ಕಲಬುರಗಿ: ಪಿಎಸ್‌ಐ ನೇಮಕ ಪರೀಕ್ಷೆಗಳನ್ನು ಸ್ವಾಯತ್ತ ಸಂಸ್ಥೆಯಿಂದ ನಡೆಸುವಂತೆ ನ್ಯಾಯಾಲಯ ಆದೇಶಿಸಿದ್ದು, ಆಕಾಂಕ್ಷಿಗಳಿಗೆ ಅನ್ಯಾಯವಾಗಬಾರದು ಎಂಬ ಉದ್ದೇಶಕ್ಕೆ ಪ್ರಸ್ತುತ ಕೆಇಎಯಿಂದ ಕೆ.ಸೆಟ್, ಪಿಎಸ್‌ಐ ಪರೀಕ್ಷೆಗಳನ್ನು ಬೆಂಗಳೂರಿನಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಮುಂದಿನ ಪರೀಕ್ಷೆಗಳನ್ನು ಆಯಾ ಜಿಲ್ಲೆಯಲ್ಲಿ ನಡೆಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.
ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಿಎಸ್‌ಐ ಪರೀಕ್ಷೆಗೆ ೫೪ ಅಭ್ಯರ್ಥಿಗಳಿದ್ದು, ಅವರಿಗೆ ಪರೀಕ್ಷೆ ನಡೆಸಲು ಅಗತ್ಯ ಅವಕಾಶ ಬೆಂಗಳೂರಿನಲ್ಲಿದೆ. ಆದ್ದರಿಂದ ಪ್ರಸ್ತುತ ಪರೀಕ್ಷೆ ಬೆಂಗಳೂರಿನಲ್ಲಿ ನಡೆಸುತ್ತಿದ್ದು, ಇನ್ನು ಮುಂದೆ ೪೦೩, ೬೬೦ ಪಿಎಸ್‌ಐ ಸೇರಿ ಎಲ್ಲ ನೇಮಕ ಪರೀಕ್ಷೆಗಳನ್ನು ಆಯಾ ಜಿಲ್ಲೆಯಲ್ಲಿಯೇ ನಡೆಸಲಾಗುತ್ತದೆ ಎಂದು ತಿಳಿಸಿದರು.
ನ್ಯಾಯಮೂರ್ತಿ ಬಿ.ವೀರಪ್ಪ ಅವರ ನೇತೃತ್ವದ ನ್ಯಾಯಾಂಗ ತನಿಖೆಗೆ ವಹಿಸಿದ್ದು, ಅವರು ಯಾರನ್ನು ಬೇಕಾದರೂ ಕರೆಯಬಹುದು. ಅವರ ವರದಿ ಬಂದ ನಂತರ ಪಿಎಸ್‌ಐ ಅಕ್ರಮದ ಕುರಿತು ಕ್ರಮ ಕೈಗೊಳ್ಳಲಾಗುವುದು. ಅಗತ್ಯಬಿದ್ದರೆ ಕಾನೂನು ರೂಪಿಸುವ ಅಥವಾ ಇರುವ ಕಾನೂನು ಬಲಗೊಳಿಸಲಾಗುವುದು. ಲಕ್ಷಾಂತರ ಯುವಕರು ಜೀವನ ಕಟ್ಟಿಕೊಳ್ಳಲು ಆಸೆ ಇಟ್ಟುಕೊಂಡಿರುತ್ತಾರೆ. ಅವರ ಜೀವನಕ್ಕೆ ಧಕ್ಕೆ ಬರದಂತೆ ಮಾಡಲಾಗುವುದು ಎಂದು ತಿಳಿಸಿದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್, ಶಾಸಕ ಅಲ್ಲಮಪ್ರಭು ಪಾಟೀಲ್, ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರ, ಡಿಸಿಸಿ ಅಧ್ಯಕ್ಷ ಜಗದೇವ ಗುತ್ತೇದಾರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶರಣು ಮೋದಿ ಇತರರಿದ್ದರು.