ಜಿಲ್ಲೆ

ಸದೃಢ ಸಮಾಜಕ್ಕೆ ಪೌಷ್ಟಿಕ ಆಹಾರ ಸೇವಿಸಿ

ಔರಾದ್: ಸದೃಢ ಸಮಾಜಕ್ಕೆ ಪೌಷ್ಟಿಕ ಆಹಾರ ಸೇವಿಸಬೇಕು. ಮಹಿಳೆಯರು ಪೌಷ್ಟಿಕಾಂಶ ಇರುವ ಆಹಾರ ಪದಾರ್ಥ ಮನೆಯಲ್ಲಿಯೇ ತಯಾರಿಸಿ ಉಪಯೋಗಿಸಿ, ಆರೋಗ್ಯವಂತರಾಗಬೇಕು ಎಂದು ಸಂತಪುರ ಗ್ರಾಪಂ ಅಧ್ಯಕ್ಷೆ ಮಹಾದೇವಿ ಹೇಳಿದರು.

ಮಸ್ಕಲ್ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಬುಧವಾರ ಏರ್ಪಡಿಸಿದ್ದ ರಾಷ್ಟಿಯ ಪೋಷಣ್ ಅಭಿಯಾನದಲ್ಲಿ ಮಾತನಾಡಿದರು.
ಮೇಲ್ವಿಚಾರಕಿ ವಿಜಯಲಕ್ಷಿö್ಮ ಮಾತನಾಡಿ, ಪೋಷಣ್ ಯೋಜನೆ ಅಡಿ ಗರ್ಭಿಣಿಯರು, ಬಾಣಂತಿಯರು, ಶಿಶುವಿನ ಬೆಳವಣಿಗೆ ಕುಂಠಿತ, ತೂಕ ಕೊರತೆ, ರಕ್ತ ಹೀನತೆ, ಶಿಶುಗಳ ಆರೋಗ್ಯ ವೃದ್ಧಿ ಉದ್ದೇಶ ಹೊಂದಲಾಗಿದೆ. ಉತ್ತಮ ಆರೋಗ್ಯಕ್ಕಾಗಿ ಮಕ್ಕಳ ಕಲ್ಯಾಣ ಇಲಾಖೆ ವಿವಿಧ ಯೋಜನೆ ಜಾರಿ ಮಾಡಿದೆ. ಪ್ರತಿಯೊಬ್ಬರು ಯೋಜನೆಗಳ ಸದುಪಯೋಗಪಡಿಸಿಕೊಂಡು ಹಂತ ಹಂತವಾಗಿ ಅಪೌಷ್ಟಿಕತೆ ಮುಕ್ತ ಸಮಾಜಕ್ಕೆ ಕೈಜೋಡಿಸಬೇಕು ಎಂದರು.

ಚೊಚ್ಚಲ ಗರ್ಭಿಣಿಯರಿಗೆ ಉಡಿ ತುಂಬುವ ಹಾಗೂ ಆರು ತಿಂಗಳ ನಂತರದ ಮಕ್ಕಳಿಗೆ ಅನ್ನ ಪ್ರಾಶನ ಕಾರ್ಯಕ್ರಮ ಜರುಗಿತು. ಗ್ರಾಪಂ ಸದಸ್ಯರಾದ ಇಸ್ಮಾಯಿಲ್, ಸಂತೋಷ, ಮುಖ್ಯಗುರು ಶಿವಪುತ್ರ, ಪ್ರಮುಖರಾದ ನವನಾಥ, ಪದ್ಮಾವತಿ ಹೆಡಗಾಪುರ ಇತರರಿದ್ದರು.