ಜಿಲ್ಲೆ

ಸದೃಢ ಮಾನವ ಸಂಪನ್ಮೂಲದಿಂದ ದೇಶ ಪ್ರಗತಿ, ಜಿಪಂ ಅಧ್ಯಕ್ಷ ಚಿಕ್ಕನರಸಿಂಹಯ್ಯ ಅಭಿಮತ

ಶಿಡ್ಲಘಟ್ಟ : ಗ್ರಾಮೀಣ ಜಾನಪದ ಕಲೆಗಳನ್ನು ಉಳಿಸಿ, ಬೆಳೆಸಲು ಯುವಜನ ಮೇಳಗಳು ಸಹಕಾರಿಯಾಗಲಿವೆಆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ ಅಭಿಪ್ರಾಯಪಟ್ಟರು.

ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಈಧರೆ ಕಲೆ ಮತ್ತು ಸಾಂಸ್ಕೃತಿಕ ಕೇಂದ್ರ, ಭಗತ್ ಸಿಂಗ್ ತಾಲೂಕು ಅಥ್ಲೆಟಿಕ್ ಅಸೋಸಿಯೇಷನ್ ಸಂಯುಕ್ತಾಶ್ರಯದಲ್ಲಿ ತಾಲೂಕಿನ ವರದನಾಯಕನಹಳ್ಳಿ ಗೇಟ್ ಬಳಿಯ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ 2019-20 ನೇ ಸಾಲಿನ ಜಿಲ್ಲಾ ಮಟ್ಟದ ಯುವಜನ ಮೇಳ ಉದ್ಘಾಟಿಸಿ ಮಾತನಾಡಿದರು.

ದೇಶದ ಸಂಪತ್ತನ್ನು ದೃಢಪಡಿಸುವ ಮಾನವ ಸಂಪನ್ಮೂಲ ಸರಿದಾರಿಯಲ್ಲಿ ನಡೆದರೆ ದೇಶದ ಪ್ರಗತಿ ಸಾಧ್ಯ. ದೇಶ ಬಲಿಷ್ಠವಾಗಲು ಅಲ್ಲಿನ ಯುವಜನತೆಯ ಪಾತ್ರ ಬಹುಮುಖ್ಯ ಎಂದರು.

ಯುವಶಕ್ತಿ ನಿಂತ ನೀರಾಗಬಾರದು, ಸದಾ ಸಂಚಲನತೆಯಿಂದ ಕೂಡುವ ಮೂಲಕ ಉತ್ತಮ ಬದುಕು ರೂಪಿಸಿಕೊಳ್ಳಬೇಕು. ಮಳೆಗಾಲದಲ್ಲಿ ಮಳೆ ನೀರನ್ನೇ ಸಂಗ್ರಹಿಸಿ ಉಪಯೋಗಿಸಿಕೊಳ್ಳುವಂತೆ ಯುವಶಕ್ತಿ ಹಿರಿಯರ ಮಾಗದರ್ಶನ ಪಡೆದು ಉತ್ತಮ ದೇಶ ಕಟ್ಟುವ ಸತ್ಪ್ರಜೆಗಳಾಗಬೇಕು ಎಂದು ಶಾಸಕ ವಿ.ಮುನಿಯಪ್ಪ ಸಲಹೆ ನೀಡಿದರು.

ಭಾವಗೀತೆ, ಲಾವಣಿ, ರಂಗಗೀತೆ, ಏಕಪಾತ್ರಾಭಿನಯ, ಗೀಗಿ ಪದ, ಜಾನಪದ ಗೀತೆ, ಭಜನೆ, ಕೋಲಾಟ, ಜಾನಪದ ನೃತ್ಯ, ಡೊಳ್ಳು ಕುಣಿತ, ವೀರಗಾಸೆ ಕುಣಿತ ಮುಂತಾದ ಸ್ಪರ್ಧೆಗಳನ್ನು ಯುವಕರಿಗೆ ಮತ್ತು ಯುವತಿಯರಿಗೆ ಪ್ರತ್ಯೇಕವಾಗಿ ನಡೆಸಲಾಯಿತು.

ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಟಿ.ಜಯಲಕ್ಷ್ಮೀ, ಕಸಾಪ ತಾಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್, ನಗರಸಭೆ ಸದಸ್ಯರಾದ ಕೃಷ್ಣಮೂರ್ತಿ, ಅನಿಲ್ ಕುಮಾರ್, ತೀರ್ಪುಗಾರರಾದ ಲೀಲಾ ಲಕ್ಷ್ಮೀ ನಾರಾಯಣ್, ವೆಂಕಟರಾಮ್, ಮುನಿರಾಜು, ಈಧರೆ ಪ್ರಕಾಶ್, ಸೋ.ಸು.ನಾಗೇಂದ್ರ, ಜಯಂತಿಗ್ರಾಮ ನಾರಾಯಣಸ್ವಾಮಿ ಇತರರಿದ್ದರು.