ಗುಂಡ್ಲುಪೇಟೆ: ಡಯಾಬಿಟಿಕ್ ರೆಟಿನೋಪಥಿ ಸದ್ದಿಲ್ಲದೆ ಜನರನ್ನು ಕೊಲ್ಲುವ ರೋಗವಾಗಿದ್ದು, ಕಾಲಕಾಲಕ್ಕೆ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಜನರು ತಮ್ಮ ದೃಷ್ಟಿ ಉಳಿಸಿಕೊಳ್ಳಬೇಕು ಎಂದು ಅರವಿಂದ ಕಣ್ಣಾಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ವಿಜಯಕಾಂತ್ ಸಲಹೆ ನೀಡಿದರು.
ಗ್ರಾಮ ಪಂಚಾಯಿತಿ ನೌಕರರ ಸಂಘದ ವತಿಯಿಂದ ಪಟ್ಟಣದ ಸರ್ಕಾರಿ ನೌಕರರ ಭವನದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಉಚಿತ ಕಣ್ಣಿನ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.
ಸಕ್ಕರೆ ಕಾಯಿಲೆಯು ಮನುಷ್ಯದ ಕಣ್ಣಿನ ದೃಷ್ಟಿಯ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ಡಯಾಬಿಟಿಕ್ ರೆಟಿನೋಪತಿಯಿಂದ ಕಣ್ಣಿನ ನರಗಳು ದುರ್ಬಲವಾಗುತ್ತವೆ. ಮನುಷ್ಯರಲ್ಲಿ ಒತ್ತಡ ಹೆಚ್ಚಾದಾಗ ಉಂಟಾಗುವಂತೆ ಪೊರೆ ಆವರಿಸಿ ನಿಶ್ಯಬ್ದ ಕೊಲೆಗಾರನಂತೆ ಕೆಲಸಮಾಡುತ್ತದೆ. ಇತ್ತೀಚಿನ ಹತ್ತಾರು ವರ್ಷಗಳಲ್ಲಿ ಡಯಾಬಿಟಿಕ್ ರೆಟಿನೋಪತಿ ಸಮಸ್ಯೆ ಹೆಚ್ಚಾಗುತ್ತಿದೆ. ಅಲ್ಲದೆ ಚಿಕ್ಕ ಮಕ್ಕಳಲ್ಲಿಯೂ ದೂರದೃಷ್ಟಿ, ಸಮೀಪದೃಷ್ಟಿ ಸಮಸ್ಯೆಗಳು ಸಾಮಾನ್ಯವಾಗುತ್ತಿವೆ. ಆದ್ದರಿಂದ 40 ವರ್ಷ ಮೇಲ್ಪಟ್ಟ ಎಲ್ಲರೂ ಕನಿಷ್ಟ ವರ್ಷಕ್ಕೊಮ್ಮೆಯಾದರೂ ಕಣ್ಣಿನ ಆರೋಗ್ಯ ತಪಾಸಣೆಗೆ ಒಳಗಾಗಬೇಕು. ಈ ಕಾರಣಕ್ಕೆ ಸ್ವಯಂಸೇವಾ ಸಂಸ್ಥೆಗಳು ಪಟ್ಟಣ ಸೇರಿದಂತೆ ಗ್ರಾಮಾಂತರ ಪ್ರದೇಶಗಳಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ಆಯೋಜಿಸುತ್ತಿವೆ ಎಂದರು.
ತಾಲೂಕಿನಲ್ಲಿ ಕಳೆದ 20 ವರ್ಷಗಳಲ್ಲಿ ಸುಮಾರು 40 ಸಾವಿರ ಜನರಿಗೆ, ಚಾಮರಾಜನಗರ, ಮೈಸೂರು ಹಾಗೂ ಹಾಸನ ಜಿಲ್ಲೆಯಲ್ಲಿ ಒಟ್ಟು 1 ಲಕ್ಷ 17 ಸಾವಿರ ಜನರಿಗೆ ಉಚಿತವಾಗಿ ಕ್ಯಾಟರಾಕ್ಟ್ ಶಸ್ತ್ರಚಿಕಿತ್ಸೆ ಮಾಡಿ ಐಒಎಲ್ ಲೆನ್ಸ್ ಅಳವಡಿಸಿ ದೃಷ್ಟಿ ಉಳಿಸುವಂತೆ ಮಾಡಲಾಗಿದೆ. ಸ್ವಯಂಸೇವಾ ಸಂಸ್ಥೆಗಳು ಹಾಗೂ ಸಮುದಾಯದ ಸಹಕಾರದಿಂದ ಆಸ್ಪತ್ರೆಯು ಪ್ರತಿ ತಿಂಗಳೂ ಅಲ್ಲಲ್ಲಿ ಕ್ಯಾಂಪ್‌ಗಳನ್ನು ಆಯೋಜಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಕಣ್ಣಿನ ಸಮಸ್ಯೆ ಹೆಚ್ಚಾಗುತ್ತಿದ್ದು ಆಯಾ ಭಾಗದ ಸಾರ್ವಜನಿಕರು ತಮ್ಮ ಕಣ್ಣುಗಳ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ಆದರೆ ಸದ್ಯದ ಸಂದರ್ಭದಲ್ಲಿ ಕಣ್ಣಿನ ಚಿಕಿತ್ಸೆ ತುಂಬಾ ದುಬಾರಿಯಾಗಿ ಪರಿಣಮಿಸಿದ್ದರಿಂದ ಶ್ರೀಸಾಮಾನ್ಯರು ಸಕಾಲದಲ್ಲಿ ತಪಾಸಣೆಗೊಳಪಡಲು ಸಾಧ್ಯವಾಗದೆ ದೃಷ್ಟಿ ಕಳೆದುಕೊಳ್ಳುತ್ತಿದ್ದಾರೆ. ಆಧುನಿಕ ಯುಗದಲ್ಲಿ ನಿರಂತರ ಮೊಬೈಲ್, ಕಂಪ್ಯೂಟರ್ ಬಳಕೆಯಿಂದ ಯುವಜನತೆ ಮತ್ತು ಮಕ್ಕಳು ಕಣ್ಣಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ನೇತ್ರದಾನ ಮಹಾದಾನ ಎನ್ನಲಾಗುತ್ತಿದೆ. ಆದ್ದರಿಂದ ಪ್ರತಿಯೊಬ್ಬರೂ ನೇತ್ರದಾನ ಮಾಡುವ ಮೂಲಕ ಅಂಧರ ಬದುಕಿಗೆ ಬೆಳಕು ನೀಡಬಹುದು ಎಂದರು.
ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಚ್.ಎಂ.ಪ್ರಸಾದ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕಣ್ಣಿನ ಸಮಸ್ಯೆಗಳು ಹೆಚ್ಚಾಗುತ್ತಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವುದೂ ದುಬಾರಿಯಾಗಿದೆ. ಅರವಿಂದ ಕಣ್ಣಾಸ್ಪತ್ರೆಯು ಇಂಥಾ ಶಿಬಿರಗಳಲ್ಲಿ ಆಯ್ಕೆಯಾದ ರೋಗಿಗಳಿಗೆ ಉಚಿತ ಶಸ್ತ್ರಚಿಕಿತ್ಸೆ ನೀಡುತ್ತಾ ಬಂದಿರುವುದು ಬಡ ಜನತೆಗೆ ಹೆಚ್ಚಿನ ಅನುಕೂಲವಾಗುತ್ತಿದೆ. ಆದ್ದರಿಂದ ಸಾರ್ವಜನಿಕರು ಇಂಥಾ ಶಿಬಿರಗಳಲ್ಲಿ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಉಚಿತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಇದಕ್ಕೂ ಮೊದಲು ಪುರಸಭೆ ಅಧ್ಯಕ್ಷ ಜಿ.ಎಸ್.ಮಧುಸೂದನ್ ಕಾರ್ಯಕ್ರಮ ಉದ್ಘಾಟಿಸಿ ಶುಭ ಕೋರಿದರು. ಶಿಬಿರದಲ್ಲಿ 100 ರೋಗಿಗಳನ್ನು ತಪಾಸಣೆಗೊಳಪಡಿಸಿ ಶಸ್ತ್ರಚಿಕಿತ್ಸೆ ಅಗತ್ಯವಿದ್ದ 35 ಜನರನ್ನು ಕೊಯಮತ್ತೂರಿಗೆ ಕರೆದೊಯ್ಯಲಾಯಿತು.
ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ಎಂ.ಮಲ್ಲು, ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಮಾಜಿ ಅಧ್ಯಕ್ಷ ಮಂಜು, ಲಯನ್ಸ್ ಸಂಸ್ಥೆ ಮಾಜಿ ಅಧ್ಯಕ್ಷರಾದ ಎಂ.ಸಿ.ಶಿವಪ್ರಸಾದ್, ಎನ್.ನಾಗೇಂದ್ರ, ಶಂಕರನಾರಾಯಣ ಜೋಯಿಸ್, ಅನುಗ್ರಹ ಫೌಂಡೇಷನ್‌ನ ಕೆ.ರಮೇಶ್, ಪುಟ್ಟಮ್ಮ, ಮಹೇಶ್, ಸ್ಮಾರ್ಟ್ ಶಾಲೆಯ ಶಿವಾನಂದ, ನಿವೃತ್ತ ಪೊಲೀಸ್ ಅಧಿಕಾರಿ ಎ.ಮಹದೇವ, ನಮ್ಮ ಗುಂಡ್ಲುಪೇಟೆ ತಂಡದ ಚೇತನ್, ಪರಶಿವಮೂರ್ತಿ ಮತ್ತಿತರರಿದ್ದರು.