ ಹಾಕಲಾಯಿತು.
ಬಿರಿಯಾನಿ ಭೋಜನ: ಪ್ರತಿ ವರ್ಷದಂತೆ ಈ ಬಾರಿಯೂ ಹುಟ್ಟುಹಬ್ಬದ ಪ್ರಯುಕ್ತ ಸಾವಿರಾರು ಮಂದಿಗೆ ಬಿರಿಯಾನಿ ಊಟ ವಿತರಿಸಲಾಯಿತು. ಖುದ್ದು ಸಚಿವರು ಬಿರಿಯಾನಿ ಬಡಿಸುವ ಮೂಲಕ ಶುಭಕೋರಿದ ಜನರಿಗೆ ವಂದನೆ ಸಲ್ಲಿಸಿದರು.