ನಾಪೋಕ್ಲು: ದೇಶವನ್ನು ಉತ್ತಮ ಹಾಗೂ ಸದೃಢವಾಗಿ ಕಟ್ಟಲು ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಮಾರ್ಗದರ್ಶನ ನೀಡಬೇಕಿದೆ ಎಂದು ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ವಿಜೇತೆ ಹಾಕತ್ತೂರು ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಎಂ.ವನಜಾ ಅಭಿಪ್ರಾಯಪಟ್ಟರು.
ನಾಪೋಕ್ಲು ಬಿಲ್ಲವ ಸಮಾಜದ ವತಿಯಿಂದ ಇಲ್ಲಿಯ ಭಗವತಿ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀಬ್ರಹ್ಮರ್ಷಿ ನಾರಾಯಣಗುರು ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶ್ರೀನಾರಾಯಣಗುರು ಒಂದೇ ಜಾತಿ, ಒಂದೇ ಮತ, ಒಂದೇ ಧರ್ಮ, ಒಂದೇ ದೇವರು ಎಂಬ ತತ್ವವನ್ನು ಸಾರಿದವರು. ಮೇಲ್ಜಾತಿಗೆ ಇರುವ ಸ್ಥಾನಮಾನ ಹಕ್ಕು ಎಲ್ಲರಿಗೂ ಸಮವಾಗಿ ಸಿಗಬೇಕು. ಜಾತಿ ಅಸಮಾನತೆಯನ್ನು ದೂರ ಮಾಡಬೇಕು. ಶೋಷಿತ ವರ್ಗದ ಹಕ್ಕುಗಳ ಸಂರಕ್ಷಣೆ ಮಾಡಬೇಕು ಎಂದು ಸಾರಿದರು. ದೇವರನ್ನು ಪೂಜಿಸುವುದು ಸ್ವಹಿತಕ್ಕಾಗಿ, ದೇಶ ಸೇವೆಗಾಗಿ ನಮ್ಮ ಜೀವನವನ್ನು ಮೀಸಲಿಡಬೇಕು ಎಂದರು.
ಎನ್‌ಸಿಸಿ ನಿವೃತ್ತ ಅಧಿಕಾರಿ ಡಾ.ಗಣೇಶ್ ಗೋಣಿಕೊಪ್ಪ ಮಾತನಾಡಿ, ನಾರಾಯಣಗುರು ಯೋಗ, ಧ್ಯಾನ, ಸಂಸ್ಕೃತ ಕಲಿತ ಪರಿಣಿತರಾಗಿದ್ದರು. ಶಾಲೆಯನ್ನು ತೆರೆದರು, ಒಂದೇ ಜಾತಿ, ಧರ್ಮ, ದೇವರು ಎನ್ನುವ ಸಂದೇಶವನ್ನು ಮನುಕುಲಕ್ಕೆ ಸಾರಿದರು. ಅವರ ತತ್ವ-ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಂಘಟನೆ ಮಾಡಬೇಕು ಎಂದರು.
ನಾಪೋಕ್ಲು ಬಿಲ್ಲವ ಸಮಾಜದ ಅಧ್ಯಕ್ಷ ಬಿ.ಎಂ.ಪ್ರತೀಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಪ್ರತಿಯೊಬ್ಬ ಸದಸ್ಯನ ಸಹಕಾರ ಅವಶ್ಯ. ಈ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಕಾರ್ಯಪ್ರವೃತ್ತರಾಗಬೇಕಾಗಿದೆ ಎಂದರು.
ಕೊಡಗು ಜಿಲ್ಲಾ ಬಿಲ್ಲವ ಸಮಾಜದ ಉಪಾಧ್ಯಕ್ಷ ವಿಠಲ ಪೂಜಾರಿ, ಬಿಲ್ಲವ ಸಮಾಜದ ಉಪಾಧ್ಯಕ್ಷ ಬಿ.ಆರ್.ವಸಂತ, ಜಗನಾಥ್ ಪಾಲೂರು ಹಾಗೂ ಸಮಾಜದ ನಿರ್ದೇಶಕರು, ಸದಸ್ಯರು ಉಪಸ್ಥಿತರಿದ್ದರು. ಇದಕ್ಕೂ ಮೊದಲು ಶ್ರೀಬ್ರಹ್ಮರ್ಷಿ ನಾರಾಯಣಗುರು ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಸಲ್ಲಿಸಿದರು.
ಶಿಕ್ಷಕಿ ಎಂ.ವನಜಾ, ಡಾ.ಗಣೇಶ್ ಅವರನ್ನು ಸನ್ಮಾನಿಸಲಾಯಿತು. ವಿವಿಧ ಮನೋರಂಜನ ಕಾರ್ಯಕ್ರಮಗಳನ್ನು ಆಯೋಜಿಸಿ ವಿಜೇತರಿಗೆ ಮತ್ತು ಕಾರ್ಯಕ್ರಮಕ್ಕೆ ವಿವಿಧ ರೀತಿಯಲ್ಲಿ ಸಹಕರಿಸಿ ಪ್ರೋತ್ಸಾಹಿಸಿದ ಸದಸ್ಯರಿಗೆ ಗಣ್ಯರು ನೆನಪಿನ ಕಾಣಿಕೆ ಹಾಗೂ ಬಹುಮಾನ ವಿತರಿಸಿದರು.