ಜಿಲ್ಲೆ

ಸದಾಶಿವ ಆಯೋಗ ಅನುಷ್ಠಾನಗೊಳಿಸಿ

ಹುಲಸೂರು: ಹಲವು ವರ್ಷದಿಂದ ನನೆಗುದಿಗೆ ಬಿದ್ದಿರುವ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಶೀಘ್ರ ಅನುಷ್ಠಾನ ಮಾಡಿ, ಪರಿಶಿಷ್ಟ ಜಾತಿ ಒಳಮೀಸಲಾತಿ ಜಾರಿಗೆ ತರಬೇಕು ಎಂದು ಆದಿಜಾಂಬವ ಸಂಘದ ಜಿಲ್ಲಾಧ್ಯಕ್ಷ ರಾಜು ಕಡ್ಯಾಳ ಒತ್ತಾಯಿಸಿದರು.
ಪಟ್ಟಣದಲ್ಲಿ ಆದಿಜಾಂಬವ ಸಂಘದಿಂದ ನ್ಯಾ.ಎ.ಜೆ. ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ ಆಗ್ರಹಿಸಿ ಶುಕ್ರವಾರ ಹಮ್ಮಿಕೊಂಡ ಪ್ರತಿಭಟನಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಆಯೋಗ ರಚನೆ ಆದಾಗಿನಿಂದ ಎಲ್ಲ ಸರ್ಕಾರಗಳು ನಮ್ಮ ಸಮಾಜಕ್ಕೆ ಅನ್ಯಾಯ ಮಾಡುತ್ತಿವೆ. ಚುನಾವಣೆ ಬಂದರೆ ಮಾತ್ರ ಭರವಸೆ ನೀಡುವ ಜನಪ್ರತಿನಿಧಿಗಳು ನಂತರ ಯಾವುದೇ ಕೆಲಸ ಮಾಡುತ್ತಿಲ್ಲ ಎಂದು ಅಳಲು ತೋಡಿಕೊಂಡರು.
ಆಯೋಗ ಅನುಷ್ಠಾನಕ್ಕೆ ವಿವಿಧ ರೀತಿಯ ಹೋರಾಟ ಮಾಡಿದರೂ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಶೀಘ್ರದಲ್ಲಿ ಸದಾಶಿವ ಆಯೋಗ ಅನುಷ್ಠಾನ ಆಗದಿದ್ದರೆ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಂಘದ ಜಿಲ್ಲಾ ಯುವ ಅಧ್ಯಕ್ಷ ಸಂಜುಕುಮಾರ ಬೇಂದ್ರೆ ಮಾತನಾಡಿ, ರಾಜಕೀಯ ನಾಯಕರ ಇಚ್ಛಾ ಶಕ್ತಿ ಕೊರತೆಯಿಂದ ಅಯೋಗ ಅನುಷ್ಠಾನ ಆಗುತ್ತಿಲ್ಲ. ಚುನಾವಣೆ ಬಂದರೆ ಮಾತ್ರ ವಿವಿಧ ಪಕ್ಷದ ನಾಯಕರು ಸದಾಶಿವ ಆಯೋಗ ಅನುಷ್ಠಾನ ಮಾಡುತ್ತೇವೆ ಎಂದು ಆಶ್ವಾಸನೆ ನೀಡುತ್ತಾರೆ. ನಂತರ ಮರೆಯುತ್ತಿದ್ದಾರೆ ಎಂದು ಆರೋಪಿಸಿದರು. ಆದಿಜಾಂಬವ ಸಂಘದ ಬಸವಕಲ್ಯಾಣ ತಾಲೂಕು ಘಟಕದ ಅಧ್ಯಕ್ಷ ಯುವರಾಜ ಭಂಡೆ ಮುಖ್ಯಮಂತ್ರಿ ಅವರಿಗೆ ಬರೆದ ಪತ್ರವನ್ನು ಉಪತಹಸಿಲ್ದಾರ್ ಸಂಜುಕುಮಾರ ಭೈರೆ ಅವರಿಗೆ ಸಲ್ಲಿಸಿದ್ದರು.