ಜಿಲ್ಲೆ

ಸದ್ಯಕ್ಕೆ ಖಾಸಗಿ ಚಿಕಿತ್ಸೆ ಅಲಭ್ಯ

StartFragment

ಧಾರವಾಡ: ಜಿಲ್ಲೆಯಲ್ಲಿ ಕೋವಿಡ್ ಪೀಡಿತರ ಸಂಖ್ಯೆ ವ್ಯಾಪಕವಾಗಿ ಏರಿಕೆಯಾದರೆ ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆ ನೀಡಲೆಂದು ಜಿಲ್ಲಾಡಳಿತ 22 ಆಸ್ಪತ್ರೆಗಳನ್ನು ಗುರುತಿಸಿದೆ.

ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ 100ರೊಳಗೆ ಇದ್ದಾಗ ಪ್ರತಿದಿನ ಕಡಿಮೆ ಪ್ರಕರಣ ಪತ್ತೆಯಾಗುತ್ತಿದ್ದವು. ಕಳೆದ 8-10 ದಿನಗಳಲ್ಲಿ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತ ಸಾಗಿ 216ಕ್ಕೆ ತಲುಪಿದೆ.

ಕೋವಿಡ್ ಚಿಕಿತ್ಸೆಗೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಅಡಿ ಆಯುಷ್ಮಾನ್ ಭಾರತ- ಆರೋಗ್ಯ ಕರ್ನಾಟಕ ಯೋಜನೆಯಡಿ ಜಿಲ್ಲಾಡಳಿತ ಈಗಾಗಲೇ ನೋಂದಾಯಿಸಲ್ಪಟ್ಟ 22 ಆಸ್ಪತ್ರೆಗಳನ್ನು ಗುರುತಿಸಿದೆ.

ಹುಬ್ಬಳ್ಳಿ ಕಿಮ್ಸ್​ನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 300 ಬೆಡ್ ಹಾಗೂ ಕಿಮ್ಸ್​ನ ವಿಶೇಷ ವಾರ್ಡ್​ಗಳಲ್ಲಿ 300 ಬೆಡ್​ಗಳ ವ್ಯವಸ್ಥೆ ಇದೆ. ಜಿಲ್ಲೆಯಲ್ಲಿ 600 ಸೋಂಕಿತರು ಪತ್ತೆಯಾದರೂ ಇಲ್ಲೇ ಚಿಕಿತ್ಸೆ ನಡೆಯಲಿದೆ. ಸೋಂಕಿತರ ಸಂಖ್ಯೆ ಇನ್ನೂ ಹೆಚ್ಚಳವಾದರೆ ಮುಂಜಾಗ್ರತೆ ಕ್ರಮವಾಗಿ ಖಾಸಗಿ ಆಸ್ಪತ್ರೆಗಳನ್ನು ಬಳಸಿಕೊಳ್ಳಲು ಮೊದಲೇ ಗುರುತಿಸಲಾಗಿದೆ.

ಕೋವಿಡ್ ಚಿಕಿತ್ಸೆಗೆ ಮಕ್ಕಳ ಆಸ್ಪತ್ರೆ ಹಾಗೂ ಕಣ್ಣಿನ ಆಸ್ಪತ್ರೆಗಳನ್ನೂ ಗುರುತಿಸಿರುವುದಕ್ಕೆ ಅಪಸ್ವರ ಕೇಳಿಬಂದಿದೆ. ಆದರೆ, ಈ ಆಸ್ಪತ್ರೆಗಳಲ್ಲೂ ಒಳರೋಗಿಗಳನ್ನಾಗಿ ದಾಖಲಿಸಿಕೊಳ್ಳಲು ಬೆಡ್​ಗಳ ವ್ಯವಸ್ಥೆ ಇದೆ.

ಜಿಲ್ಲಾಡಳಿತ ಗುರುತಿಸಿದ್ದರೂ ತಕ್ಷಣದಲ್ಲಿ ಖಾಸಗಿ ಆಸ್ಪತ್ರಗಳಲ್ಲಿ ರೋಗಿಗಳನ್ನು ದಾಖಲಿಸಿಕೊಳ್ಳುವ ಸಾಧ್ಯತೆ ಇಲ್ಲ. ಏಕೆಂದರೆ, ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಹೊರತುಪಡಿಸಿ ಉಳಿದ ಯಾವ್ಯಾವ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು ಎಂಬ ಬಗ್ಗೆ ನಿರ್ದಿಷ್ಟ ಸೂಚನೆ ನೀಡಲಾಗಿಲ್ಲ. ಅಷ್ಟೇ ಅಲ್ಲ, ಸರ್ಕಾರ ಸೂಚಿಸುವ ವ್ಯವಸ್ಥೆಯನ್ವಯ ವಾರ್ಡ್​ಗಳಲ್ಲಿ ವ್ಯವಸ್ಥೆ ಮಡುವುದು, ಸಿಬ್ಬಂದಿಯನ್ನು ಮಾನಸಿಕವಾಗಿ ಸಜ್ಜುಗೊಳಿಸುವುದು, ಔಷಧ ದಾಸ್ತಾನು ಸೇರಿ ಅನೇಕ ಏರ್ಪಾಟುಗಳನ್ನು ಮಾಡಿಕೊಳ್ಳಲು ಸಮಯ ಬೇಕಾಗುತ್ತದೆ.

ಈ ಮಧ್ಯೆ, ಗುರುತಿಸಲಾಗಿರುವ ಎಲ್ಲ 22 ಖಾಸಗಿ ಆಸ್ಪತ್ರೆಯವರ ಸಭೆಯನ್ನು ಜಿಲ್ಲಾಧಿಕಾರಿಯವರು ಜೂ. 25ರಂದು ಕರೆದಿದ್ದು, ಅಲ್ಲಿ ಹೆಚ್ಚಿನ ಸೂಚನೆಗಳನ್ನು ನೀಡುವ ಸಾಧ್ಯತೆ ಇದೆ. ಸಭೆಯಲ್ಲಿ ತಮ್ಮ ಇತಿಮಿತಿಗಳನ್ನೂ ತಿಳಿಸಲಿದ್ದೇವೆ ಎಂದು ಕೆಲ ಆಸ್ಪತ್ರೆಯವರು ಪತ್ರಿಕೆಗೆ ಪ್ರತಿಕ್ರಿಯಿಸಿದ್ದಾರೆ.

ಗುರುತಿಸಿರುವ ಆಸ್ಪತ್ರೆಗಳು

ನವನಗರದ ಕರ್ನಾಟಕ ಕ್ಯಾನ್ಸರ್ ಆಸ್ಪತ್ರೆ, ಹುಬ್ಬಳ್ಳಿಯ ಎಚ್​ಸಿಜಿ ಎನ್​ಎಂಆರ್ ಕ್ಯಾನ್ಸರ್ ಸೆಂಟರ್, ಶಕುಂತಲಾ ಮೆಮೋರಿಯಲ್ ಆಸ್ಪತ್ರೆ, ಫೋರ್ಟಿಸ್ ಸುಚಿರಾಯು ಹುಬ್ಬಳ್ಳಿ, ಅಶೋಕಾ ಆಸ್ಪತ್ರೆ, ಜಯಪ್ರಿಯಾ ಆಸ್ಪತ್ರೆ, ವಿವೇಕಾನಂದ ಆಸ್ಪತ್ರೆ, ಶಿವಕೃಪಾ ಹಾಸ್ಪಿಟಲ್, ಶ್ರೀ ಬಾಲಾಜಿ, ಎಂ.ಎಂ. ಜೋಶಿ ಕಣ್ಣಿನ ಆಸ್ಪತ್ರೆ, ಹುಬ್ಬಳ್ಳಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಸಂಜೀವಿನಿ ಸ್ಪೆಷಾಲಿಟಿ ಹಾಸ್ಪಿಟಲ್, ನಾಲವಾಡ ಆಸ್ಪತ್ರೆ, ತತ್ವದರ್ಶ ಆಸ್ಪತ್ರೆ, ವಾತ್ಸಲ್ಯ ಹೆಲ್ತ್ ಕೇರ್, ವಿಠೋಬಾ ನೇತ್ರಾಲಯ, ದಿಶಾ ಕಣ್ಣಿನ ಆಸ್ಪತ್ರೆ, ಸೆಕ್ಯುರ್ ಆಸ್ಪತ್ರೆ, ವಿಹಾನ್ ಹಾರ್ಟ್ ಕೇರ್ ಹಾಗೂ ಧಾರವಾಡದ ಎಸ್​ಡಿಎಂ ಮೆಡಿಕಲ್ ಕಾಲೇಜ್- ಆಸ್ಪತ್ರೆ, ಎಸ್​ಡಿಎಂ ನಾರಾಯಣ ಹೃದಯಾಲಯ ಸತ್ತೂರ, ವಿಠ್ಠಲ ಮಕ್ಕಳ ಆಸ್ಪತ್ರೆಗಳನ್ನು ಕೋವಿಡ್ ಚಿಕಿತ್ಸೆಗಾಗಿ ಗುರುತಿಸಲಾಗಿದೆ.

ದರ ನಿಗದಿ, ಉಚಿತ ಚಿಕಿತ್ಸೆ

ಸರ್ಕಾರ ಶಿಫಾರಸು ಮಾಡುವ ಕೋವಿಡ್ ಪ್ರಕರಣಗಳ ವೆಚ್ಚವನ್ನು ಸರ್ಕಾರ ಭರಿಸಲಿದೆ. ಈಗಾಗಲೇ ಸರ್ಕಾರ ಚಿಕಿತ್ಸೆಯ ದರವನ್ನೂ ನಿಗದಿಪಡಿಸಿದೆ. ಆಯುಷ್ಮಾನ್ ಕಾರ್ಡ್​ದಾರರು ಹಾಗೂ ಸಾಮಾನ್ಯ ರೋಗಿಗಳಿಗೆ ಪ್ರತಿದಿನಕ್ಕೆ ದರ ನಿಗದಿಯಾಗಿದೆ. ಸಾಮಾನ್ಯ ವಾರ್ಡ್, ಎಚ್​ಡಿಯು ವಾರ್ಡ್, ವೆಂಟಿಲೇಟರ್ ರಹಿತ, ವೆಂಟಿಲೇಟರ್ ಸಹಿತ ವ್ಯವಸ್ಥೆಗೆ ಸರ್ಕಾರವೇ ದರ ನಿಗದಿಪಡಿಸಿದೆ. ಇದರಿಂದ ಹೆಚ್ಚಿನ ಚಿಕಿತ್ಸಾ ವೆಚ್ಚ ಆಕರಣೆಗೆ ಅವಕಾಶವಿಲ್ಲ.

ಮೊರಬ, ಕೆಕೆ ನಗರದಲ್ಲಿ ಹೆಚ್ಚಿದ ಆತಂಕ

ಧಾರವಾಡ: ಜಿಲ್ಲೆಯಲ್ಲಿ ಬುಧವಾರ 12 ಕರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ನೂತನ ಯಾದಿಯಲ್ಲಿ ಸಹ ನವಲಗುಂದ ತಾಲೂಕು ಮೊರಬ ಹಾಗೂ ಹುಬ್ಬಳ್ಳಿ ಶಹರದ ಕೃಷಿ ಕಾರ್ವಿುಕರ ನಗರದವರಿದ್ದಾರೆ.

ಮೊರಬದಲ್ಲಿ ಇದುವರೆಗೆ 41 ಜನರಿಗೆ ಸೋಂಕು ತಗುಲಿದ್ದು, ಅದರಲ್ಲಿ ಒಬ್ಬ ಮೃತಪಟ್ಟಿದ್ದಾನೆ. ಕೃಷಿ ಕಾರ್ವಿುಕರ ನಗರದಲ್ಲಿ 7 ಮಂದಿಗೆ ಸೋಂಕು ತಗುಲಿದೆ. ಮೊರಬ ಮತ್ತು ಕೃಷಿ ಕಾರ್ವಿುಕರ ನಗರಗಳು ಕರೊನಾ ಹಾಟ್​ಸ್ಪಾಟ್​ನಂತಾಗಿದ್ದು, ನಿಯಂತ್ರಣ ತುಸು ಸವಾಲಾಗಿದೆ.

ಜೂ. 21ರಂದು ಸೋಂಕು ದೃಢಪಟ್ಟ ಹುಬ್ಬಳ್ಳಿಯ ಕೃಷಿ ಕಾರ್ವಿುಕ ನಗರದ 20 ವರ್ಷದ ಪುರುಷನ ಸಂಪರ್ಕ ಹೊಂದಿದ್ದ ಅದೇ ನಗರದ 12 ವರ್ಷದ ಬಾಲಕ, 18 ವರ್ಷ ಯುವತಿ, 17 ವರ್ಷದ ಪುರುಷ, 40 ವರ್ಷದ ಮಹಿಳೆ, ಕೆಮ್ಮು, ನೆಗಡಿ, ತೀವ್ರ ಜ್ವರದಿಂದ ಬಳಲುತ್ತಿದ್ದ ಹುಬ್ಬಳ್ಳಿ ಗೂಡ್ಸ್​ಶೆಡ್ ರಸ್ತೆ ನಿವಾಸಿ 85 ವರ್ಷದ ಪುರುಷ, ಹುಬ್ಬಳ್ಳಿ ಕೇಶ್ವಾಪುರದ 32 ವರ್ಷದ ಮಹಿಳೆಯಲ್ಲಿ ಸೋಂಕು ತಗುಲಿರುವುದು ಬುಧವಾರದ ವರದಿಯಲ್ಲಿ ಖಚಿತವಾಗಿದೆ.

ಮೊರಬ ಗ್ರಾಮದಲ್ಲಿ ಜೂ. 21ರಂದು ಸೋಂಕು ದೃಢಪಟ್ಟಿದ್ದ 34 ವರ್ಷದ ಪುರುಷನ ಸಂಪರ್ಕ ಹೊಂದಿದ್ದ ಅದೇ ಗ್ರಾಮದ 28, 63 ವರ್ಷದ ಪುರುಷ, 45, 48 ವರ್ಷದ ಮಹಿಳೆ ಹಾಗೂ ಇದೇ ಗ್ರಾಮದಲ್ಲಿ ಜೂ. 15ರಂದು ಸೋಂಕು ತಗುಲಿದ್ದ 72 ವರ್ಷದ ಪುರುಷನ ಸಂಪರ್ಕ ಹೊಂದಿದ್ದ ಅದೇ ಗ್ರಾಮದ 43 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ. ಹಾವೇರಿ ಜಿಲ್ಲೆ ಶಿಗ್ಗಾಂವಿಯ 39 ವರ್ಷದ ಮಹಿಳೆಯೊಬ್ಬಳಲ್ಲಿ ಸೋಂಕು ಪತ್ತೆಯಾಗಿದ್ದು, ಹುಬ್ಬಳ್ಳಿ ಕಿಮ್ಸ್​ಗೆ ದಾಖಲಾಗಿದ್ದಾಳೆ. ಈಕೆಯ ಪ್ರಯಾಣ ಇತಿಹಾಸ ಮಾಹಿತಿ ಕಲೆಹಾಕಲಾಗುತ್ತಿದೆ.

34 ಜನ ಬಿಡುಗಡೆ:

ಕೋವಿಡ್​ನಿಂದ ಗುಣವಾದ 34 ಜನರನ್ನು ಜೂ. 23 ಹಾಗೂ 24ರಂದು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಎರಡು ದಿನದಲ್ಲಿ ಅತಿ ಹೆಚ್ಚು ಜನ ಗುಣಹೊಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುವುದು ಇದೇ ಮೊದಲು.

496 ಶಂಕಿತರು ಪತ್ತೆ

ಜಿಲ್ಲೆಯಲ್ಲಿ ಮಂಗಳವಾರ ಸಂಜೆಯಿಂದ 24 ಗಂಟೆ ಅವಧಿಯಲ್ಲಿ 496 ಶಂಕಿತರು ಪತ್ತೆಯಾಗಿದ್ದು, ಅವರ ಗಂಟಲ ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಶಂಕಿತರ ಜತೆಗೆ ನಿಗಾವಹಿಸಿದವರ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಮಂಗಳವಾರ ಇದ್ದ 23957 ನಿಗಾವಹಿಸಿದವರ ಸಂಖ್ಯೆ ಬುಧವಾರ 24266ಕ್ಕೆ ಏರಿಕೆಯಾಗಿದೆ.

EndFragment