ಜಿಲ್ಲೆ

ಸದನದಲ್ಲಿ ಕಂದಾಯ ಗ್ರಾಮದ ಗೊಂದಲ ಪ್ರಸ್ತಾಪ

ಯಳಂದೂರು: ತಾಲೂಕಿನ ಬಿಳಿಗಿರಿರಂಗನಬೆಟ್ಟದ ಕಂದಾಯ ಗ್ರಾಮದ ಗೊಂದಲದ ಸಮಸ್ಯೆಯನ್ನು ಬಗ್ಗೆಹರಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಉನ್ನತ ಮಟ್ಟದ ಅಧಿಕಾರಿಗಳ ಜತೆಗೆ ಮಾಹಿತಿ ಪಡೆದುಕೊಂಡು, ಮುಂದಿನ ಸದನ ಕಲಾಪದಲ್ಲಿ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗುವುದು ಹಾಗೂ ಬಿಳಿಗಿರಿರಂಗನಬೆಟ್ಟದ ದೇಗುಲ ಸಮಗ್ರ ಅಭಿವೃದ್ಧಿ ಕೆಲಸವನ್ನು ಮಾಡುವುದಾಗಿ ಶಾಸಕ ಎ.ಆರ್.ಕೃಷ್ಣಮೂರ್ತಿ ಭರವಸೆ ನೀಡಿದರು.


ಅವರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದ ದೇಗುಲಕ್ಕೆ ಶನಿವಾರ ಭೇಟಿ ನೀಡಿ ಮಾತನಾಡಿ, 1960ರ ದಶಕದಲ್ಲಿ ಅರಣ್ಯ ಹಾಗೂ ಕಂದಾಯ ಮಂತ್ರಿಯಾಗಿದ್ದ ಬಿ.ರಾಚಯ್ಯ ಅವರು ರೈತರಿಗೆ ಸಾಗುವಳಿ ಮಾಡಲು ಅರಣ್ಯ ಭೂಮಿಯನ್ನು ಕಂದಾಯ ಭೂಮಿಯಾಗಿ ಪರಿವರ್ತಿಸಿ ರೈತರಿಗೆ ಹಂಚಿದರು. ಆದರೆ ಆ ಜಾಗವನ್ನು ಪಡೆದ ರೈತರು ವ್ಯವಸಾಯವನ್ನು ಮಾಡದೆ ಪಾಳುಬಿಟ್ಟಿ ಪರಿಣಾಮ ಗಿಡಮರಗಳು ಬೆಳೆದು ಮತ್ತೆ ಕಾಡಾಗಿ ಪರಿವರ್ತನೆಯಾದ ಪರಿಣಾಮ ಅರಣ್ಯ ಇಲಾಖೆ ಆ ಜಾಗಗಳನ್ನು ವಶಪಡಿಸಿಕೊಂಡಿದೆ. ಇದರಿಂದ ಸಾಗುವಳಿಗಾಗಿ ಜಮೀನು ಪಡೆದುಕೊಂಡಿದ್ದ ರೈತರಿಗೆ ತೊಂದರೆಯಾಗುತ್ತಿದ್ದು, ಈ ಬಗ್ಗೆ ಹಿಂದಿನ ನಕ್ಷೆಯ ಆಧಾರ ಮೇಲೆ ಕಂದಾಯ ಹಾಗೂ ಅರಣ್ಯ ಇಲಾಖೆಯಿಂದ ಜಂಟಿ ಸರ್ವೇ ಮಾಡಿಸಿ, ಗಡಿ ಗುರುತಿಸುವ ಬಗ್ಗೆ ಸದನದಲ್ಲಿ ಪ್ರಸ್ತಾಪಿಸುವುದಾಗಿ ಭರವಸೆ ನೀಡಿದರು.


ವಿಶೇಷ ಪೂಜೆ ಸಲ್ಲಿಕೆ: ತಮ್ಮ ಗೆಲುವಿಗಾಗಿ ಹರಕೆ ಹೊತ್ತಿದ್ದ ಹಿನ್ನೆಲೆಯಲ್ಲಿ ಶಾಸಕ ಎ.ಆರ್. ಕೃಷ್ಣಮೂರ್ತಿ ಅವರು ಶನಿವಾರ ತಮ್ಮ ಬೆಂಬಲಿಗರ ಜತೆ ಬಿಳಿಗಿರಿರಂಗನಬೆಟ್ಟದ ಶ್ರೀ ಬಿಳಿಗಿರಿರಂಗನಾಥಸ್ವಾಮಿ ಹಾಗೂ ಅಲಮೇಲಮ್ಮ ದೇಗುಲಕ್ಕೆ ಭೇಟಿ ನೀಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಹರಕೆ ತೀರಿಸಿದರು. ಜತೆಗೆ ದೇವಾಲಯದ ವತಿಯಿಂದ ನೂತನ ಶಾಸಕರಿಗೆ ಶಾಲು, ಪೇಟ ತೊಡಿಸಿ, ಫಲ, ತಾಂಬೂಲ ನೀಡಿ ಗೌರವಿಸಲಾಯಿತು.


ಜಿ.ಪಂ. ಮಾಜಿ ಉಪಾಧ್ಯಕ್ಷೆ ಕೇತಮ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೊಂಗನೂರು ಚಂದ್ರು, ಪ್ರಧಾನ ಕಾರ್ಯದರ್ಶಿ ಯರಿಯೂರು ಪ್ರಕಾಶ್, ಮುಖಂಡರಾದ ವೆಂಕಟೇಶ್, ಕೃಷ್ಣಪುರ ದೇವರಾಜು, ಬೂದಿತಿಟ್ಟು ಸತೀಶ್, ಬಡಗಲಮೋಳೆ ಚೇತನ್, ಕೆಸ್ತೂರು ಗುರು, ಹೊಂಗನೂರು ಚೇತನ್, ನಂಜುಂಡಸ್ವಾಮಿ, ರಾಘವೇಂದ್ರ ಹಾಲಿನ ಮಹದೇವಶೆಟ್ಟಿ, ವಿಶ್ವ, ರವಿ, ದೇಗುಲದ ಇಒ ಮೋಹನ್ ಕುಮಾರ್, ದೇಗುಲದ ಸಿಬ್ಬಂದಿಗಳಾದ ರಾಜಣ್ಣ, ಶೇಷಾದ್ರಿ, ಪೊಲೀಸ್ ಸಿಬ್ಬಂದಿ ಸೇರಿದಂತೆ ಇತರರಿದ್ದರು.