ಚಿತ್ರದುರ್ಗ: ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಮುಂಬರುವ ಬೆಳಗಾವಿ ಆಧಿವೇಶನದಲ್ಲಿ ಮಂಡಿಸಿ, ಚರ್ಚಿಸಿ, ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಶ್ರೀ ಷಡಕ್ಷರಿ ಮುನಿ ದೇಶಿಕೇಂದ್ರ ಸ್ವಾಮೀಜಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ವರದಿ ಜಾರಿಗೊಳಿಸುವ ಭರವಸೆ ನೀಡಿತ್ತು. ಆದರೆ, ಮೊದಲ ಅಧಿವೇಶನದಲ್ಲಿ ಮಂಡಿಸಿಲ್ಲ. ಆದ್ದರಿಂದ ಸಿಎಂ ಗಮನ ಸೆಳೆಯಲು ಮನವಿ ಸಲ್ಲಿಸಲಾಗುವುದು ಎಂದರು.
ವರದಿ ಜಾರಿಯಾದಲ್ಲಿ ಎಸ್ಸಿಯೊಳಗಿನ ಶೋಷಿತ ಸಮುದಾಯಗಳು ಮುಖ್ಯವಾಹಿನಿಗೆ ಬರಲು ಅನುಕೂಲವಾಗಲಿದೆ. ಇತರೆ ಪರಿಶಿಷ್ಟ ಜಾತಿ ಸಮುದಾಯಗಳಿಗೆ ಯಾವ ತೊಂದರೆಯೂ ಆಗುವುದಿಲ್ಲ. ಯಾರನ್ನೂ ಎಸ್ಸಿ ಪಟ್ಟಿ, ಮೀಸಲಾತಿ ಸೌಲಭ್ಯದಿಂದ ಹೊರಗಿಡುವುದಿಲ್ಲ. ಆದ್ದರಿಂದ ಅತಂಕ ಪಡುವ ಅಗತ್ಯವಿಲ್ಲ. ಸುಖಾಸುಮ್ಮನೆ ಸಾಮರಸ್ಯ ಕದಡುವ ವಿಚಾರಗಳಿಗೆ ಮಹತ್ವ ಕೊಡುವುದು ಬೇಡ ಎಂದು ತಿಳಿಸಿದರು.
ಈ ವರದಿ ಜೊತೆಗೆ ಕಾಂತರಾಜ್ ಆಯೋಗದ ವರದಿಯನ್ನು ಜಾರಿ ಮಾಡಬೇಕು. ಎಲ್ಲವೂ ಬಹಿರಂಗವಾಗಿ ನಡೆಯಲೆಂಬ ಕಾರಣಕ್ಕೆ ಅಧಿವೇಶನದಲ್ಲಿ ಆಗಲೆಂದು ಆಗ್ರಹಿಸುತ್ತಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ನಂಬಿಕೆ ಇದೆ. 3 ದಶಕಗಳ ಹೋರಾಟಕ್ಕೆ ಸ್ಪಂದಿಸದಿದ್ದರೆ, ಸಮುದಾಯ ಮತ್ತು ಜನಪ್ರತಿನಿಧಿಗಳ ಸಭೆ ಕರೆದು ಹೋರಾಟದ ಕುರಿತು ಚರ್ಚಿಸಲಾಗುವುದು ಎಂದರು.
ಮುಖಂಡ ಬಿ.ಪಿ.ತಿಪ್ಪೇಸ್ವಾಮಿ ಮಾತನಾಡಿ, ಎಸ್ಸಿಯ 101 ಜಾತಿಯೊಳಗೆ ಈಗಲೂ ಅನೇಕ ಸಮುದಾಯಗಳು ಅತ್ಯಂತ ಹಿಂದುಳಿದಿವೆ. ಆದ್ದರಿಂದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪಡೆಯೋಣ. ಇತರೆ ಸಮಾಜಗಳಿಗೆ ಅನ್ಯಾಯ ಖಂಡಿತ ಆಗದು. ನಾವೆಲ್ಲರೂ ಸಹೋದರರಿದ್ದಂತೆ. ಗೊಂದಲವಿದ್ದರೆ ಸಭೆ, ಚರ್ಚೆಗಳ ಮೂಲಕ ಪರಿಹರಿಸಿಕೊಳ್ಳೋಣ. ಆದರೆ, ಪರಸ್ಪರರ ನಡುವೆ ದ್ವೇಷ ಬಿತ್ತುವ ಕೆಲಸವಾಗಬಾರದು ಎಂದು ಸಲಹೆ ನೀಡಿದರು.
ಮುಖಂಡರಾದ ರಾಜಣ್ಣ, ರವಿ, ಸಮರ್ಥ ಇದ್ದರು.