ಜಿಲ್ಲೆ

ಸದೃಢ ಭಾರತಕ್ಕೆ ಮೋದಿ ಶ್ರಮ

ಕಲಬುರಗಿ: ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರದಿಂದ ದೇಶದ ಸ್ವಾತಂತ್ರ್ಯ ಇತಿಹಾಸದಲ್ಲೇ ಐತಿಹಾಸಿಕ ಅಭಿವೃದ್ಧಿ ಕಾರ್ಯಗಳು ಆಗಿವೆ. ಪ್ರಗತಿಯ ಧ್ಯೋತಕವಾಗಿ ಮೋದಿ ಕಾರ್ಯ ನಿರ್ವಹಿಸುತ್ತಿದ್ದು, ಸದೃಢ ಭಾರತ ನಿರ್ಮಾಣವಾಗುತ್ತಿದೆ ಎಂದು ಬಿಜೆಪಿ ಮುಖಂಡ ಚಂದು ಪಾಟೀಲ್ ಬಣ್ಣಿಸಿದರು.

ನಗರದ ಎಂಜಿ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾಯಕ್ರಮದಲ್ಲಿ ಮಾತನಾಡಿ, ಕೇಂದ್ರ ಸರ್ಕಾರದ ಜನಪರ ಯೋಜನೆಗಳ ಬಗ್ಗೆ ಜನರಿಗೆ ತಿಳಿಸಲು ವಿಕಸಿತ ಭಾರತ ಸಂಕಲ್ಪ ಯಾತ್ರೆ ಹಮ್ಮಿಕೊಂಡಿದ್ದು, ಎಲ್ಲರೂ ಕೇಂದ್ರ ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಜನಪರ ಯೋಜನೆಗಳಾದ ಆಯುಷ್ಮಾನ್ ಭಾರತ್, ಜಲ ಜೀವನ ಮಿಷನ್, ದೀನದಯಾಳ ಅಂತ್ಯೋದಯ ಯೋಜನೆ, ಪಿಎಂ ಉಜ್ವಲ ಯೋಜನೆ, ಜನ್‌ಧನ್ ಸೇರಿ ವಿವಿಧ ಯೋಜನೆಗಳು ಫಲಾನುಭವಿಗಳಿಗೆ ನೇರವಾಗಿ ದೊರೆಯುತ್ತಿವೆ. ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಬ್ಯಾಂಕ್ ಅಧಿಕಾರಿಗಳಾದ ಜಗದೀಶ ಪ್ರಸಾದ, ಸತೀಶ ಚವ್ಹಾಣ್, ಗೋಪಾಲ ಕುಲಕರ್ಣಿ, ಮುಖಂಡರಾದ ಉಮೇಶ ಪಾಟೀಲ್, ಅಶೊಕ ಮಾನಕರ, ಮಂಜುನಾಥ ಚಿಲಶೆಟ್ಟಿ, ಶಿವು ಕಾಳಗಿ, ಶರಣು ಸಿಗಿ, ಸಂತೋಷ ಹುಡಗಿ, ವಿಜಯಕುಮಾರ, ಮಹೇಶ ಪ್ರಭಾವತಿ, ಸುನಂದಾ ಪಾಟೀಲ್ ಇತರರಿದ್ದರು.