ಬಸವಕಲ್ಯಾಣ: ಸದೃಢ ರಾಷ್ಟ, ಸಮೃದ್ಧ ಸಮಾಜ ಕಟ್ಟುವಲ್ಲಿ ಯುವ ಸಮೂಹದ ಪಾತ್ರ ಮಹತ್ವದ್ದಾಗಿದೆ. ಯುವಕರು ದುಶ್ಚಟಗಳಿಗೆ ಆಕರ್ಷಿತರಾಗದೇ, ಆರೋಗ್ಯದಿಂದ ಇರುವ ಜತೆಗೆ ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಸಂಕಲ್ಪಿಸಬೇಕಿದೆ ಎಂದು ಗವಿಮಠದ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಎಸ್‌ಎಸ್‌ಕೆ ಬಸವೇಶ್ವರ ಕಲಾ, ವಿಜ್ಞಾನ, ವಾಣಿಜ್ಯ ಸ್ನಾತಕ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯದ ಆಶ್ರಯದಲ್ಲಿ ಗಾಂಧಿ ಜಯಂತಿ ನಿಮಿತ್ತ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಶನಿವಾರ ಆಯೋಜಿಸಿದ್ದ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಧರ್ಮಸ್ಥಳದ ಪೂಜ್ಯರ ಮಾರ್ಗದರ್ಶನಲ್ಲಿ ದೇಶದ ಸಂಸ್ಕೃತಿ ಪರಂಪರೆ ಸಂರಕ್ಷಿಸುವಲ್ಲಿ ಮತ್ತು ಹಲವು ಯೋಜನೆ ಮತ್ತು ಕಾರ್ಯಕ್ರಮ ಮೂಲಕ ಗ್ರಾಮೀಣ ಭಾಗದ ಬದುಕಿನಲ್ಲಿ ಭರವಸೆ ಮೂಡಿಸಲಾಗುತ್ತಿದೆ. ಸ್ವಚ್ಛ ಸಮಾಜಕ್ಕಾಗಿ ದುಶ್ಚಟಗಳ ವಿರುದ್ಧ ಜಾಗೃತಿ ಅಭಿಯಾನ ನಡೆಸಲಾಗುತ್ತಿದೆ ಎಂದು ಹೇಳಿದರು.
ಕಲಬುರಗಿ ವಿಭಾಗ ರಾಷ್ಟಿçÃಯ ಬಾಯಿ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ.ಸಂಗೀತಾ ಮಂಠಾಳೆ ಮಾತನಾಡಿ, ಒಳ್ಳೆ ಚಟ ಮತ್ತು ಆಲೋಚನೆ ಮೈಗೂಡಿಸಿಕೊಂಡಾಗ ಕೆಟ್ಟ ಚಟ ದೂರಾಗುತ್ತವೆ. ಅತಿ ಮೊಬೈಲ್ ಬಳಕೆ ನಿದ್ರಾಹೀನತೆ, ಅನಾರೋಗ್ಯಕ್ಕೆ ಕಾರಣ. ಮನೆಯಲ್ಲಿ ಮಕ್ಕಳ ಮೊಬೈಲ್ ಬಳಕೆ ಮೇಲೆ ಪಾಲಕರು ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಪ್ರಾಚಾರ್ಯ ಡಾ.ಬಸವರಾಜ ಎವಲೆ ಮಾತನಾಡಿ, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ದುಶ್ಚಟಗಳಿಗೆ ದಾಸರಾಗಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಸಮಾಜದಲ್ಲಿನ ದುಶ್ಚಟಗಳ ನಿರ್ಮೂಲನೆಗೆ ಜನ ಜಾಗೃತಿ ಅವಶ್ಯ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕ್ಷೇತ್ರ ಯೋಜನಾಧಿಕಾರಿ ಸೋಮಲಿಂಗ ಕೆ. ಪ್ರಾಸ್ತಾವಿಕ ಮಾತನಾಡಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ ಮೂಲಕ ತಾಲೂಕು ಮಟ್ಟದಲ್ಲಿ ಮಧ್ಯವರ್ಜನ ಶಿಬಿರ ಆಯೋಜಿಸಿ, ಮಧ್ಯ ಮುಕ್ತರನ್ನಾಗಿ ಮಾಡುವ ವ್ಯವಸ್ಥೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಾಡಲಾಗುತ್ತಿದೆ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಮಾರ್ಥಂಡ ಜೋಶಿ ಮಾತನಾಡಿದರು. ಜನಜಾಗೃತಿ ವೇದಿಕೆ ಜಿಲ್ಲಾ ಉಪಾಧ್ಯಕ್ಷ ಗುರುನಾಥ ಗಡ್ಡೆ, ಸದಸ್ಯರಾದ ಶಾಮರಾವ, ರಾಜಶೇಖರ ಮಡಕೆ, ಡಾ.ಶಿವಕುಮಾರ ಪಾಟೀಲ್, ನಾರಾಯಣಪುರ ವಲಯ ಮೇಲ್ವಿಚಾರಕ ಮಹೇಶ ಕದಂ, ಮಹೇಶ ಕಲಕೇರಿ, ಮಂಜುನಾಥ, ಭೀಮರಾಯ ಪೂಜಾರಿ, ಮೇಲ್ವಿಚಾರಕ ಸಿದ್ದರಾಜು, ಕೃಷಿ ವಿಸ್ತರಣಾಧಿಕಾರಿ ಮಹಾಂತೇಶ ಇತರರಿದ್ದರು. ತ್ರಿಪುರಾಂತ ಮಡಿವಾಳೇಶ್ವರ ಚೌಕ್‌ನಿಂದ ಕಾಲೇಜಿನವರೆಗೆ ಬೃಹತ್ ಜನ ಜಾಗೃತಿ ಜಾಥಾ ಜರುಗಿತು.