ಬೀದರ್: ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಅವೈಜ್ಞಾನಿಕವಾಗಿದ್ದು, ಬಹಿರಂಗ ಚರ್ಚೆ ಮಾಡದೇ ಜಾರಿಗೊಳಿಸಬಾರದು ಎಂದು ಬಂಜಾರ ಸಮಾಜದ ಮುಖಂಡರು ಆಗ್ರಹಿಸಿದ್ದಾರೆ.
ಈ ಕುರಿತು ನಗರದಲ್ಲಿ ಬಂಜಾರ ಸಮಾಜದ ಮುಖಂಡರ ನಿಯೋಗವು ಶನಿವಾರ ಶಾಸಕ ಬಂಡೆಪ್ಪ ಖಾಶೆಂಪುರ ಅವರಿಗೆ ಭೇಟಿ ಮಾಡಿ ಮನವಿ ಸಲ್ಲಿಸಿ, ನ್ಯಾ.ಸದಾಶಿವ ಆಯೋಗದ ವರದಿ ಜಾರಿಯಾದರೆ ಲಂಬಾಣಿ, ಭೋವಿ, ಕೋರವ ಮತ್ತು ಕೊರಮ ಜಾತಿಗಳನ್ನು ಪರಿಶಿಷ್ಟ ಪಟ್ಟಿಯಿಂದ ಹೊರಹೋಗುವ ಅಪಾಯವಿದೆ. ಆದರೆ, ಸಾಮಾಜಿಕವಾಗಿ ಇನ್ನೂ ಏಳಿಗೆ ಕಾಣದ ಈ ಸಮುದಾಯವನ್ನು ಪರಿಶಿಷ್ಟ ಜಾತಿಯಲ್ಲೇ ಮುಂದುವರೆಸುವುದು ಅಗತ್ಯವಾಗಿದೆ ಎಂದು ವಿವರಿಸಿದ್ದಾರೆ.
ಇಷ್ಟರಲ್ಲೇ ನಡೆಯುವ ವಿಧಾನಸಭೆ ಅಧಿವೇಶನದಲ್ಲಿ ಈ ವಿಷಯವನ್ನು ಚರ್ಚೆಗೆ ತೆಗೆದುಕೊಂಡು ಈ ನಾಲ್ಕು ಜಾತಿಗಳನ್ನು ಕೈಬಿಡಬೇಕು ಎಂಬ ನಿರ್ಣಯ ಮಂಡಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕೆಂಬ ಹುನ್ನಾರ ನಡೆಯುತ್ತಿದೆ. ಆದರೆ, ಇದ್ಯಾವುದಕ್ಕೂ ಆಸ್ಪದ ನೀಡದೇ ಯತಾಸ್ಥಿತಿ ಮುಂದುವರೆಸಿಕೊಂಡು ಹೋಗುವಂತೆ ಶಾಸಕರಲ್ಲಿ ಮುಖಂಡರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಗೋವರ್ಧನ್ ರಾಠೋಡ್, ಗೋಪಾಲಸಿಂಗ್ ರಾಠೋಡ್, ಬನ್ಸಿಧರ್ ರಾಠೋಡ್, ರಾಜಕುಮಾರ್ ಜಾಧವ್, ಪ್ರೇಮಸಿಂಗ್ ಪವಾರ್, ಸಂತೋಷ್ ನಾಯಕ್, ನಾರಾಯಣ ರಾಠೋಡ್, ರಮೇಶ್ ರಾಠೋಡ್, ಕಿಶನ್ ಪವಾರ್, ವಿಷ್ಣು ರಾಠೋಡ್, ಪ್ರಕಾಶ್ ಜಾಧವ್, ಮೋತಿರಾಂ ಪವಾರ್, ಪಾಂಡು ಚವ್ಹಾಣ್, ರವಿ ಪವಾರ್, ವೈಜಿನಾಥ್ ರಾಠೋಡ್, ಶ್ರಾವಣ ರಾಠೋಡ್, ನಾಥುರಾಂ ರಾಠೋಡ್ ಮತ್ತಿತ್ತರರು ಉಪಸ್ಥಿತರಿದ್ದರು.