ದಾವಣಗೆರೆ: ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ಒಳಮೀಸಲು ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡುವಂತೆ ಆಗ್ರಹಿಸಿ ದಲಿತ ಸಂಘಟನೆಗಳ ಮಹಾಒಕ್ಕೂಟ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಇಲ್ಲಿನ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಡಿಸಿ ಡಾ.ಎಂ.ವಿ.ವೆಂಕಟೇಶ್ ಅವರಿಗೆ ಮನವಿ ಸಲ್ಲಿಸಲಾಯಿತು.
ಬೆಳಗಾವಿಯಲ್ಲಿನ ಉಭಯ ಸದನಗಳ ಅಧಿವೇಶನದಲ್ಲಿ ಒಳಮೀಸಲು ವರದಿ ಅಂಗೀಕರಿಸಿ, ಕೇಂದ್ರಕ್ಕೆ ಶಿಫಾರಸು ಮಾಡುವುದಾಗಿ ಹೇಳಿದ್ದ ರಾಜ್ಯ ಸರ್ಕಾರ ನುಡಿದಂತೆ ನಡೆಯಬೇಕು ಎಂದು ಕಾರ್ಯಕರ್ತರು ಆಗ್ರಹಿಸಿದರು.
ಶೋಷಣೆಗೆ ಗುರಿಯಾದ ಅಸ್ಪಶ್ಯ ಸಮುದಾಯಗಳು ಶಿಕ್ಷಣ, ಉದ್ಯೋಗ, ಸಾಮಾಜಿಕ ರಾಜಕೀಯ ಸ್ಥಾನಗಳಿಂದ ವಂಚಿತವಾಗಿವೆ. ಜಾತಿಗಳ ಜನಸಂಖ್ಯೆಗೆ ಅನುಗುಣವಾಗಿ ದೇಶದ ಸಂಪತ್ತು, ಅಧಿಕಾರ, ಆದಾಯ ಮತ್ತು ಸಂವಿಧಾನಿಕ ಸೌಲಭ್ಯ ಹಂಚಿಕೆ ಆಗಬೇಕೆಂಬುದು ಮೀಸಲಾತಿ ವರ್ಗೀಕರಣದ ಆಶಯವಾಗಿದೆ. ಇದು ಪಾಲನೆಯಾಗಬೇಕು ಎಂದರು.
ಸದಾಶಿವ ವಿಚಾರಣಾ ಆಯೋಗವು 2012ರಲ್ಲಿ ಸಲ್ಲಿಸಿರುವ ವರದಿಯಲ್ಲಿ ಅಸ್ಪಶ್ಯ, ಸ್ಪಶ್ಯ ಜಾತಿಗಳ ಜನಸಂಖ್ಯೆಯನುಸಾರ ಶೇಕಡವಾರು ಮೀಸಲು ವರ್ಗೀಕರಿಸಲಾಗಿದೆ. ಇದು ಅನುಷ್ಠಾನವಾಗದ್ದರಿಂದ ಮಾದಿಗ ಸಂಬಂಧಿತ ಜಾತಿಗಳು ಕೊರಗುತ್ತಿದ್ದರೆ, ರಾಜಕೀಯ ಪಕ್ಷಗಳು ಇದಕ್ಕೆ ಸ್ಪಂದಿಸುತ್ತಿಲ್ಲ ಎಂದು ಪ್ರತಿಭಟಕಾರರು ದೂರಿದರು.
ಹಿಂದಿನ ಬಿಜೆಪಿ ಸರ್ಕಾರ, ಮಾಧುಸ್ವಾಮಿ ನೇತೃತ್ವದ ಸಚಿವ ಸಂಪುಟದ ಉಪಸಮಿತಿ ವರದಿಯಂತೆ ಮೀಸಲಾತಿ ವರ್ಗೀಕರಿಸಿ ಕೇಂದ್ರಕ್ಕೆ ಸಲ್ಲಿಸಿದ್ದರೂ ಅನುಮೋದನೆಯಾಗಲಿಲ್ಲ. ಚುನಾವಣೆ ಪೂರ್ವ, ಚಿತ್ರದುರ್ಗದಲ್ಲಿ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಕಾಂಗ್ರೆಸ್, ಸದಾಶಿವ ಆಯೋಗ ವರದಿಯನ್ನು ಪ್ರಣಾಳಿಕೆಯಲ್ಲಿ ಪ್ರಕಟಿಸಿ, ಸರ್ಕಾರ ಅಸ್ತಿತ್ವಕ್ಕೆ ಬಂದ ಪ್ರಥಮ ಅಧಿವೇಶನದಲ್ಲೇ ಅನುಷ್ಠಾನಗೊಳಿಸುವುದಾಗಿ ಭರವಸೆ ನೀಡಿತ್ತು. ಈಗ ಅದನ್ನು ಈಡೇರಿಸಲಿ ಎಂದು ಆಗ್ರಹಿಸಿದರು.
ಮಹಾಒಕ್ಕೂಟದ ಜಿಲ್ಲಾಧ್ಯಕ್ಷ ಎಚ್. ಮಲ್ಲೇಶ್, ಕಾರ್ಯಾಧ್ಯಕ್ಷ ಕುಂದುವಾಡ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಹೆಗ್ಗೆರೆ ರಂಗಪ್ಪ, ಉಪಾಧ್ಯಕ್ಷರಾದ ಬಿ. ದುಗ್ಗಪ್ಪ, ಎಚ್.ಸಿ.ಮಲ್ಲಪ್ಪ, ಸಿ. ಬಸವರಾಜ್, ಸಹ ಕಾರ್ಯದರ್ಶಿ ರಾಘವೇಂದ್ರ ಕಡೇಮನಿ, ಖಜಾಂಚಿ ಪಿ. ತಿಪ್ಪೇರುದ್ರಪ್ಪ, ಎಚ್. ನಿಂಗಪ್ಪ ಇತರರಿದ್ದರು.
-------------