ಜಿಲ್ಲೆ

ಸದಾಶಿವ, ಕಾಂತರಾಜ್ ವರದಿ ಜಾರಿಗೊಳಿಸಿ

ಚಿತ್ರದುರ್ಗ: ನ್ಯಾ. ಎ.ಜೆ.ಸದಾಶಿವ ಮತ್ತು ಕಾಂತರಾಜ್ ಆಯೋಗದ ವರದಿಯನ್ನು ಶೀಘ್ರ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯ (ಶೋಷಿತರ ವಾದ) ಕಾರ್ಯಕರ್ತರು ಆರಂಭಿಸಿರುವ ಅಮರಣಾಂತ ಧರಣಿ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಶನಿವಾರವೂ ಮುಂದುವರಿಯಿತು.

ಒಳಮೀಸಲಾತಿ ಜಾರಿ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ರವಾನಿಸಿದರು.

ನಗರದ ಮುಖ್ಯ ರಸ್ತೆಗಳನ್ನು ಅಗಲೀಕರಣ ಮಾಡಬೇಕು. ವಸತಿ ರಹಿತರಿಗೆ ಕೂಡಲೇ ನಿವೇಶನ ಹಂಚಬೇಕು. ಅಲ್ಲದೆ, ಮನೆ ನಿರ್ಮಿಸಿಕೊಳ್ಳಲು ಸಹಾಯಧನ ನೀಡಬೇಕು. ಸರ್ಕಾರದ ಜಮೀನಿನಲ್ಲಿ ಅಕ್ರಮವಾಗಿ ಸಾಗುವಳಿ ಮಾಡುತ್ತಿರುವುದನ್ನು ಸಕ್ರಮಗೊಳಿಸಿ ಹಕ್ಕುಪತ್ರ ವಿತರಿಸಬೇಕು ಎಂದು ಆಗ್ರಹಿಸಿದರು.

ದಸಂಸ ಜಿಲ್ಲಾ ಅಧ್ಯಕ್ಷ ಸಿ.ಎಚ್.ಮಂಜುನಾಥ್ ಮಾತನಾಡಿ, ಸದಾಶಿವ, ಕಾಂತರಾಜ್ ಆಯೋಗ ವರದಿ ಸಲ್ಲಿಸಿ ಅನೇಕ ವರ್ಷಗಳಾಗಿದ್ದರೂ ಒಳ ಮೀಸಲಾತಿ ಜಾರಿಗೆ ತರುವಲ್ಲಿ ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿದೆ. ಜಾತಿ ಜನಗಣತಿ ಸಮೀಕ್ಷೆ ನಡೆಸುವಲ್ಲಿ ಎಲ್ಲ ಪಕ್ಷಗಳು ವಿಫಲವಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಸ್ಪಶ್ಯರು, ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರನ್ನು ಕಡೆಗಣಿಸುವುದು ಸಾಮಾನ್ಯವಾಗಿದೆ. ಸರ್ಕಾರ ಒಳಮೀಸಲಾತಿ ಶೀಘ್ರ ಅನುಷ್ಠಾನಕ್ಕೆ ತರದಿದ್ದರೆ, ಮುಂದಿನ ದಿನಗಳಲ್ಲಿ ಹೋರಾಟದ ಸ್ವರೂಪ ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದರು.

ಮುಖಂಡರಾದ ಸಿ.ಎಚ್.ಮಂಜುನಾಥ್, ಶಿವಣ್ಣ, ಇನಾಯತ್, ಹೊನ್ನೂರಪ್ಪ, ದಾದಾಪೀರ್, ಬಸವರಾಜ್, ರಂಗಸ್ವಾಮಿ, ಕೃಷ್ಣಪ್ಪ, ರಜಿಯಾಬೇಗಂ, ಪ್ಯಾರಿಮಾ, ವಿಜಯಲಕ್ಷ್ಮೀ, ಕೈರುನ್, ಪರ್ವಿನ್, ರಾಮಣ್ಣ, ತಿಪ್ಪಮ್ಮ, ವೆಂಕಟೇಶ್, ಮಸ್ಕಾನ್, ಶಾಹಿನಾ, ರೇಷ್ಮಾ, ಮೆಹಬೂಬಿ, ಮಮ್ತಾಜ್ ಇತರರಿದ್ದರು.