ಜಿಲ್ಲೆ

ಸದೃಢತೆಗೆ ಕ್ರೀಡಾ ಚಟುವಟಿಕೆ ಸಹಕಾರಿ, ಸಿಇಒ ಕೆ.ರೇವಣಪ್ಪ ಅಭಿಮತ, ಜಿಲ್ಲಾಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ಚಾಲನೆ

ದೊಡ್ಡಬಳ್ಳಾಪುರ: ಸರ್ಕಾರಿ ನೌಕರರು ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಮಾನಸಿಕ ಒತ್ತಡ ನಿವಾರಣೆಯಾಗಿ, ಸದೃಢತೆ ಮೂಡುತ್ತದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ರೇವಣಪ್ಪ ಹೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ಸರ್ಕಾರಿ ನೌಕರರ ಸಂಘದ ಸಹಯೋಗದೊಂದಿಗೆ ದೊಡ್ಡಬಳ್ಳಾಪುರದ ಭಗತ್‌ಸಿಂಗ್ ಕ್ರೀಡಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲಾಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯ ಸರ್ಕಾರಿ ನೌಕರರು ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದಲ್ಲೂ ವಿಜೇತರಾಗಿ ಜಿಲ್ಲೆಗೆ ಕ್ರೀಡಾ ವಿಭಾಗದಲ್ಲಿ ಕೀರ್ತಿ ತರಬೇಕು ಎಂದು ಆಶಿಸಿದರು.

ಇಂದಿನ ಯಾಂತ್ರಿಕ ಜೀವನ ಹಾಗೂ ಕರ್ತವ್ಯದ ಒತ್ತಡದ ನಡುವೆ ದೈಹಿಕ ಚಟುವಟಿಕೆಗಳಿಗೆ ಅವಕಾಶವಿಲ್ಲದಂತಾಗಿದೆ. ಆದರೂ ಬಿಡುವು ಮಾಡಿಕೊಂಡು ದೈಹಿಕ ಶ್ರಮಕ್ಕೆ ಅವಕಾಶ ಮಾಡಿಕೊಳ್ಳಬೇಕು. ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಕೇವಲ ವಿದ್ಯಾರ್ಥಿ ಜೀವನಕ್ಕಷ್ಟೇ ಸೀಮಿತಗೊಳಿಸಬಾರದು ಎಂದು ಹೇಳಿದರು.

ಹಬ್ಬದ ವಾತಾವರಣ: ನಾಲ್ಕು ತಾಲೂಕುಗಳ ಸರ್ಕಾರಿ ನೌಕರರು ಕ್ರೀಡೆಯಲ್ಲಿ ಆಸಕ್ತಿಯಿಂದ ಭಾಗವಹಿಸುತ್ತಿರುವುದು ಸಂತಸ ತಂದಿದೆ. ತಾಲೂಕಿನಲ್ಲಿ ಹಬ್ಬದ ವಾತಾವರಣ ಮೂಡಿದೆ ಎಂದು ಶಾಸಕ ವೆಂಕಟರಮಣಯ್ಯ ಹರ್ಷ ವ್ಯಕ್ತಪಡಿಸಿದರು. ಕ್ರೀಡೆಯಲ್ಲಿ ಸೋತವರು ಕುಗ್ಗದೇ, ಗೆದ್ದವರು ಬೀಗದೇ ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸಬೇಕು. ಸ್ಪರ್ಧೆಗಳಲ್ಲಿ ಸೋಲು-ಗೆಲುವಿಗಿಂತ ಭಾಗವಹಿಸುವಿಕೆ ಮುಖ್ಯ ಎಂದು ಹೇಳಿದರು.

7 ಜನರಿಗೆ ಪ್ರಶಸ್ತಿ: ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ವಿವಿಧ ಇಲಾಖೆಗಳ ಅಧಿಕಾರಿಗಳು, ನೌಕರರಿಗೆ ಪ್ರತಿ ವರ್ಷ ಸರ್ವೋತ್ತಮ ಪ್ರಶಸ್ತಿ ನೀಡಲಾಗುತ್ತದೆ. ಅದರಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ7 ಜನರಿಗೆ ಈ ವರ್ಷ ಜಿಲ್ಲಾ ಮಟ್ಟದ ಸರ್ವೋತ್ತಮ ಪ್ರಶಸ್ತಿ ನೀಡಲಾಗಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ಗಂಗಾಧರಪ್ಪ ಮಾಹಿತಿ ನೀಡಿದರು.

ಸರ್ವೋತ್ತಮ ಸೇವಾ ಪ್ರಶಸ್ತಿ ವಿತರಣೆ: ಮಾನಸಿಕ ಅಸ್ವಸ್ಥರ ರಕ್ಷಣೆಗಾಗಿ ಶ್ರಮಿಸಿದ ಜಿಲ್ಲಾ ಹಿರಿಯ ನಾಗರಿಕರು ಮತ್ತು ಅಂಗವಿಕಲರ ಕಲ್ಯಾಣಾಧಿಕಾರಿ ಜಗದೀಶ್ ಅವರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಲಾಯಿತು. ಜತೆಗೆ ಡಾ. ಸಂತೋಷ ಕುಮಾರ್, ಕೃಷಿ ಇಲಾಖೆ ಉಪನಿರ್ದೇಶಕಿ ವಿನುತಾ, ಹನುಮೇಗೌಡ, ಕೆ.ಪಿ. ಶ್ರೀನಿವಾಸಮೂರ್ತಿ, ಶ್ರೀದೇವಿ, ಡಾ. ಸತೀಶ್‌ಕುಮಾರ್ ಅವರಿಗೂ ಪ್ರಶಸ್ತಿ ನೀಡಲಾಯಿತು.

ಮಳೆ ನಡುವೆಯೂ ತಗ್ಗದ ಉತ್ಸಾಹ: 1 ತಿಂಗಳಿಂದ ತಾಲೀಮು ನಡೆಸಿದ್ದ ಜಿಲ್ಲಾಮಟ್ಟದ ಕ್ರೀಡಾಕೂಟಕ್ಕೆ ಮಳೆರಾಯ ಅಡ್ಡಿಪಡಿಸಿದರೂ ಕ್ರೀಡಾಪಟುಗಳ ಉತ್ಸಾಹ ಕುಗ್ಗಲಿಲ್ಲ. ಮಳೆಕಾರಣದಿಂದ ಭಗತ್‌ಸಿಂಗ್ ಕ್ರೀಡಾಂಗಣ ಕೆಸರುಗದ್ದೆಯಂತಾದ್ದರಿಂದ ಒಳಾಂಗಣ ಕ್ರೀಡೆಗಳನ್ನು ಆರಂಭಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮಕ್ಕೆ ಸಚಿವರು, ಸಂಸದರು ಮತ್ತಿತರ ಗಣ್ಯರ ದೊಡ್ಡ ಪಟ್ಟಿಯೇ ಇದ್ದರೂ ಮಳೆ ಹಾಗೂ ಇನ್ನಿತರ ಕಾರಣಗಳಿಂದ ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಸರಳವಾಗಿ ಕ್ರೀಡಾಕೂಟ ಉದ್ಘಾಟಿಸಲಾಯಿತು.