module:1facing:0; hw-remosaic: 0; touch: (-1.0, -1.0); modeInfo: ; sceneMode: Night; cct_value: 0; AI_Scene: (-1, -1); aec_lux: 53.0; hist255: 0.0; hist252~255: 0.0; hist0~15: 0.0; 
ಜಿಲ್ಲೆ

ಸದಾ ವಿದ್ಯಾರ್ಥಿಯಾಗಿ ಬೋಧನೆಯಲ್ಲಿ ತೊಡಗಿ

ಅರಸೀಕೆರೆ: ಸೇವಾನಿರತ ಶಿಕ್ಷಕ ಸದಾ ವಿದ್ಯಾರ್ಥಿ ಎನ್ನುವ ಅಂಶ ಮನಗಂಡು ಬೋಧನೆಯಲ್ಲಿ ತೊಡಗಿಸಿಕೊಂಡರೆ ಮಾತ್ರವೇ ಯಶಸ್ಸು ಗಳಿಸಲು ಸಾಧ್ಯ ಎಂದು ಯಳನಡು ಜ್ಞಾನಪ್ರಭು ಶ್ರೀಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.

ನಗರದ ವಿವೇಕಾನಂದ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ನಿವೃತ್ತ ಪ್ರಾಧ್ಯಾಪಕ ಪ್ರೊ.ಎಸ್.ಜಿ.ಚಂದ್ರೇಗೌಡ ರಚಿಸಿರುವ ಅಧ್ಯಾಪನ ಫಲ ಕೃತಿ ಬಿಡುಗಡೆ ನಿಮಿತ್ತ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇಶದ ಭವಿಷ್ಯ ಶಾಲೆ ಕಾಲೇಜುಗಳಲ್ಲಿ ನಿರ್ಮಾಣವಾಗಲಿದೆ ಎಂದು ಅನೇಕ ದಾರ್ಶನಿಕರು, ಶಿಕ್ಷಣ ತಜ್ಞರು ಹೇಳಿರುವುದು ಅತ್ಯಂತ ಅರ್ಥಪೂರ್ಣವಾಗಿದೆ. ವಿವೇಕಾನಂದ ಬಿ.ಎಡ್.ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಸಹಸ್ರಾರು ವಿದ್ಯಾರ್ಥಿಗಳು ಶಿಕ್ಷಕ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲವರು ನಿವೃತ್ತರಾಗಿದ್ದರೆ, ಮತ್ತೆ ಕೆಲವರು ಸೇವಾ ನಿರತರಾಗಿದ್ದಾರೆ. ಇನ್ನಷ್ಟು ಮಂದಿ ಉನ್ನತಾಧಿಕಾರಿಗಳಾಗಿರುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ. ಶಿಕ್ಷಕ ಸದಾ ವಿದ್ಯಾರ್ಥಿಯೆಂಬ ಮನೋಭಾವ ಹೊಂದಿದ್ದರೆ ಮಾತ್ರವೇ ಅಧ್ಯಾಪನವೆಂಬ ಹೆಸರಿಗೆ ಸಾರ್ಥಕತೆ ಬರಲಿದೆ. ಸುದೀರ್ಘ ಸೇವೆಯ ಬಳಿಕವೂ ಪ್ರೊ.ಎಸ್.ಜಿ.ಚಂದ್ರೇಗೌಡ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದು ಎಲ್ಲರಿಗೂ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ ಎಂದು ಬಣ್ಣಿಸಿದರು.

ಅಧ್ಯಾಪನ ಕೃತಿ ಬಿಡುಗಡೆ ಮಾಡಿದ ವಿಶ್ರಾಂತ ಪ್ರಾಂಶುಪಾಲ ಪ್ರೊ.ಬಿ.ಕೆಂಚವೀರಯ್ಯ ಮಾತನಾಡಿ, ದಶಕಗಳ ಹಿಂದೆ ಆರಂಭಿಸಿದ್ದ ಕಾಲೇಜು ಹೆಮ್ಮರವಾಗಿ ಬೆಳೆದಿದೆ. ನಿರೀಕ್ಷೆಗೂ ಮೀರಿದ ಶಿಕ್ಷಕ ಸಮುದಾಯವನ್ನು ಕೊಡುಗೆಯಾಗಿ ನೀಡಿದೆ ಎಂದರೆ ಅತಿಶಯೋಕ್ತಿ ಎನಿಸಲಾರದು. ಪ್ರಾಧ್ಯಾಪಕರ ಅವಿರತ ಪರಿಶ್ರಮದಿಂದ ಎಲ್ಲವೂ ಸಾಧ್ಯವಾಗಿದೆ. ಎಲ್ಲರೂ ಒಟ್ಟಾಗಿ ಕಾಲೇಜಿನ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು ಎಂದು ಕಿವಿಮಾತು ಹೇಳಿದರು.

ಲೇಖಕ ಹಾಗೂ ನಿವೃತ್ತ ಪ್ರಾಧ್ಯಾಪಕ ಪ್ರೊ.ಎಸ್.ಜಿ.ಚಂದ್ರೇಗೌಡ ಮಾತನಾಡಿ, ಜೀವನ ಎನ್ನುವ ಮೂರಕ್ಷರದಲ್ಲಿ ಎಲ್ಲವೂ ಅಡಗಿದೆ ಎಂಬುದನ್ನು ಹೇಳಿಕೊಡುವುದೇ ನಿಜವಾದ ಅಧ್ಯಾಪನವಾಗಿದೆ. ಗಂಡ ಗದ್ಯವಾದರೆ, ಹೆಂಡತಿ ಪದ್ಯ ಇಬ್ಬರಿಗೂ ಜನಿಸಿದ ಮಕ್ಕಳು ರಗಳೆ ಎನ್ನುವ ಮೂಲಕ ಬೋಧನೆ ಔಚಿತ್ಯವನ್ನು ಹಾಸ್ಯದ ಮೂಲಕವೇ ವಿವರಿಸಿದರು. ನಿವೃತ್ತ ಪ್ರಾಂಶುಪಾಲ ಪ್ರೊ.ಕಪನೇಗೌಡ ಹಾಗೂ ನಿವೃತ್ತ ಪ್ರಾಧ್ಯಾಪಕ ಪ್ರೊ.ಶ್ರೀವಾಸ್ತವ ಅಧ್ಯಾಪನ ಫಲ ಕೃತಿಯನ್ನು ಸೂಕ್ತ ನಿದರ್ಶನ ಸಹಿತ ವಿಮರ್ಶಿಸಿದರು. ಪ್ರಾಂಶುಪಾಲ ಡಾ.ಮಲ್ಲಿಕಾರ್ಜುನ ಕುಡುವಕ್ಕಲಗಿ ಮಾತನಾಡಿದರು.

ಆಯೋಜಕ ಎಂ.ಜಿ.ಸಿದ್ದರಾಮಯ್ಯ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಅನಿಸಿಕೆ ಹಂಚಿಕೊಂಡರು. ಡಾ.ಬಸವರಾಜ್, ಶೇಖರ್, ವಿಜಯಕುಮಾರ್, ಬಿ.ಆರ್.ಶಶಿಧರ್, ಅರುಣ್‌ಕುಮಾರ್, ರೇಖಾ ಸೇರಿದಂತೆ ಪ್ರಶಿಕ್ಷಣಾರ್ಥಿಗಳು ಹಾಜರಿದ್ದರು.