ಜಿಲ್ಲೆ

ಸದೃಢ ದೇಶ ನಿರ್ಮಾಣಕ್ಕೆ ಶಿಕ್ಷಕರ ಕೊಡುಗೆ ಅಪಾರ

ಯಾದಗಿರಿ: ಸದೃಢ ದೇಶ ನಿರ್ಮಾಣ ಮತ್ತು ಅಭಿವೃದ್ಧಿಗೆ ಶಿಕ್ಷಕರ ಕೊಡುಗೆ ಅಪಾರವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.

ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಹಮ್ಮಿಕೊಂಡ ೨೦೨೪-೨೫ನೇ ಸಾಲಿನ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರಧಾನ ಕರ‍್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕರು ಹೆಚ್ಚಿನ ಶ್ರಮವಹಿಸಿ ಜಿಲ್ಲೆಯ ಫಲಿತಾಂಶ ಹೆಚ್ಚಿಸುವ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಸರ್ಕಾರಿ ಶಾಲೆಗೆ ಹೆಚ್ಚಾಗಿ ಬಡ ಕುಟುಂಬದ ಮಕ್ಕಳೇ ಬರುತ್ತಾರೆ. ಆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಅವರನ್ನು ಎತ್ತರಕ್ಕೆ ಬೆಳೆಸುವ ಕೆಲಸ ನಿಮ್ಮದಾಗಬೇಕು. ಅಲ್ಲದೆ ಮೌಲ್ಯಯುತವಾದ ಬದುಕಿಗೆ ಶಿಕ್ಷಣ ಬಹಳ ಮುಖ್ಯವಾಗಿದೆ ಎಂದರು.

ಕಲ್ಯಾಣ ಕರ್ನಾಟಕ ಭಾಗಕ್ಕೆ ೩೭೧(ಜೆ) ವಿಶೇಷ ಸ್ಥಾನ ಸಿಕ್ಕಿದ್ದು, ಇದರಿಂದ ಈ ಭಾಗದ ಜನರಿಗೆ ಹೆಚ್ಚಿನ ಅನುಕೂಲವಾಗಲಿವೆ. ಅಲ್ಲದೆ ಸರ್ಕಾರದ ಅನೇಕ ಯೋಜನೆಗಳು ಮತ್ತು ಶಿಕ್ಷಣಕ್ಕಾಗಿ ಸಿಗುವ ಸೌಲಭ್ಯವನ್ನು ನಮ್ಮ ಜನರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ವಿಧಾನ ಪರಿಷತ್ ಶಾಸಕ ಚಂದ್ರಶೇಖರ ಪಾಟೀಲ್ ಮಾತನಾಡಿ, ಮನುಷ್ಯನಿಗೆ ಹೃದಯ ಎಷ್ಟು ಮುಖ್ಯವೋ ಹಾಗೆಯೇ ಸುಂದರ ಸಮಾಜ ನಿರ್ಮಾಣಕ್ಕೆ ಶಿಕ್ಷಕರ ಅಗತ್ಯವೂ ಅಷ್ಟೇ ಮುಖ್ಯವಾಗಿದೆ. ಸರ್ಕಾರಿ ನೌಕರರಿಗೆ ಇರುವ ಪಿಂಚಣಿ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿನಾಯಕ ಮಾಲಿ ಪಾಟೀಲ್, ಕರಾಪ್ರಾಶಾಶಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ, ಡಿಡಿಪಿಐ ಮಂಜುನಾಥ, ಯಾದಗಿರಿ ಬಿಇಒ ಚಂದ್ರಶೇಖರಗೌಡ ಪಾಟೀಲ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಪಾಟೀಲ್, ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಅಶೋಕ ಕುಮಾರ, ಪ್ರಾಥಮಿಕ ಶಾಲಾ. ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರಾಘವೇಂದ್ರ ಅಳ್ಳಳ್ಳಿ, ಯಾದಗಿರಿ ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶರಣಗೌಡ ಬಿ, ಯಾದಗಿರಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಯಂಕಪ್ಪ ದೊಡ್ಮನಿ, ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಹಣಮಂತ ಹೊಸಮನಿ, ಬೋಧಕೇತರ ನೌಕರರ ಸಂಘದ ಜಿಲ್ಲಾಧ್ಯಕ್ಷ ಆದೆಪ್ಪ ಬಾಗ್ಲಿ, ಪದವೀಧರ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಲ್ಲಯ್ಯ ಸಂಜೀವಿನಿ, ಜಿಲ್ಲಾ ನೋಡಲ್ ಅಧಿಕಾರಿ ಬಸನಗೌಡ ಆಲ್ದಾಳ, ಶಿಕ್ಷಣ ಸಂಯೋಜಕ ಮಲ್ಲಿಕಾರ್ಜುನ ಕಾವಲಿ ಇತರರಿದ್ದರು.