???????????????????????????????????? 
ಜಿಲ್ಲೆ

ಸದ್ಗುಣ ದೀಕ್ಷೆ ನೀಡಿದ ಕಕ ಪ್ರತಿಷ್ಠಾನ

ಬೀದರ್: ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತ ಕಲ್ಯಾಣ ಕರ್ನಾಟಕ ಪ್ರತಿಷ್ಠಾನ ಜಿಲ್ಲಾದ್ಯಂತ ಸಾರ್ವಜನಿಕರಿಂದ ದುಶ್ಚಟ, ದುರ್ಗುಣಗಳ ಭಿಕ್ಷೆ ಕೇಳಿ, ಸದ್ಗುಣ, ಸನ್ನಡತೆಯ ದೀಕ್ಷೆ ನೀಡಿ ಗಮನ ಸೆಳೆದಿದೆ.

ಪ್ರತಿಷ್ಠಾನವು ಆಗಸ್ಟ್ ತಿಂಗಳು ಜಿಲ್ಲಾದ್ಯಂತ ಅರಿವಿನ ಜ್ಯೋತಿ ಯಾತ್ರೆ ಕೈಗೊಂಡು, ಹಲವು ಹಳ್ಳಿಗಳಲ್ಲಿ ಸಂಚರಿಸಿದೆ. ಯಾತ್ರೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಯಶೋಗಾಥೆಗಳ 10 ಸಾವಿರ ಪುಸ್ತಕ ಉಚಿತ ವಿತರಣೆ ಮಾಡಲಾಗಿದೆ. ಶಾಲಾ, ಕಾಲೇಜುಗಳಲ್ಲಿ ವಿದ್ಯಾರ್ಥಿ ಪ್ರೇರಣೆ ಮತ್ತು ಶಿಕ್ಷಣ ಜಾಗೃತಿ ಕಾರ್ಯಾಗಾರ, ಪ್ರತಿ ದಿನ ಹಳ್ಳಿಗಳಲ್ಲಿ ದುಶ್ಚಟ, ದುರ್ಗುಣಗಳ ಭಿಕ್ಷೆ, ಸದ್ಗುಣ, ಸನ್ನಡತೆಯ ದೀಕ್ಷೆಯ ಶ್ರಾವಣ ಬೆಳಕು ಕಾರ್ಯಕ್ರಮ ನಡೆಸಲಾಗಿದೆ.

ತಾಲೂಕಿನ ಮರಕಲ್ ಗ್ರಾಮದಲ್ಲಿ ಯಾತ್ರೆ ಸಮಾರೋಪ ಜರುಗಿತು. ಗ್ರಾಮದಲ್ಲಿ ಮಠಾಶರು, ಪ್ರಮುಖರು, ಗಣ್ಯರು ಬಸವ ಜೋಳಿಗೆ ಹಿಡಿದು ಸಂಚರಿಸಿದರು. ಅನೇಕರು ಮಾದಕ ವಸ್ತುಗಳನ್ನು ಜೋಳಿಗೆಗೆ ಹಾಕಿ ದುಶ್ಚಟ ಬಿಡುವ ಶಪಥ ಮಾಡಿದರು., ಪ್ರತಿಷ್ಠಾನವು ದುರ್ಗುಣ, ದುಶ್ಚಟಗಳ ದುಷ್ಪರಿಣಾಮಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಮೂಲಕ ನೂರಾರು ಕುಟುಂಬಗಳ ನೆಮ್ಮದಿಗೆ ಕಾರಣವಾಗಿದೆ. ಆಜಾದಿ ಕಾ ಅಮೃತ ಮಹೋತ್ಸವವನ್ನು ವಿವಿಧ ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಅರ್ಥಪೂರ್ಣವಾಗಿ ಆಚರಿದೆ ಎಂದು ಹೇಳಿದರು.

ಕಲ್ಯಾಣ ಕರ್ನಾಟಕ ಪ್ರತಿಷ್ಠಾನ ಅಧ್ಯಕ್ಷ ಬಸವಕುಮಾರ ಪಾಟೀಲ್ ಮಾತನಾಡಿ, ಒಂದು ತಿಂಗಳ ಅಭಿಯಾನದಲ್ಲಿ 5 ಸಾವಿರಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಹಾಗೂ 15 ಸಾವಿರಕ್ಕೂ ಹೆಚ್ಚು ಸಾರ್ವಜನಿಕರೊಂದಿಗೆ ಮಾತನಾಡಿದ್ದೇವೆ. ನೂರಾರು ಮನೆಗಳಿಗೆ ಭೇಟಿ ಕೊಟ್ಟಿದ್ದೇವೆ. ಹತ್ತಾರು ಸಭೆ ಆಯೋಜಿಸಿ ಅನೇಕರ ಬಾಳಿನ ಗೋಳು ಕೇಳಿದ್ದೇವೆ. ದುಶ್ಚಟ, ದುರ್ಗುಣಗಳನ್ನು ಬಸವ ಜೋಳಿಗೆಗೆ ಹಾಕಿಸಿಕೊಂಡು ಸದ್ಗುಣದ ದೀಕ್ಷೆ ನೀಡಲಾಗಿದೆ.

ಗುಣತೀರ್ಥವಾಡಿ ಮಹಾಮನೆಯ ಶ್ರೀ ಬಸವಪ್ರಭು ಸ್ವಾಮೀಜಿ, ಚಟ್ನಳ್ಳಿ ಅಲ್ಲಮಪ್ರಭು ಮಠದ ಶ್ರೀ ಸಿದ್ದೇಶ್ವರಾನಂದ ಸ್ವಾಮೀಜಿ, ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ಮಾತನಾಡಿದರು. ಎಂ.ಎಸ್.ಮನೋಹರ ಮತ್ತು ಮಹೇಶಕುಮಾರ ಧೂಪೆ ನೇತೃತ್ವದ ತಂಡವು ದುಶ್ಚಟಗಳ ಪರಿಣಾಮ ಕುರಿತ ನಾಟಕ ಪ್ರದರ್ಶಿಸಿತು.

ವೈಜಿನಾಥ ಬುಯ್ಯಾ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಮಹ್ಮದ್ ಅಬ್ದುಲ್ ರೌಫ್, ಸುಭಾಷ ವಾರದ, ಶಾಂತಪ್ಪ ದುಬಲಗುಂಡೆ, ಮಲ್ಲಿಕಾರ್ಜುನ ಸಂಗಮಕರ್, ಬಾಬುರಾವ ಪಾಟೀಲ್, ಭಕ್ತರಾಜ ಚಿತಾಪುರೆ, ಮಂಜುನಾಥರಡ್ಡಿ, ರಾಜಕುಮಾರ ಧುಮ್ಮನಸೂರೆ, ರಾಮಶೆಟ್ಟಿ ಹಾವಶೆಟ್ಟಿ, ಇತರರಿದ್ದರು. ಧನರಾಜ ಬುಯ್ಯಾ ಸ್ವಾಗತಿಸಿದರು. ಪಂಡಿತ ಬಾಳೂರೆ ನಿರೂಪಣೆ ಮಾಡಿದರು.