ಜಿಲ್ಲೆ

ಸದಾಶಿವ ವರದಿ ಕೇಂದ್ರಕ್ಕೆ ಶಿಫಾರಸು ಮಾಡಿ

ಚಿತ್ರದುರ್ಗ: ಬೆಳಗಾವಿ ಅಧಿವೇಶನದೊಳಗೆ ಒಳ ಮೀಸಲಾತಿ ಕುರಿತು ನಿವೃತ್ತ ನ್ಯಾ.ಎ.ಜೆ.ಸದಾಶಿವ ಆಯೋಗ ನೀಡಿರುವ ವರದಿ ಮಂಡಿಸಿ, ಅಂಗೀಕರಿಸಿ, ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಡಾ.ಎನ್.ಮೂರ್ತಿ ಸ್ಥಾಪಿತ) ಜಿಲ್ಲಾ ಶಾಖೆ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.

ರಾಜಕೀಯ ಪಕ್ಷಗಳು ಎಸ್ಸಿ, ಎಸ್ಟಿ ವರ್ಗವನ್ನು ಮತ ಬ್ಯಾಂಕ್ ಆಗಿ ಬಳಸಿಕೊಂಡು ಮೋಸ ಮಾಡಿವೆ. ಈ ಬಾರಿ ವಂಚಿಸದೆ, ನ್ಯಾಯ ದೊರಕಿಸಿಕೊಡಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.

ಸುಪ್ರೀಂ ಕೋರ್ಟ್‌ನ 7 ನ್ಯಾಯಾಮೂರ್ತಿಗಳ ಪೀಠದಲ್ಲಿರುವ ವಿವಿಧ ರಾಜ್ಯಗಳ ಒಳ ಮೀಸಲಾತಿ ಪ್ರಕರಣಗಳ ಪರವಾಗಿ ಕೇಂದ್ರ ಸರ್ಕಾರ ಬಲವಾಗಿ ವಾದ ಮಂಡಿಸಿ, ವರ್ಗಿಕರಿಸಬೇಕು. ಚಳಿಗಾಲದ ಅಧಿವೇಶನದೊಳಗೆ ಈ ಕುರಿತು ಕ್ರಮ ವಹಿಸಬೇಕು. 2008ರಲ್ಲಿ ಉಷಾ ಮೆಹ್ರ ಸಮಿತಿ ನೀಡಿರುವ ವರದಿಯಂತೆ ಸಂವಿಧಾನದಲ್ಲಿ ತಿದ್ದುಪಡಿ ತಂದು ಅನುಷ್ಠಾನಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.

ಕಾಂತರಾಜ ಆಯೋಗದ ವರದಿಯನ್ನು ಸದನದಲ್ಲಿ ಚರ್ಚಿಸಿ, ಅಂಗೀಕರಿಸಿ, ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹಂಚಿಕೆಗೆ ಕ್ರಮವಹಿಸಬೇಕು. ಇದರ ಪ್ರಮಾಣ ಶೇ 75ಕ್ಕೆ ಹೆಚ್ಚಿಸಬೇಕು. ರಾಜ್ಯಾದ್ಯಂತ ಎಲ್ಲಾ ವರ್ಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿದ್ಯಾರ್ಥಿ ನಿಲಯಗಳ ಸಂಖ್ಯೆ ಹಾಗೂ ವಿದ್ಯಾರ್ಥಿ ವೇತನ ಹೆಚ್ಚಿಸಬೇಕು. ತ್ವರಿತವಾಗಿ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು.

ನಿವೃತ್ತ ನ್ಯಾ.ನಾಗಮೋಹನದಾಸ್ ಆಯೋಗದ ವರದಿಯನ್ನು ಯಥಾವತ್ತಾಗಿ ಅನುಷ್ಠಾನಗೊಳಿಸಿ, ಸಂವಿಧಾನದ ಷೆಡ್ಯೂಲ್-9ರಲ್ಲಿ ಸೇರಿಸಬೇಕು. ಎಸ್ಸಿಯಲ್ಲಿನ 101 ಜಾತಿಗಳಿಗೂ ನ್ಯಾಯ ಸಿಗಬೇಕಾದರೆ, ಈ ವರದಿಗಳು ಜಾರಿಯಾಗಲೇಬೇಕು. ಈ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮೂರು ಪಕ್ಷಗಳಿಗೂ ತಕ್ಕ ಪಾಠ ಕಲಿಸಲಿದ್ದೇವೆ ಎಂದು ಎಚ್ಚರಿಸಿದರು.

ಸಮಿತಿ ಅಧ್ಯಕ್ಷ ಸಿ.ಎಚ್.ಮಂಜುನಾಥ, ಪದಾಧಿಕಾರಿಗಳಾದ ನೇಹ ಮಲ್ಲೇಶ್, ಡಿ.ವೀರಭದ್ರಪ್ಪ, ದಾದಾಪೀರ್, ಡಿ.ಶಿವಣ್ಣ, ಜಾಕೀರ್ ಹುಸೇನ್ ಇತರರಿದ್ದರು.