ಭಟ್ಕಳ: ಪುರಸಭೆಯ ವಿವಿಧ ಕಾಮಗಾರಿಗಳ ಬಿಲ್ ಪಾವತಿ ವಿಚಾರಕ್ಕೆ ಸಂಬಂಧಿಸಿದಂತೆ ಸದಸ್ಯರು ಹಾಗೂ ಅಧ್ಯಕ್ಷರ ಮಧ್ಯೆ ಮಂಗಳವಾರ ಜಟಾಪಟಿ ನಡೆಯಿತು.
ಪುರಸಭೆ ಅಧ್ಯಕ್ಷ ಪರ್ವೆಜ್ ಕಾಶೀಂಜಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಉಪಾಧ್ಯಕ್ಷ ಮಹ್ಮದ್ ಕೈಸರ್ ‘ಸದಸ್ಯರ ಗಮನಕ್ಕೆ ತರದೆ ಹಲವು ಕಾಮಗಾರಿಗಳ ಬಿಲ್ ಪಾವತಿಸಲಾಗುತ್ತಿದೆ. ಮುಖ್ಯ ರಸ್ತೆಯಲ್ಲಿ ನಿರ್ವಣವಾದ ಗಾರ್ಡನ್ ಕಾಮಗಾರಿ ಅಪೂರ್ಣಗೊಂಡಿದೆ. ಕಳೆದ ಬಾರಿ ಹೂಳೆತ್ತಿದ್ದ ಗುತ್ತಿಗೆದಾರನಿಗೆ ಬಿಲ್ ಪಾವತಿ ಮಾಡದಂತೆ ತಿಳಿಸಲಾಗಿತ್ತು. ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ನಿರ್ವಣವಾದ ತ್ಯಾಜ್ಯಗುಂಡಿ ಕಾಮಗಾರಿ ಬಗ್ಗೆ ಸದಸ್ಯರಿಗೆ ಪೂರ್ಣ ಮಾಹಿತಿ ಇಲ್ಲ. ಹೀಗಿದ್ದರೂ ಸದಸ್ಯರ ಗಮನಕ್ಕೆ ತರದೆ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡಲಾಗಿದೆ’ ಎಂದು ಆರೋಪಿಸಿದರು. ಇದಕ್ಕ ಪ್ರತಿಕ್ರಿಯಿಸಿದ ಅಧ್ಯಕ್ಷ ಪರ್ವೆಜ್ ಕಾಶೀಂಜಿ ‘ಈ ಎಲ್ಲ ಕಾಮಗಾರಿಗಳನ್ನು ಪರಿಶೀಲನೆ ಮಾಡಲು ಇಚ್ಛಿಸುವ ಸದಸ್ಯರಿಗೆ ಪೂರ್ಣ ಮಾಹಿತಿ ನೀಡಲಾಗುತ್ತದೆ. ಅವಶ್ಯ ಇದಲ್ಲಿ ಸ್ಥಳ ಪರಶೀಲನೆ ನಡೆಸಿ ಕಾಮಗಾರಿಯ ವಿವರಣೆ ನೀಡಲಾಗುತ್ತದೆ’ ಎಂದರು.
ಫಾಸ್ಕಲ್ ಗೋಮ್ಸ ಮಾತನಾಡಿ, ಪುರಸಭೆಯ ಜೆಸಿಬಿ ಖಾಸಗಿ ಮಾಲೀಕರ ಜಮೀನಿನಲ್ಲಿ ಕೆಲಸ ಮಾಡುತ್ತಿದೆ ಎಂದು ದೂರಿದರು. ಅಧ್ಯಕ್ಷ ಪರ್ವೆಜ್ ಮಾತನಾಡಿ ‘ಈ ಬಗ್ಗೆ ಪುರಾವೆ ಇದ್ದರೆ ತೋರಿಸಿ ಸಮಿತಿ ರಚಿಸಿ ತನಿಖೆ ನಡೆಸಲಾಗುತ್ತದೆ’ ಎಂದರು.
ಜಿಲ್ಲಾ ನಗರಾಭಿವೃದ್ಧಿ ಕೋಶಕ್ಕೆ ಕಂಪ್ಯೂಟರ್ ನೀಡುವಂತೆ ಜಿಲ್ಲಾಧಿಕಾರಿಗಳಿಂದ ಬಂದ ಪತ್ರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರು, ಈ ಹಿಂದೆ ಪಟ್ಟಣಕ್ಕೆ ಸಿಸಿ ಕ್ಯಾಮರಾ ಅಳವಡಿಸಲು 28 ಲಕ್ಷ ರೂ. ನೀಡಿದ್ದೆವು. ಆದರೆ, ಇಂದು ಅದು ನಿರ್ವಹಣೆ ಇಲ್ಲದೆ ಕೆಟ್ಟು ನಿಂತಿದೆ. ಈಗ ಪುನಃ ನಮ್ಮಿಂದ ಯಾವುದೇ ಉಪಕರಣ ಬೇರೆ ಇಲಾಖೆಗೆ ನೀಡುವುದು ಬೇಡ ಎಂದರು.
ಹಣ ವಸೂಲಿ ತಡೆಗೆ ಕ್ರಮ ಕೈಗೊಳ್ಳಿ: ಹಳೇಬಸ್ ನಿಲ್ದಾಣದಲ್ಲಿರುವ ಮೀನು ಮಾರುಕಟ್ಟೆಯಲ್ಲಿ ಅನಧಿಕೃತವಾಗಿ ಫೀ ವಸೂಲಿ ಮಾಡುತ್ತಿರುವ ಗುತ್ತಿಗೆದಾರನ ಕಾರ್ಯಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ಅಜೀಂ, ಗುತ್ತಿಗೆದಾರನನ್ನು ಬ್ಲಾಕ್ ಲಿಸ್ಟ್ಗೆ ಸೇರಿಸಬೇಕು ಎಂದು ಆಗ್ರಹಿಸಿದರು. ಅದಕ್ಕೆ ಧ್ವನಿಗೂಡಿಸಿದ ಉಪಾಧ್ಯಕ್ಷ ಕೈಸರ್, ಮೀನು ಮಾರಾಟಗಾರರು ಫೀ ನೀಡದಂತೆ ಮೀನು ಮಾರುಕಟ್ಟೆ ಹೊರಗಡೆ ಬೋರ್ಡ್ ಹಾಕಬೇಕು ಎಂದರು. ರಸ್ತೆ ದೀಪಗಳನ್ನು ಸರಿಯಾಗಿ ನಿರ್ವಹಣೆ ಮಾಡದ ಗುತ್ತಿಗೆದಾರನ ನಿರ್ವಹಣೆ ಟೆಂಡರ್ ಅನ್ನು ರದ್ದುಪಡಿಸಬೇಕು ಎಂದು ಕೆಲ ಸದಸ್ಯರು ಸಭೆಯಲ್ಲಿ ಆಗ್ರಹಿಸಿದರು. ಚೌಥನಿಯಲ್ಲಿ ರಸ್ತೆ ಬದಿಯಲ್ಲಿ ಕುಳಿತು ಮೀನು ವ್ಯಾಪಾರ ಮಾಡದಂತೆ ನಿರ್ಬಂಧ ವಿಧಿಸುವಂತೆ ಸದಸ್ಯ ಕೃಷ್ಣಾನಂದ ಪೈ ಆಗ್ರಹಿಸಿದರು.