ಜಿಲ್ಲೆ

ಸದಸ್ಯತ್ವ ಅನರ್ಹತೆಯಿಂದ ಪಾರು:ಚಿಕ್ಕಬಳ್ಳಾಪುರ ನಗರಸಭೆಯ 7 ಕಾಂಗ್ರೆಸ್ ಸದಸ್ಯರು ನಿರಾಳ

ಚಿಕ್ಕಬಳ್ಳಾಪುರ: ಅಧಿಕಾರ ಕಳೆದುಕೊಳ್ಳುವ ಭೀತಿಯಲ್ಲಿದ್ದ ನಗರಸಭೆ 7 ಕಾಂಗ್ರೆಸ್ ಸದಸ್ಯರು ಅನರ್ಹತೆಯ ಅರ್ಜಿ ವಜಾದಿಂದ ನಿರಾಳರಾಗಿದ್ದಾರೆ. ಇದರ ನಡುವೆ ಸ್ವಪಕ್ಷೀಯ ಹೈಕಮಾಂಡ್ ಹೈ ಕೋರ್ಟ್ ಮೆಟ್ಟಿಲೇರುವ ನಿರ್ಧಾರ ಘೋಷಣೆಯಿಂದ ಮತ್ತೆ ತಲೆನೋವು ಮುಂದುವರಿದಿದ್ದರೂ ಮತ್ತಷ್ಟು ತಿಂಗಳು ಸದಸ್ಯತ್ವ ಉಳಿಯುವ ಖಾತ್ರಿ ಸ್ಪಷ್ಟವಾಗಿದೆ.

ನಗರಸಭೆಯಲ್ಲಿ ಈ ಹಿಂದೆ ಬಹುತೇಕ ಚುನಾವಣೆಗಳಲ್ಲಿ ಅಡ್ಡ ಮತದಾನ ನಡೆದಿದೆ. ಆದರೆ, ಇದೇ ಮೊದಲ ಬಾರಿಗೆ ವಿಪ್ ಉಲ್ಲಂಘನೆ ಪ್ರಕರಣವು ಗಂಭೀರತೆ ಪಡೆದು, ನ್ಯಾಯಾಲಯದ ಮೆಟ್ಟಿಲೇರಿದ್ದು ಎಲ್ಲ ಬೆಳವಣಿಗೆಗಳು ಸದಸ್ಯರ ಆತಂಕಕ್ಕೆ ಕಾರಣವಾಗಿದ್ದವು. ಮೊದಲು ಹಿಂದಿನ ಹಲವು ಪ್ರಕರಣಗಳಂತೆ ಈ ಬಾರಿಯೂ ಏನು ನಡೆಯುವುದಿಲ್ಲ ಎಂಬುದಾಗಿ ಭಾವಿಸಿದ್ದವರಿಗೆ ಅನರ್ಹತೆ ತೂಗು ಕತ್ತಿ ಆಘಾತ ಮೂಡಿಸಿದ್ದು, ಸಮರ್ಥನೆ, ರಾಜೀ ಸಂಧಾನದ ಮೂಲಕ ಪಾರಾಗುವ ಕಸರತ್ತು ನಡೆಸಲಾಗಿತ್ತು. ನಾಯಕರ ಎದುರು ಚುನಾವಣೆ ಸಂದರ್ಭದಲ್ಲಿ ಪರಿಸ್ಥಿತಿ ಹೇಳಿಕೊಂಡು ಸಮಸ್ಯೆ ಸರಿಪಡಿಸಿಕೊಳ್ಳಲು ಯತ್ನಿಸಲಾಗಿತ್ತು. ಆದರೆ, ಚುನಾವಣೆಯಲ್ಲಿ ಸ್ವಪಕ್ಷೀಯ ಅಭ್ಯರ್ಥಿಯ ಸೋಲಿಗೆ ಕಾರಣವಾದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಪಕ್ಷದ ನಾಯಕರ ತೀವ್ರ ಒತ್ತಡದ ಹಿನ್ನೆಲೆಯಲ್ಲಿ ಪ್ರಕರಣವು ನ್ಯಾಯಾಲಯದ ಮೆಟ್ಟಿಲೇರಿತ್ತು.

ಪಕ್ಷದ ನಿಯಮಾನುಸಾರ ವಿಪ್ ಹೊರಡಿಸಲಾಗಿದೆ. ಆದರೂ ಧಿಕ್ಕರಿಸಿ ದುರುದ್ದೇಶದಿಂದ ಎದುರಾಳಿ ಅಭ್ಯರ್ಥಿಯ ಗೆಲುವಿಗಾಗಿ ಸದಸ್ಯರು ದೂರ ಉಳಿಯುವಿಕೆ ಮತ್ತು ಚುನಾವಣೆಯಲ್ಲಿ ಅಡ್ಡ ಮತದಾನದ ತಂತ್ರ ಅನುಸರಿಸಿದ್ದಾರೆ. ಇದಕ್ಕೆ ಪಕ್ಷ ವಿರೋಧಿ ಚಟುವಟಿಕೆಯ ಸದಸ್ಯರನ್ನು ಅನರ್ಹಗೊಳಿಸಲು ಜಿಲ್ಲಾ ಚುನಾವಣಾಧಿಕಾರಿ ಆರ್.ಲತಾಗೆ ಕಾಂಗ್ರೆಸ್ ಅರ್ಜಿ ಸಲ್ಲಿಸಿತ್ತು. ಮತ್ತೊಂದೆಡೆ ಆರೋಪಿ ಸದಸ್ಯರು, ವಿಪ್ ಹೊರಡಿಸಿದವರ ಅಧಿಕಾರದ ಹಕ್ಕನ್ನು ಪ್ರಶ್ನಿಸಿದ್ದಲ್ಲದೆ ಸಮರ್ಪಕವಾಗಿ ನಿಯಮವನ್ನೂ ಪಾಲಿಸಿಲ್ಲ ಎಂಬುದಾಗಿ ವಾದ ಮಂಡಿಸಿದ್ದರು. ಇದರ ನಡುವೆ ಮೊದಲು ದೂರು ಸಲ್ಲಿಕೆಯ ಪ್ರಾರಂಭದಲ್ಲಿಯೇ ತೀರ್ಪು ಹೊರ ಬಂದು ಚುನಾವಣೆಯಿಂದ ದೂರ ಉಳಿದ ಸದಸ್ಯರು ಅನರ್ಹಗೊಳ್ಳುತ್ತಾರೆ ಎಂಬ ಮಾತುಗಳೇ ಕೇಳಿ ಬಂದಿದ್ದವು. ಆದರೆ, ಇದೀಗ ವಿಚಾರಣೆ ಮುಗಿದು ಎಲ್ಲ ಲೆಕ್ಕಾಚಾರಗಳು ಉಲ್ಟಾ ಆಗಿದ್ದು, ಶಕೀಲಾ ಭಾನು (2ನೇ ವಾರ್ಡ್), ರತ್ನಮ್ಮ (3ನೇ ವಾರ್ಡ್), ಸ್ವಾತಿ ಮಂಜುನಾಥ್ (25ನೇ ವಾರ್ಡ್), ಎಸ್.ಎಂ.ರಫೀಕ್ (17ನೇ ವಾರ್ಡ್), ಅಫ್ಜಲ್ (21ನೇ ವಾರ್ಡ್), ಚಂದ್ರಶೇಖರ್ (28ನೇ ವಾರ್ಡ್), ಮೀನಾಕ್ಷಿ (30ನೇ ವಾರ್ಡ್) ಸೇರಿ 7 ಸದಸ್ಯರು ಸದ್ಯ ಅನರ್ಹತೆಯಿಂದ ಪಾರಾಗಿದ್ದಾರೆ.

ಹಲವು ಆರೋಪಗಳನ್ನು ಹೊರಿಸಿ, ಅನರ್ಹಗೊಳಿಸಲು ಮನವಿ ಸಲ್ಲಿಸಿ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸಲ್ಲಿಕೆಯಾದ ಪ್ರಕರಣದಲ್ಲಿ ಸಮರ್ಥವಾಗಿ ಸಾಕ್ಷಿ ಸಮೇತ ವಾದ ಮಂಡಿಸಲಾಗಿದೆ. ಇದರಿಂದ ನಮಗೆ ನ್ಯಾಯ ಸಿಕ್ಕಿದೆ. ಎಸ್.ಎಂ.ರಫೀಕ್, ನಗರಸಭಾ ಸದಸ್ಯ **** ಅನಾರೋಗ್ಯದ ಹಿನ್ನೆಲೆಯಲ್ಲಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಯಾರ ಪರವಾಗಿಯೂ ಮತ ಚಲಾಯಿಸಲಿಲ್ಲ. ಇದರ ಅರಿವಿದ್ದರೂ ನನ್ನ ಸದಸ್ಯತ್ವ ಅನರ್ಹಗೊಳಿಸಬೇಕೆಂಬ ಅರ್ಜಿ ಸಲ್ಲಿಕೆಯಾಯಿತು. ಇದೀಗ ವಿಚಾರಣೆ ಮುಗಿದು ನ್ಯಾಯ ಸಿಕ್ಕಿರುವುದು ಖುಷಿ ತಂದಿದೆ.